Advertisement
ರಾಮಚಂದ್ರ ಅವರು ಸಮಿತಿಯ ತರಕಾರಿ ವ್ಯಾಪಾರಸ್ಥರಿಗೆ ಪದೇಪದೆ ಕಿರುಕುಳ ನೀಡಿರುವ, ತರಕಾರಿ ವಾಹನಗಳ ಒಳಪ್ರವೇಶವನ್ನು ನಿರಾಕರಿಸಿರುವ ಹಾಗೂ ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಪ್ರಾಂಗಣದ ತರಕಾರಿ ವ್ಯಾಪಾರಸ್ಥರು 2023ರ ಜ. 4ರಂದು ಕೃಷಿ ಮಾರಾಟ ಇಲಾಖೆಯ ನಿರ್ದೇಶಕರಿಗೆ ದೂರು ಸಲ್ಲಿಸಿದ್ದರು. ದೂರಿನ ತನಿಖೆಗಾಗಿ ಅಧಿಕಾರಿಗಳ ವಿಶೇಷ ತಂಡವೊಂದನ್ನು ರಚಿಸಲಾಗಿತ್ತು.
ರಾಮಚಂದ್ರ ಅವರನ್ನು 2023ರ ಜ. 16ರಿಂದ ಮುಂದಿನ 2 ತಿಂಗಳ ತನಕ ಅಥವಾ ಮುಂದಿನ ಆದೇಶದ ತನಕ ಕಡ್ಡಾಯ ರಜೆಯ ಮೇಲೆ ತೆರಳುವಂತೆ ಕೃಷಿ ಮಾರಾಟ ಇಲಾಖೆಯ ನಿರ್ದೇಶಕರು ಆದೇಶ ನೀಡಿದ್ದರು. ಇಲಾಖಾ ವಿಚಾರಣೆ ನಡೆಸಲು ಅನುಗುಣವಾಗಿ ರಾಮಚಂದ್ರ ಅವರನ್ನು ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಖಾಲಿ ಇರುವ ಹಿರಿಯ ಮಾರುಕಟ್ಟೆ ಮೇಲ್ವಿಚಾರಕ ಹುದ್ದೆಗೆ ವರ್ಗಾಯಿಸಲಾಗಿತ್ತು. ಇದರ ವಿರುದ್ಧ ರಾಮಚಂದ್ರ ಅವರು ಕರ್ನಾಟಕ ಆಡಳಿತಾತ್ಮಕ ನ್ಯಾಯಾಲಯ(ಕೆಎಟಿ)ಕ್ಕೆ ದೂರು ಸಲ್ಲಿಸಿದ್ದರು. ಕೆಎಟಿ ಅವರ ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದರಿಂದ ಮೇ 2ರಂದು ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ಮೇ 2ರಂದು ಮಧ್ಯಾಹ್ನ ಕರ್ನಾಟಕ ಕೃಷಿ ಮಾರಾಟ ಇಲಾಖೆಯ ನಿರ್ದೇಶಕ ಜಿ.ಎಂ. ಗಂಗಾಧರ ಸ್ವಾಮಿ ಅವರು ಹೊರಡಿಸಿದ ಇಲಾಖಾ ಆದೇಶದಲ್ಲಿ ರಾಮಚಂದ್ರ ತತ್‌ಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಸೂಚಿಸಲಾಗಿದೆ.