Advertisement

Puttur: ಬೆರಗು ಮೂಡುವಂತೆ ಬೆಳಗಿದ ಕ್ರೀಡಾಜ್ಯೋತಿ

03:19 PM Dec 01, 2023 | Team Udayavani |

ಪುತ್ತೂರು: ಸಾವಿರ ಸಾವಿರ ಸಂಖ್ಯೆಯಲ್ಲಿ ಪಥ ಸಂಚಲನದಲ್ಲಿ ಮೂಡಿದ ಹೆಜ್ಜೆಗಳು, ಬೆರಗು ಮೂಡಿಸುವ ರೀತಿಯಲ್ಲಿ ಬೆಳಗಿದ ಕ್ರೀಡಾಜ್ಯೋತಿ, ಎಲ್ಲೆಲ್ಲೂ ಸಮವಸ್ತ್ರಧಾರಿಗಳ ಕಲರವ, ಆಗಸದ ತುಂಬೆಲ್ಲ ಬಣ್ಣದ ಚಿತ್ತಾರ. ಈ ಅಪೂರ್ವ ದೃಶ್ಯ ನೆರದಿದ್ದ ಸಾವಿರಾರು ಮಂದಿಯ ಕಣ್ಮನ ತಣಿಸಿತ್ತು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌, ನವೋದಯ ಗ್ರಾಮ ವಿಕಾಸ ಚಾರಿಟೆಬಲ್‌ ಟ್ರಸ್ಟ್‌ ಸಹಭಾಗಿತ್ವದಲ್ಲಿ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಗುರುವಾರ ನಡೆದ ದ.ಕ. ಜಿಲ್ಲೆಯ ಸಹಕಾರ ಸಂಘಗಳು ಹಾಗೂ ನವೋದಯ ಸ್ವಸಹಾಯ ಸಂಘಗಳ ಸದಸ್ಯರುಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದ ಉದ್ಘಾಟನ ಸಮಾರಂಭವು ಹಲವು ವಿಶೇಷತೆಗಳಿಗೆ ಸಾಕ್ಷಿಯಾಯಿತು.

Advertisement

ಪಥ ಸಂಚಲನ
ಸುಡು ಬಿಸಿಲು, ವಯಸ್ಸಿನ ಮಿತಿ ಲೆಕ್ಕಿಸದೆ ಸಮವಸ್ತ್ರ ಧರಿಸಿದ ಹದಿನೈದು ಸಾವಿರಕ್ಕೂ ಅಧಿಕ ಮಂದಿ ಶಿಸ್ತಿನ ಸಿಪಾಯಿಗಳಂತೆ 400 ಮೀ. ಟ್ರ್ಯಾಕ್‌ನಲ್ಲಿ ಪಥ ಸಂಚಲನದಲ್ಲಿ ಹೆಜ್ಜೆ ಹಾಕಿ ತನ್ನೊಳಗಿನ ಕ್ರೀಡಾ ಪ್ರೇಮವನ್ನು ತೋರ್ಪಡಿಸಿದರು.

ಪಥ ಸಂಚಲನದ ಆರಂಭಿಕ ಸ್ಥಾನದಲ್ಲಿ ಹೊನ್ನಾವರ ಸೈಂಟ್‌ ಮದರ್ ಬ್ಯಾಂಡ್‌ ತಂಡ, ಕೊಂಬು ವಾದನ, ಕೇಸರಿ-ಬಳಿ-ಹಸಿರು ಬಣ್ಣದ ದ್ವಜ ಹಾಗೂ ಕನ್ನಡ ಧ್ವಜದೊಂದಿಗೆ ಶ್ರೀ ರಾಮಕೃಷ್ಣ ಪ್ರೌಢಶಾಲೆಯ 80 ವಿದ್ಯಾರ್ಥಿ ತಂಡ, ಆಯಾ ತಾಲೂಕಿನ ಬಿಳಿ ವಸ್ತ್ರ ಧರಿಸಿದ ಸಹಕಾರ ಸಂಘದ ಸಿಬಂದಿ, ಸಮವಸ್ತ್ರದ ಸೀರೆ ಧರಿಸಿದ ಸ್ವ ಸಹಾಯ ಸಂಘದ ಸದಸ್ಯೆಯರ ತಂಡ, ಶಾರದಾ
ಗಣಪತಿ ವಿದ್ಯಾಸಂಸ್ಥೆಯ ಎನ್‌ಸಿಸಿ ಕೆಡೆಟ್‌ ಸದಸ್ಯರು ಕ್ರಮವಾಗಿ ಹೆಜ್ಜೆ ಹಾಕಿದರು.ಸಭಾ ವೇದಿಕೆಯ ಮುಂಭಾಗದಲ್ಲಿ ಪಥ
ಸಂಚಲನ ಸಾಗುತ್ತಿದ್ದಂತೆ ಅತಿಥಿಗಳು ಗೌರವ ವಂದನೆ ಸ್ವೀಕರಿಸಿದರು. 25 ನಿಮಿಷಗಳ ಕಾಲ ಪಥಸಂಚಲನ ನಡೆಯಿತು.

ಪಥಸಂಚಲನದ ಬಳಿಕ ತಾಲೂಕಿನ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಸಾಧಕ ಕ್ರೀಡಾಪಟುಗಳು ಶ್ರೀ ಮಹಾಲಿಂಗೇಶ್ವರ ದೇವಾಲಯದಿಂದ ತಂದ ಕ್ರೀಡಾಜ್ಯೋತಿಯನ್ನು ಹಿಡಿದು ಮೈದಾನದ ಟ್ರ್ಯಾಕ್‌ನಲ್ಲಿ ಸಾಗಿ ಸಚಿವ ಆರ್‌ .ಬಿ.ತಿಮ್ಮಾಪುರ ಅವರಿಗೆ ಹಸ್ತಾಂತರಿಸಿದರು. ಸಭಾಂಗಣದ ಬಳಿಯಿಂದ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಬಳಿ ನಿರ್ಮಿಸಿದ ಕ್ರೀಡಾಜ್ಯೋತಿ ಕುಂಡದ ಬಳಿ ಜ್ಯೋತಿ ಸಾಗಲೆಂದು ರೋಪ್‌ ವೇ ರೀತಿಯಲ್ಲಿ ವಿನೂತನ ವ್ಯವಸ್ಥೆ ಮಾಡಲಾಗಿತ್ತು.

ರೋಪ್‌ವೇಯ ತುದಿಯಲ್ಲಿ ಜೋಡಿಸಿದ ಹತ್ತಿ ಬಟ್ಟೆಯಿಂದ ಸುತ್ತಿದ ವಸ್ತ್ರಕ್ಕೆ ಸ್ಪರ್ಶಿಸಿದ ಜ್ಯೋತಿ ನಿಧಾನಗತಿಯಲ್ಲಿ ಹಗ್ಗದ
ಮೂಲಕ ಸಾಗಿ ಕ್ರೀಡಾಕುಂಡದ ಒಳಗಿನ ದೀಪಕ್ಕೆ ಸ್ಪರ್ಶಿಸಿ ಜ್ಯೋತಿಯನ್ನು ಬೆಳಗಿಸಿದ ಅಪೂರ್ವ ದೃಶ್ಯ ಗಮನ ಸೆಳೆಯಿತು.
ಈ ವೇಳೆ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೊರ್ಮಂಡ ಕ್ರೀಡಾ ಪ್ರತಿಜ್ಞೆ ಬೋಧಿಸಿದರು. 2014 ರಲ್ಲಿ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಇದೇ ರೀತಿಯಾಗಿ ಕ್ರೀಡಾಜ್ಯೋತಿ ಬೆಳಗಿಸಲಾಗಿತ್ತು.

Advertisement

ಆಗಸದಲ್ಲಿ ಬಣ್ಣದ ಚಿತ್ತಾರ ತ್ರಿವರ್ಣ ಧ್ವಜದ ಬಣ್ಣದ ಬಲೂನ್‌ಗಳನ್ನು ಆಗಸಕ್ಕೆ ಹಾರಿ ಬಿಡುವ ಮೂಲಕ ಕ್ರೀಡಾಕೂಟವನ್ನು
ಅತಿಥಿಗಳು ಉದ್ಘಾಟಿಸಿದರು. ಆರಂಭದಲ್ಲಿ ಸಹಕಾರಿ ಪಿತಾಮಹ ಮೊಳಹಳ್ಳಿ ಶಿವಾರಾಯ ಅವರ ಪ್ರತಿಮೆಗೆ ಮಾಲಾರ್ಪಣೆ
ಮಾಡಲಾಯಿತು. ಸಹಕಾರ ಧ್ವಜಾರೋಹಣ ನಡೆಯಿತು. ದಿನವಿಡೀ ಸಾಗಿದ ಕ್ರೀಡಾಕೂಟದಲ್ಲಿ ಒಟ್ಟು 25 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next