Advertisement

puttur; ಡಬಲ್‌ ಎಂಜಿನ್‌ ಸರಕಾರದ ಸಾಧನೆಗಳೇ ಬಿಜೆಪಿ ಗೆಲುವಿನ ಮಂತ್ರ: ಆಶಾ ತಿಮ್ಮಪ್ಪ

03:04 PM Apr 26, 2023 | Team Udayavani |

ಪುತ್ತೂರು: ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಡಬಲ್‌ ಎಂಜಿನ್‌ ಸರಕಾರವು ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಸಫಲವಾಗಿದ್ದು, ಜನರು ಅಭಿವೃದ್ಧಿ ಆಧಾರದಲ್ಲಿ ಬಿಜೆಪಿಗೆ ಆಶೀರ್ವಾದ ಮಾಡಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಮಗ್ರ ದೃಷ್ಟಿಕೋನವನ್ನು ಹೊಂದಿದ ಪಕ್ಷವಾಗಿದ್ದು, ಹಿಂದುತ್ವ ಅಭಿವೃದ್ಧಿ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಆಶೀರ್ವಾದ ಬಿಜೆಪಿ ಪರವಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಹೇಳಿದರು.

Advertisement

ನೆಟ್ಟಣಿಗೆ ಮುಟ್ನೂರು ಶಕ್ತಿ ಕೇಂದ್ರದ ಬಿಜೆಪಿ ಕಾರ್ಯಕರ್ತರ ಭೇಟಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರ ಶಿಕ್ಷಣ, ಕೃಷಿ, ಕೈಗಾರಿಕೆ ಮತ್ತಿತರ ಕ್ಷೇತ್ರಗಳಲ್ಲಿ ಕೈಗೊಂಡಿರುವ ಭರಪೂರ ಅಭಿವೃದ್ಧಿ ಕಾರ್ಯಗಳು ಜನಸಾಮಾನ್ಯರ ಬದುಕಿಗೆ ಹೊಸ ಆಯಾಮವನ್ನು ಕಲ್ಪಿಸಿದೆ. ಸರಕಾರದ ದೂರದರ್ಶಿತ್ವದ ಯೋಜನೆಗಳನ್ನು ಜನತೆ ಮೆಚ್ಚಿಕೊಂಡು ಆಶೀರ್ವದಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಿಕ್ಷಣ, ಆರೋಗ್ಯದತ್ತ ಚಿತ್ತ
ಸಂಜೀವ ಮಠಂದೂರು ಅವರು ಶಾಸಕರಾಗಿದ್ದ ಅವಧಿಯಲ್ಲಿ ಪುತ್ತೂರು ಕ್ಷೇತ್ರದಲ್ಲಿ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿತ್ತು. ಅದರಲ್ಲೂ ಮುಖ್ಯವಾಗಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಭವಿಷ್ಯದ ಪೀಳಿಗೆಯ ಭವ್ಯ ಜೀವನಕ್ಕಾಗಿ ಶಿಕ್ಷಣ ಕ್ಷೇತ್ರದಲ್ಲಿನ ಆಧುನೀಕತೆಗೆ ಹೊಸ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಆಶಾ ತಿಮ್ಮಪ್ಪ ಅವರು  ಕ್ಷೇತ್ರದಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಯೋಜನನೆಗಳ ವಿವರಗಳನ್ನು ನೀಡಿದರು.

ಆಸ್ಪತ್ರೆ ಮೇಲ್ದರ್ಜೆಗೆ
ಕಾವು ನನ್ಯ ಗ್ರಾಮದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಆಶಾ ತಿಮ್ಮಪ್ಪ, ಭವಿಷ್ಯದ ಯೋಜನೆಗಳನ್ನು ಗಮನದಲ್ಲಿರಿಸಿಕೊಂಡು ಪುತ್ತೂರಿನ ಸರಕಾರಿ ಆಸ್ಪತ್ರೆಯನ್ನು 300 ಹಾಸಿಗೆಗಳ ಸಾಮರ್ಥ್ಯವುಳ್ಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಇಂತಹ ವ್ಯವಸ್ಥೆಯಿಂದಾಗಿ ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್‌ ಕಾಲೇಜ್‌ ಆರಂಭಿಸಲು ಪೂರಕವಾದ ಕ್ರಮಗಳನ್ನು ಕೈಗೊಂಡಂತಾಗಿದೆ ಎಂದು ಹೇಳಿದರು.

ವಿವಿಧೆಡೆಗಳಲ್ಲಿ ಸಭೆ
ಕೆಯ್ಯೂರು, ಕೆದಂಬಾಡಿ, ಮಾಟ್ನೂರು, ನೆಟ್ಟಣಿಗೆ ಮುಟ್ನೂರು ಮಡೊಟ್ಟು ತರವಾಡು ಮನೆ, ಅರಿಯಡ್ಕ, ಬಲ್ನಡು, ಬನ್ನೂರು, ಪಟ್ನೂರು, ಚಿಕ್ಕಮುಟ್ನೂರು, ಕೋಡಿಂಬಾಡಿ-ಬೆಳ್ಳಿಪ್ಪಾಡಿ, ಪೆರ್ನೆ, ಬಿಳಿಯೂರು, ಕೆದಿಲ ಮೊದಲಾದ ಕಡೆಗಳಿಗೆ ಆಶಾ ತಿಮ್ಮಪ್ಪ ಅವರು ಪಕ್ಷದ ಪ್ರಮುಖರು, ಕಾರ್ಯಕರ್ತರು ತೆರಳಿ ಗ್ರಾಮಸ್ಥರಲ್ಲಿ ಮತ ಯಾಚನೆ ನಡೆಸಿದರು. ಅಭಿವೃದ್ಧಿ ಪರ ಕಾರ್ಯ ನಡೆಸುತ್ತಿರುವ ಬಿಜೆಪಿಗೆ ಸದಾ ಬೆಂಬಲ ನೀಡುವುದಾಗಿ ಕಾರ್ಯಕರ್ತರು ಇದೇ ಸಂದರ್ಭದಲ್ಲಿ ಹೇಳಿದರು.

Advertisement

ದೇವಾಲಯದಲ್ಲಿ ಪ್ರಾರ್ಥನೆ

ಪುತ್ತೂರು ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರ ಗೆಲುವು, ಶ್ರೇಯೋಭಿವೃದ್ಧಿಗಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ತಂತ್ರಿ ಕುಂಟಾರು ಶ್ರೀ ರವೀಶ ತಂತ್ರಿ ಅವರ ನೇತೃತ್ವದಲ್ಲಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಜಿಲ್ಲಾ ವಿಭಾಗ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್‌, ಪ್ರಧಾನ ಕಾರ್ಯದರ್ಶಿ ಜಯಶ್ರೀ ಶೆಟ್ಟಿ, ನಗರಸಭಾ ಉಪಾಧ್ಯಕ್ಷೆ ವಿದ್ಯಾ ಆರ್‌.ಗೌರಿ, ಸದಸ್ಯೆ ಗೌರಿ ಬನ್ನೂರು ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next