Advertisement

ಸೈನಿಕರ ಸೇವೆಗೆ ಜನತೆ ಬೆಂಬಲವಾಗಬೇಕು: ಶಿವಣ್ಣ¡

09:02 AM Feb 16, 2019 | |

ಪುತ್ತೂರು: ತಮ್ಮ ಬದುಕನ್ನೇ ಮುಡಿಪಾಗಿಟ್ಟು ದೇಶದ ರಕ್ಷಣೆ ಮಾಡುವ ಸೈನಿಕರ ಮಹಾನ್‌ ಸೇವಾ ಕಾರ್ಯಕ್ಕೆ ಇಡೀ ದೇಶದ ಜನತೆ ಬೆಂಬಲವಾಗಿ ನಿಲ್ಲಬೇಕು. ಹುತಾತ್ಮರಾದ ಸೈನಿಕರ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಣ್ಣ ಹೇಳಿದರು.

Advertisement

ಜಮ್ಮು-ಕಾಶ್ಮೀರದ ಅವಂತಿಪೋರಾದಲ್ಲಿ ಹುತಾತ್ಮರಾದ ಯೋಧರಿಗೆ ಪುತ್ತೂರು ವಕೀಲರ ಸಂಘದ ವತಿಯಿಂದ ನ್ಯಾಯಾಲಯದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ನ್ಯಾಯವಾದಿ ಎನ್‌.ಕೆ. ಸೂರ್ಯನಾರಾಯಣ ಮಾತನಾಡಿ, ಸೈನಿಕರಂತೆ ದೇಶದ ರಕ್ಷಣೆಯ ಜವಾಬ್ದಾರಿ ಎಲ್ಲರಿಗೂ ಇದೆ. ಉಗ್ರರ ಪೈಶಾಚಿಕ ಕೃತ್ಯಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರಕಾರದ ಮುಂದಿನ ಕ್ರಮದ ಕುರಿತು ಪ್ರಶ್ನಿಸಿ ಪ್ರಧಾನ ಮಂತ್ರಿ ಹಾಗೂ ರಕ್ಷಣಾ ಇಲಾಖೆ ಕಚೇರಿಗೆ ವೈಯಕ್ತಿಕ ನೆಲೆಯಲ್ಲಿ ಸಂದೇಶ ಕಳುಹಿಸಿದ್ದೇನೆ ಎಂದರು.

ವಕೀಲರಿಂದ ಉತ್ತಮ ಸಂದೇಶ
ನ್ಯಾಯವಾದಿ ನರಸಿಂಹ ಪ್ರಸಾದ್‌ ಮಾತನಾಡಿ, ಜಮ್ಮು ಕಾಶ್ಮೀರದಲ್ಲಿ ನಡೆದ ದಾಳಿ ನಮ್ಮ ತಲೆಗೆ ಆದ ದಾಳಿ. ಸೈನಿಕರ ಮನೆಯವರ ಜತೆ ನಾವಿದ್ದೇವೆ ಎಂದು ಧೈರ್ಯ ತುಂಬುವ ಅಗತ್ಯ ಇದೆ. ಈ ನಿಟ್ಟಿನಲ್ಲಿ ಪುತ್ತೂರಿನಂತಹ ಸಣ್ಣ ಊರಿನಿಂದ ಉತ್ತಮ ಸಂದೇಶ ನೀಡುವ ಕಾರ್ಯವನ್ನು ವಕೀಲರ ಸಂಘ ಮಾಡಿದೆ ಎಂದರು.

ಮೌನ ಪ್ರಾರ್ಥನೆ
ನ್ಯಾಯಾಧೀಶರು, ನೂರಾರು ವಕೀಲರು ಮೌನ ಪ್ರಾರ್ಥನೆಯ ಮೂಲಕ ಹುತಾತ್ಮ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಗೌರವ ಸಮರ್ಪಿಸಿದರು. ಹಿರಿಯ ನ್ಯಾಯವಾದಿಗಳಾದ ರಾಮ್‌ಮೋಹನ್‌, ಉದಯಶಂಕರ ಶೆಟ್ಟಿ ಹುತಾತ್ಮ ಸೈನಿಕರಿಗೆ ನುಡಿನಮನ ಸಲ್ಲಿಸಿದರು. ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶ ಮಂಜುನಾಥ್‌, ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಧೀಶೆ ಲತಾದೇವಿ, ಪ್ರಧಾನ ಹಿರಿಯ ನ್ಯಾಯಾಧೀಶ ಪ್ರಕಾಶ್‌ ಪಿ.ಎಂ, ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ಕಿಶನ್‌ ಮಡಲಗಿ ಉಪಸ್ಥಿತರಿದ್ದರು. ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಮನೋಹರ್‌ ಕೆ.ವಿ. ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next