Advertisement

ಪುತ್ತೂರು ಬಿಜೆಪಿ ಟಿಕೆಟ್‌ ತಪ್ಪಿದ ಹಿನ್ನೆಲೆ; ಇಂದು ಅರುಣ್ ಪುತ್ತಿಲ ಬೆಂಬಲಿಗರ ತುರ್ತು ಸಭೆ

10:57 AM Apr 12, 2023 | Team Udayavani |

ಪುತ್ತೂರು: ಜಿಲ್ಲೆಯ ಪ್ರಭಾವಿ ಹಿಂದೂ ಸಂಘಟನೆಯ ಮುಂದಾಳು ಅರುಣ್ ಕುಮಾರ್ ಪುತ್ತಿಲ ಅವರಿಗೆ ಪುತ್ತೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ ಎ.12 ರಂದು ಸಂಜೆ 6 ಗಂಟೆಗೆ ಕೋಟೆಚಾ ಸಭಾಂಗಣದಲ್ಲಿ ಬೆಂಬಲಿಗರ ನೇತೃತ್ವದಲ್ಲಿ ತುರ್ತು ಸಭೆ ನಡೆಯಲಿದೆ.

Advertisement

ಕಳೆದ ಎರಡು ಅವಧಿಯಲ್ಲಿ ಅರುಣ್ ಅವರ ಹೆಸರು ಅಭ್ಯರ್ಥಿತನಕ್ಕೆ ಕೇಳಿ ಬಂದಿದ್ದರೂ ಅವಕಾಶ ಸಿಕ್ಕಿರಲಿಲ್ಲ. ಆದರೆ ಈ ಬಾರಿ ಅವರಿಗೆ ಅವಕಾಶ ನೀಡುವಂತೆ ಸಂಘ ಪರಿವಾರದ ಒಂದು ತಂಡ ತೀವ್ರ ಒತ್ತಡ ಹೇರಿತ್ತು.

ಅಭ್ಯರ್ಥಿಯಾಗಿ ಆಯ್ಕೆ ಮಾಡುವಂತೆ ಅವರ ಬೆಂಬಲಿಗರು ಟ್ವಿಟರ್ ಅಭಿಯಾನದ ಮೂಲಕ ನರೇಂದ್ರ ಮೋದಿ, ಅಮಿತ್ ಶಾ ಅವರ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದರು. ಬಿಜೆಪಿಯ ಸರ್ವೇ ಕಾರ್ಯದಲ್ಲಿ ಕೇಳಿ ಬಂದಿದ್ದ ಆಕಾಂಕ್ಷಿತರ ಪಟ್ಟಿಯಲ್ಲಿ ಅರುಣ್ ಹೆಸರು ಕೂಡ ಇತ್ತು ಎನ್ನಲಾಗಿದ್ದು ಹೀಗಾಗಿ ಈ ಬಾರಿ ಅರುಣ್ ಅವರಿಗೆ ಟಿಕೇಟ್ ಸಿಗುವ ನಿರೀಕ್ಷೆಯನ್ನು ಬೆಂಬಲಿಗರು ಹೊಂದಿದ್ದರು.

ಅಣಬೆ ಪದ : ಮತ್ತಷ್ಟು ಬೆಂಬಲ
ಅಮಿತ್ ಶಾ ಅವರು ಪುತ್ತೂರು ಭೇಟಿ ವೇಳೆ ಅರುಣ್ ಕುಮಾರ್ ಪುತ್ತಿಲ ಅವರ ಬೆಂಬಲಿಗರು ಅಳವಡಿಸಿದ ಬ್ಯಾನರ್ ಕುರಿತಂತೆ ಶಾಸಕ ಸಂಜೀವ ಮಠಂದೂರು ಅವರು ಆಡಿದರೆನ್ನೆಲಾದ ಪದ ಅರುಣ್ ಪುತ್ತಿಲ ಅವರನ್ನು ಉದ್ದೇಶಿಸಿಯೇ ಹೇಳಿದಾಗಿತ್ತು ಎಂಬ ವಿಚಾರ ತೀವ್ರ ಗೊಂದಲ ಸೃಷ್ಟಿಸಿತು. ಇದು ಅರುಣ್ ಪರವಾಗಿಯು ಅನುಕಂಪದ ವಾತಾವರಣ ಸೃಷ್ಟಿಸಿತು. ಈ ಬೆಳವಣಿಗೆಗಳಿಂದ ಅರುಣ್ ಹೆಸರು ಈ ಬಾರಿಯು ಮುನ್ನಲೆಗೆ ಬಂದಿತ್ತು.

ಪಕ್ಷೇತರ ಸ್ಪರ್ದೆಗೆ ಒತ್ತಡ:
ಎ.11 ರಂದು ರಾತ್ರಿ ಪ್ರಕಟವಾದ ಬಿಜೆಪಿ ಅಭ್ಯರ್ಥಿ ಪಟ್ಟಿಯಲ್ಲಿ ಅರುಣ್ ಪುತ್ತಿಲ ಹೆಸರಿಲ್ಲದ ಹಿನ್ನೆಲೆಯಲ್ಲಿ ಅರುಣ್ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಪಕ್ಷೇತರರಾಗಿ ಕಣಕ್ಕಿಳಿಯುವಂತೆ ಒತ್ತಡ ಹೇರಲಾಗಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ತುರ್ತು ಸಭೆ ಮಹತ್ವ ಪಡೆದಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next