Advertisement

Puttur: ಪ್ರಯಾಣಿಕರ ತಂಗುದಾಣ ಸಮಸ್ಯೆಗಳ ತಾಣ

12:51 PM Dec 06, 2024 | Team Udayavani |

ಪುತ್ತೂರು: ಜಿಲ್ಲಾ ಕೇಂದ್ರದ ಕನಸು ಹೊತ್ತಿರುವ ಪುತ್ತೂರು ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹತ್ತಾರು. ರಸ್ತೆಯ ಇಕ್ಕೆಲಗಳಲ್ಲಿನ ತಂಗುದಾಣ ಗಳಲ್ಲಿ ನಗರಕ್ಕೆ ಬರಲೆಂದು ನಿತ್ಯ ಕಾಯುವವರ ಸಂಖ್ಯೆ ಸಾವಿರಾರು. ಮಳೆ, ಬಿಸಿಲಿಗೆ ಆಸರೆ ನೀಡಬೇಕಾದ ಪ್ರಯಾಣಿಕರ ತಂಗುದಾಣದ ಸ್ಥಿತಿ ಹೇಗಿದೆಯೆಂದು ಪರಿಶೀಲಿಸಿದರೆ ಅಲ್ಲಿ ಕಂಡದ್ದು ಸ್ವತ್ಛತೆಯ ಕೊರತೆ, ನಿರ್ವಹಣೆಯ ನಿರ್ಲಕ್ಷ್ಯ .

Advertisement

ಗ್ರಾಮಾಂತರಕ್ಕಿಂತ ನಗರದ ತಂಗುದಾಣಗಳೇ ನಿರ್ಲಕ್ಷ್ಯಕ್ಕೆ ಈಡಾಗಿರುವುದು ಹೆಚ್ಚು ಅನ್ನುತ್ತಿದೆ ಚಿತ್ರಣ. ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿ, ಕಾಣಿ ಯೂರು- ಮಂಜೇಶ್ವರ ಅಂತಾರಾಜ್ಯ ಹೆದ್ದಾರಿಯಲ್ಲಿನ ಹಲವು ತಂಗುದಾಣಗಳು ಆಡಳಿತ ವ್ಯವಸ್ಥೆಯ ನಿರ್ಲಕ್ಷéಕ್ಕೆ ಒಳಗಾಗಿ ಬಳಲುತ್ತಿರುವ ಸಂಕಟದ ಕಥೆಗಳನ್ನು ಹೇಳುತ್ತಿದೆ.

ಕೊಡುಗೆ ಕೊಟ್ಟವರಿಗೆ ಅವಮಾನ
ಕಾಣಿಯೂರು-ಮಂಜೇಶ್ವರ ಅಂತಾರಾಜ್ಯ ಹೆದ್ದಾರಿಯ ನಗರಸಭಾ ವ್ಯಾಪ್ತಿಯ ಬೆದ್ರಾಳದಲ್ಲಿನ ಪ್ರಯಾಣಿಕರ ತಂಗುದಾಣ ಸ್ಥಿತಿಯಂತೂ ಕೊಡುಗೆ ಕೊಟ್ಟವರನ್ನು ಅವಮಾನಿಸಿದಂತಿದೆ. ಸುಮಾರು ಏಳು ವರ್ಷದ ಹಿಂದೆ ರೋಟರಿ ಕ್ಲಬ್‌ ಪುತ್ತೂರು ಸಿಟಿ ಚಾರಿಟೆಬಲ್‌ ಟ್ರಸ್ಟ್‌ ತಂಗುದಾಣ ನಿರ್ಮಿಸಿ ನಗರಸಭೆಗೆ ನೀಡಿದೆ. ಅನಂತರದ ನಿರ್ವಹಣೆ ನಗರಸಭೆಗೆ ಸಂಬಂಧಿಸಿದ್ದು. ಆದರೆ ಅಲ್ಲಿ ಪ್ರಯಾಣಿಕರು ಹೋಗದ ಸ್ಥಿತಿ ಇದೆ. ಕೆಲ ತಿಂಗಳಿನಿಂದ ಪೂರ್ತಿ ಪೊದೆ ಆವರಿಸಿದ ಸ್ಥಿತಿಯಲ್ಲಿದ್ದ ತಂಗುದಾಣವನ್ನು ಎರಡು ದಿನಗಳ ಹಿಂದೆ ರಸ್ತೆ ಬದಿಯ ಸ್ವತ್ಛತ ಕೆಲಸ ಸಂದರ್ಭ ಸ್ವತ್ಛಗೊಳಿಸಲಾಗಿದೆ. ಒಳಭಾಗ ಕಸ, ಗಿಡ ತುಂಬಿ ಪಾಳು ಬಿದ್ದ ಸ್ಥಿತಿಯಲ್ಲಿದ್ದು ಪೊದೆ ತೆರವು ಸಂದರ್ಭದಲ್ಲಿ ಒಳಭಾಗವನ್ನು ಹಾಗೆಯೇ ಬಿಡಲಾಗಿದೆ.

ಛಾವಣಿಯೇ ಮಾಯ
ನಗರದ ಹೊರವಲಯದ ಮುಕ್ರಂಪಾಡಿಯಿಂದ ಕವಲೊಡೆದು ಸಾಗಿರುವ ರಸ್ತೆಯ ಮೊಟ್ಟೆತ್ತಡ್ಕ ಜಂಕ್ಷನ್‌ನಲ್ಲಿ ಇರುವ ಪ್ರಯಾಣಿಕರ ತಂಗುದಾಣಕ್ಕೆ ಛಾವಣಿಯೇ ಇಲ್ಲ. ಆಟೋ ರಿಕ್ಷಾ, ಬಸ್‌ಗಾಗಿ ಕಾಯುವ ಜನರಿಗೆ ಛಾವಣಿ ಇಲ್ಲದ ತಂಗುದಾಣವೇ ಆಸರೆ. ಸ್ಥಳೀಯರು ಹೇಳುವ ಪ್ರಕಾರ ಈ ಸ್ಥಿತಿಗೆ ವರ್ಷಗಳೇ ಕಳೆದುಹೋಗಿದೆ. ದುರಸ್ತಿ ಆಗದಿರುವುದು ಏಕೆ ಅನ್ನುವುದು ಯಾರಿಗೂ ಮಾಹಿತಿ ಇಲ್ಲ. ಇದು ನಗರಸಭೆಯ ಸುಪರ್ದಿಗೆ ಒಳಪಟ್ಟಿದೆ.

Advertisement

ಸ್ವತ್ಛತೆಯೇ ಸವಾಲು
ನೆಹರೂನಗರ ಬೆಳಗ್ಗೆ, ಸಂಜೆ ವೇಳೆ ಸಾವಿರಾರು ವಿದ್ಯಾರ್ಥಿಗಳು ಬಸ್‌ಗೆ ಕಾಯುವ ಸ್ಥಳ. ಇಲ್ಲಿ ಎರಡೂ ಬದಿ ಯಲ್ಲೂ ತಂಗುದಾಣ ಇದೆ. ಆದರೆ ಒಂದು ಬದಿಯ ತಂಗುದಾಣ ಸ್ವತ್ಛ ತೆಯ ಕೊರತೆಯಿಂದ ಬಳಲುತ್ತಿದೆ. ಹೊರ ಭಾಗದಲ್ಲಿ ಹುಲ್ಲು ತುಂಬಿದ್ದರೆ, ಒಳಭಾಗದಲ್ಲಿ ಕಸ ತುಂಬಿದೆ. ಧೂಳು ಹಬ್ಬಿದೆ. ಇಂತಹುದೇ ಸಮಸ್ಯೆ ಕಾಣಿ ಯೂರು-ಮಂಜೇಶ್ವರ ರಸ್ತೆಯ ಸರ್ವೆ ಕಾಡಬಾಗಿಲು ತಂಗುದಾಣದ್ದು ಕೂಡ.

ಪೋಳ್ಯ: ಮದ್ಯ ಬಾಟಲಿ, ಕಸದಿಂದ ಕಸಿವಿಸಿ
ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪೋಳ್ಯದ ಪ್ರಯಾಣಿಕರ ತಂಗುದಾಣ ಪಾಳು ಬಿದ್ದ ಬಂಗಲೆಯಂತೆ ಕಾಣುತ್ತಿದೆ. ಒಳಭಾಗವಂತೂ ಕಸ ತುಂಬಿ ತೊಟ್ಟಿಯ ರೂಪ ಪಡೆದಿದೆ. ಇನ್ನು ಸುತ್ತಲೂ ಮದ್ಯದ ಬಾಟಲಿ ತುಂಬಿದ್ದು ರಾತ್ರಿ ವೇಳೆ ತಂಗುದಾಣ ಕುಡುಕರ ಅಡ್ಡೆಯಾಗಿ ಬದಲಾಗುತ್ತಿರುವ ಅನುಮಾನ ಇದೆ. ಇದು ನಗರಕ್ಕೇ ತಾಗಿಕೊಂಡಿದ್ದು ಕಬಕ ಗ್ರಾಮ ಪಂಚಾಯತ್‌ ವ್ಯಾಪ್ತಿಯೊಳಗಿನ ನಿಲ್ದಾಣವಾಗಿದೆ.

ಶೇ.85 ಕ್ಕಿಂತ ಅಧಿಕ ತಂಗುದಾಣ ಸ್ವತ್ಛತೆ ಕೊರತೆ
ತಾಲೂಕಿನ ಶೇ.85 ಕ್ಕಿಂತ ಅಧಿಕ ಬಸ್‌ ಪ್ರಯಾಣಿಕರ ತಂಗುದಾಣ ಸ್ವತ್ಛತೆಯ ಕೊರತೆಯಿಂದ ಬಳಲುತ್ತಿದ್ದರೆ, ಇನ್ನೂ ಕೆಲವು ನಿರ್ವಹಣೆಯ ನಿರ್ಲಕ್ಷéದಿಂದ ಕುಸಿಯುವ ಹಂತದಲ್ಲಿದೆ. ತಂಗುದಾಣದ ಒಳಭಾಗ, ಹೊರಭಾಗದಲ್ಲಿ ಗುಟ್ಕಾದ ಲಕೋಟೆ, ಮದ್ಯದ ಬಾಟಲಿ, ಪ್ಲಾಸ್ಟಿಕ್‌ ಇವೆಲ್ಲವೂ ಕಂಡು ಬರುತ್ತಿದೆ. ಸ್ಥಳೀಯಾಡಳಿತ ನಿಗಾ ಇರಿಸುವಲ್ಲಿ ತೋರಿರುವ ಅಸಡ್ಡೆಯ ಜತೆಗೆ ಕೆಲ ಕಿಡಿಗೇಡಿಗಳು ತಂಗುದಾಣ ದುರ್ಬಳಕೆ ಮಾಡುತ್ತಿರುವುದು ಈ ಸ್ಥಿತಿಗೆ ಕಾರಣ.

-ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next