Advertisement

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

12:42 AM Dec 23, 2024 | Team Udayavani |

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಶ್ವದ 18 ದೇಶಗಳ ಕನ್ನಡ ಪ್ರತಿನಿಧಿಗಳು ಜಾಗತಿಕ ನೆಲೆಗಟ್ಟಿನಲ್ಲಿ ಕನ್ನಡವನ್ನು ಕಟ್ಟುವ ಬಗ್ಗೆ ಚರ್ಚೆ ನಡೆಸಿ ಗಮನ ಸೆಳೆದರು.

Advertisement

ಕಸಾಪ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಹಿತ್ಯ ಸಮ್ಮೇಳನ ಆಯೋಜಿಸಲಿ ಎಂಬ ಹಕ್ಕೊತ್ತಾಯಗಳನ್ನು ಮಂಡಿಸಿದರು.
“ಜಾಗತಿಕ ನೆಲೆಯಲ್ಲಿ ಕನ್ನಡ ಕಟ್ಟುವ ಬಗೆ’ ಗೋಷ್ಠಿಯಲ್ಲಿ ಬಹ್ರೈನ್‌, ಅಮೆರಿಕ, ಕತಾರ್‌, ಇಂಗ್ಲೆಂಡ್‌, ಯುಎಇ ಸೇರಿ 18 ದೇಶಗಳ ಕನ್ನಡ ಪ್ರತಿನಿಧಿಗಳು ಅಭಿಮತಗಳನ್ನು ಹಂಚಿಕೊಂಡರು.

ಮೊದಲು ನಾವು ವಿದೇಶಕ್ಕೆ ಹೋಗುವಾಗ ಉಪ್ಪಿನಕಾಯಿ, ಹಪ್ಪಳ ಒಯ್ಯುತ್ತಿದ್ದೆವು. ಕ್ರಮೇಣ ಕನ್ನಡ ಪುಸ್ತಕ, ಸಂಸ್ಕೃತಿ ಒಯ್ಯಲಾರಂಭಿಸಿದೆವು. ಕಸಾಪ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಹಿತ್ಯ ಸಮ್ಮೇಳನ ಆಯೋಜಿಸಲಿ.
– ಕಿರಣ್‌ ಉಪಾಧ್ಯಾಯ, ಬಹ್ರೈನ್‌

ವಿದೇಶಗಳಲ್ಲಿ 40 ಲಕ್ಷ ಕನ್ನಡಿಗರು ನೆಲೆಸಿದ್ದಾರೆ. ಅನಿವಾಸಿ ಕನ್ನಡಿಗರಾದ ನಾವು ಬಹಳ ಶ್ರಮಜೀವಿಗಳು. ಅಲ್ಲಿ ಕೇವಲ ಕನ್ನಡ ಮಾತನಾಡದೆ, ಕನ್ನಡ ಸಂಘ ಕಟ್ಟಿಕೊಂಡು ಕನ್ನಡ ಭಾಷೆ, ಸಂಸ್ಕೃತಿ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ.
– ಅಮರನಾಥ್‌ ಗೌಡ, ಅಮೆರಿಕ ಪ್ರತಿನಿಧಿ

ಅರಬ್‌ ದೇಶಗಳಲ್ಲಿ ಕನ್ನಡ ಶ್ರಮಿಕರಿಗೆ ವೇತನ ಸರಿಯಾಗಿ ಸಿಗುತ್ತಿಲ್ಲ. ವಸತಿಗಳು ಸುಸ್ಥಿತಿಯಿಲ್ಲ. ಹಾಗಾಗಿ ಬೇರೆ ದೇಶಕ್ಕೆ ಉದ್ಯೋಗಕ್ಕಾಗಿ ಹೋಗುವವರ ದಾಖಲಾತಿ ಆಗಬೇಕು. ಎಲ್ಲ ಕನ್ನಡ ಸಂಸ್ಥೆ, ರಾಜ್ಯ ಸರಕಾರ ಸೇರಿ ವಿದೇಶದಲ್ಲಿರುವ ಕನ್ನಡ ಶ್ರಮಿಕ ವರ್ಗದ ಕಾಳಜಿ ವಹಿಸಬೇಕು.
– ಎಚ್‌.ಕೆ. ಮಧು, ಕತಾರ್‌ ಪ್ರತಿನಿಧಿ

Advertisement

ಶ್ಲಾಘನೀಯ ಸಮ್ಮೇಳನ
ಮಂಡ್ಯದ ಸಮ್ಮೇಳನ ಬಹಳ ಅದ್ಭುತ. ಇದೊಂದು ರೀತಿ ತವರು ಮನೆಗೆ ಬಂದ ಹಾಗಿದೆ. ತವರಿನ ಪ್ರೀತಿ, ಮಮತೆ ಎಲ್ಲ ಸಿಕ್ಕಿದೆ. ವಿಶ್ವ ಕನ್ನಡಿಗರನ್ನೂ ಸಾಹಿತ್ಯ ಸಮ್ಮೇಳನದ ಭಾಗವಾಗಿಸಿರುವುದು ಶ್ಲಾಘನೀಯ.
– ಅಲಮೇಲು ಅಯ್ಯಂಗಾರ್‌, ಕ್ಯಾಲಿಫೋರ್ನಿಯಾ, ಅಮೆರಿಕ (ಸಾಹಿತಿ ಪುತಿನ ಅವರ ಮಗಳು)

ಮಾತಿನಲ್ಲಿ ಹೇಳಲಾಗದು
ಬೇರೆ ದೇಶಗಳ ಕನ್ನಡ ಸಂಘಗಳ ಅಧ್ಯಕ್ಷರು, ಪ್ರತಿನಿಧಿಗಳು ಎಲ್ಲರೂ ಮಂಡ್ಯದಲ್ಲಿ ಸೇರಿದ್ದೇವೆ. ಈ ಖುಷಿಯನ್ನು ಮಾತಿನಲ್ಲಿ ಹೇಳಲಾಗುತ್ತಿಲ್ಲ. ಬೇರೆ ದೇಶಗಳಲ್ಲಿ ಕನ್ನಡ ಕಲಿಕೆಗೆ ಇರುವ ಸಮಸ್ಯೆಗಳ ಬಗ್ಗೆ ಇಲ್ಲಿ ಚರ್ಚೆ ಮಾಡಲು ಅವಕಾಶ ಸಿಕ್ಕಿತು. ಈ ಸಮ್ಮೇಳನ ನೋಡಿ ನಾವು ಕಲಿಯುವುದಿದೆ. ಸಮ್ಮೇಳನ ವೈಭವೋಪೇತವಾಗಿದೆ.
– ಸುನಯನಾ ಗಾಡಗೋಳಿ, ಆಸ್ಟ್ರೇಲಿಯಾ

ಭವ್ಯ ಸಮ್ಮೇಳನ
ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ನನಗೆ ಕನ್ನಡ ಶಾಲೆಗಳ ಬಗ್ಗೆ ವಿಚಾರ ಮಂಡಿಸಲು ಅವಕಾಶ ನೀಡಿದ್ದರು. ಇಷ್ಟು ದೊಡ್ಡ ವೇದಿಕೆ ಸಿಗಲಿದೆ ಎಂದುಕೊಂಡಿರಲಿಲ್ಲ. ಇದು ನಮ್ಮ ಕನ್ನಡ ಕೆಲಸಕ್ಕೆ ಸಿಕ್ಕ ಪ್ರೋತ್ಸಾಹ. ಬಹಳ ಹೆಮ್ಮೆಯಾಗುತ್ತಿದೆ. ಸಮ್ಮೇಳನ ಅತ್ಯಂತ ಭವ್ಯವಾಗಿದೆ.
– ರಶ್ಮಿ ನಾಗರಾಜ್‌, ಜರ್ಮನಿ

Advertisement

Udayavani is now on Telegram. Click here to join our channel and stay updated with the latest news.

Next