Advertisement

ಕೇರಳದ ಈ ಪ್ರಸಿದ್ಧ ಖಾದ್ಯವನ್ನು ಎಂದಾದರೂ ಸವಿದಿದ್ದೀರಾ…?

05:55 PM Jan 13, 2023 | ಶ್ರೀರಾಮ್ ನಾಯಕ್ |

ದೇಶದಲ್ಲಿ ವಿಭಿನ್ನ ಸಂಸ್ಕೃತಿ ಸಂಪ್ರದಾಯ ಹೊಂದಿದಂತೆ ಆಯಾಯಾ ಪ್ರದೇಶಗಳಿಗೆ ಸಂಬಂಧಿಸಿದಂತೆ ಆಹಾರ ಪದ್ಧತಿಯಲ್ಲಿ ಕೂಡ ಬದಲಾವಣೆಗಳನ್ನು ಕಾಣುತ್ತೇವೆ.ಅದರಂತೆ ದೇವರನಾಡು ಕೇರಳದಲ್ಲಿ ಪಾಲಪ್ಪಂ, ಇಡಿಯಪ್ಪಂ,ಪುಟ್ಟು, ಅಪ್ಪಂ,ಕಡಲೆಕರಿ ಮುಂತಾದ ಖಾದ್ಯಗಳು ಜನಪ್ರಿಯತೆಯಲ್ಲಿವೆ. ಆದರೆ ಇಂದು ನಾವು ಪುಟ್ಟು ಮತ್ತು ಕಡಲೆ ಕರಿ ತಯಾರಿಸುವ ವಿಧಾನದ ಬಗ್ಗೆ  ಹೇಳಲಿದ್ದೇವೆ…

Advertisement

ಪುಟ್ಟು
ಬೇಕಾಗುವ ಸಾಮಗ್ರಿಗಳು
ಬೆಳ್ತಿಗೆ ಅಕ್ಕಿ-3 ಕಪ್‌, ಸಕ್ಕರೆ-ಸ್ವಲ್ಪ, ತೆಂಗಿನ ತುರಿ-4 ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ
-ಮೊದಲಿಗೆ ಬೆಳ್ತಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು 3 ರಿಂದ 4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.
-ನೆನೆಸಿದ ಅಕ್ಕಿಯನ್ನು ಸೋಸಿ ಒಂದು ಬಟ್ಟೆಯಲ್ಲಿ ಹರಡಿಕೊಳ್ಳಿ. ಆ ಬಳಿಕ ಅಕ್ಕಿಯನ್ನು ಪುಡಿ ಮಾಡಿಕೊಳ್ಳಿ.ಆದರೆ ಪುಡಿ ಮಾಡುವಾಗ ಹೆಚ್ಚು ನುಣ್ಣಗೆ ಮಾಡಬಾರದು.
-ತದನಂತರ 3ರಿಂದ 4ಚಮಚವಾಗುವಷ್ಟು ಉಪ್ಪನ್ನು ನೀರಿನೊಂದಿಗೆ ಮಿಶ್ರಣ ಮಾಡಿ ಆ ನೀರನ್ನು ಮಾಡಿಟ್ಟ ಹಿಟ್ಟಿನ ಮೇಲೆ ಚಿಮುಕಿಸಿ ಪುನಃ ಕಲಸಿಟ್ಟುಕೊಳ್ಳಿ.
-ಹಿಟ್ಟನ್ನು ಮಿಶ್ರಣ ಮಾಡುವಾಗ ಹಿಟ್ಟು ತುಂಬಾನೇ ನುಣ್ಣಗೆ ಆಗಬಾರದು ಹಾಗೂ ಹಿಟ್ಟು ಪುಡಿ-ಪುಡಿಯಾಗಬಾರದು.
-ಪುಟ್ಟು ಮಾಡುವ ಪಾತ್ರೆ(ಕೊಳವೆಯಾಕೃತಿ)ಯ ತಳಭಾಗಕ್ಕೆ ಸ್ವಲ್ಪ ತೆಂಗಿನ ತುರಿಯನ್ನು ಉದುರಿಸಿ ನಂತರ ಅಕ್ಕಿಹಿಟ್ಟನ್ನು ಹಾಕಿರಿ.


-ನಂತರ ಮತ್ತೆ ತೆಂಗಿನ ತುರಿಯನ್ನು ಸೇರಿಸಿರಿ.ಹೀಗೆ ಪದರ ಪದರವಾಗಿ ಅಕ್ಕಿಹಿಟ್ಟು ಮತ್ತು ತೆಂಗಿನ ತುರಿಯನ್ನು ಸೇರಿಸಿರಿ.
-ಕೊನೆಯ ಮೇಲ್ಭಾಗದಲ್ಲಿ ತೆಂಗಿನ ತುರಿ ಮತ್ತು ಸ್ವಲ್ಪ ಸಕ್ಕರೆಯನ್ನು ಹಾಕಿ ಪುಟ್ಟು ಪಾತ್ರೆಯ ಮುಚ್ಚಳ ಹಾಕಿರಿ.
-ಆಮೇಲೆ ಪ್ರಶರ್‌ ಕುಕ್ಕರ್‌ ನ ಮೇಲ್ಭಾಗದಲ್ಲಿರುವ ಶಿಳ್ಳೆಯನ್ನು ತೆಗೆದು ಆ ಭಾಗದಲ್ಲಿ ಕೊಳವೆಯಾಕೃತಿ ಪಾತ್ರೆಯನ್ನು ಇಟ್ಟು 15 ರಿಂದ 20 ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿರಿ.
-ನಂತರ ನಿಧಾನವಾಗಿ ಕೊಳವೆಯಿಂದ ಪುಟ್ಟುವನ್ನು ತೆಗೆದರೆ ಕೇರಳದ ಪ್ರಸಿದ್ಧ ಭಕ್ಷ್ಯ ಪುಟ್ಟು ರೆಡಿ. ಇದನ್ನು ಕೆಂಪು ಕಡಲೆ ಕರಿಯೊಂದಿಗೆ ತಿನ್ನಲು ಬಹಳ ರುಚಿ.

ಕಡಲೆ ಕರಿ(ಕಡಲೆಗಸಿ)
ಬೇಕಾಗುವ ಸಾಮಗ್ರಿಗಳು
ಕೆಂಪು ಕಡಲೆ-2ಕಪ್‌,ಟೊಮೆಟೋ-2,ತೆಂಗಿನ ತುರಿ-1ಕಪ್‌, ಒಣಮೆಣಸು-6ರಿಂದ 8,ಜೀರಿಗೆ-ಅರ್ಧ ಚಮಚ, ಹುಣೆಸೆಹುಳಿ-ಸ್ವಲ್ಪ, ಸಾಸಿವೆ-ಅರ್ಧ ಚಮಚ, ಎಣ್ಣೆ-3 ಚಮಚ, ಕರಿಬೇವಿನ ಗರಿ-2 ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ
-ಕಡ್ಲೆ ಕಾಳನ್ನು ಹಿಂದಿನ ರಾತ್ರಿ ನೀರಲ್ಲಿ ನೆನೆಹಾಕಿರಿ. ಮರುದಿನ ಕಡ್ಲೆ ಕಾಳು ಮತ್ತು ಸ್ವಲ್ಪ ಉಪ್ಪು ಹಾಕಿ ಬೇಯಿಸಬೇಕು.
-ನಂತರ ಹುರಿದ ಒಣಮೆಣಸು,ತೆಂಗಿನತುರಿ ಮತ್ತು ಹುಣೆಸೆಹುಳಿಯನ್ನು ಮಿಕ್ಸ್‌ಜಾರಿಗೆ ಹಾಕಿ ಮಸಾಲೆ ರುಬ್ಬಿರಿ.
-ತದನಂತರ ಬೇಯಿಸಿಟ್ಟ ಕಡ್ಲೆಕಾಳಿಗೆ ಟೊಮೆಟೋ ಸೇರಿಸಿ ರುಬ್ಬಿಟ್ಟ ಮಸಾಲೆಯನ್ನು ಹಾಕಿ ಕುದಿ ಬಂದ ನಂತರ ಇಳಿಸಿರಿ.
-ಎಣ್ಣೆಯಲ್ಲಿ ಜೀರಿಗೆ,ಸಾಸಿವೆ,ಕರಿಬೇವಿನ ಒಗ್ಗರಣೆ ಮಾಡಿ ಕಡ್ಲೆ ಕಾಳಿನ ಮಸಾಲೆಗೆ ಹಾಕಿರಿ. ಕಡಲೆಕರಿ ಜೊತೆಗೆ ಕೇರಳದ ಪ್ರಸಿದ್ಧ ಭಕ್ಷ್ಯ ಪುಟ್ಟುವನ್ನು ಸವಿಯಿರಿ.

Advertisement

-ಶ್ರೀರಾಮ ಜಿ.ನಾಯಕ್‌

Advertisement

Udayavani is now on Telegram. Click here to join our channel and stay updated with the latest news.

Next