ಉಡುಪಿ: ಪುತ್ತಿಗೆ ಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಸಜ್ಜಾಗಿ ನಿಂತಿರುವ ಕೃಷ್ಣನಗರಿಗೆ ಸ್ವರಾಂಜಲಿ ಕಾರ್ಯಕ್ರಮವು ಸಂಭ್ರಮದ ಮೆರುಗನ್ನು ಇನ್ನಷ್ಟು ಹೆಚ್ಚಿಸಲಿದೆ.
ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆ “ಹರ್ಷ’ ಸ್ವರಾಂಜಲಿ ಕಾರ್ಯಕ್ರಮ ಆಯೋಜಿಸಿದ್ದು, ಜ.17ರ ಸಂಜೆ 6.30ಕ್ಕೆ ಅಜ್ಜರಕಾಡಿನ ಟೌನ್ ಹಾಲ್‌ನಲ್ಲಿ ನಡೆಯಲಿದೆ.
ಪರ್ಯಾಯದ ಸಂದರ್ಭ ನಡೆಯುವ ಸ್ವರಾಂಜಲಿ ಕಾರ್ಯಕ್ರಮವು ಕಳೆದ 24 ವರ್ಷಗಳಿಂದ ಪ್ರಸಿದ್ಧ ಶಾಸ್ತ್ರೀಯ ಸಂಗೀತ ಗಾಯಕರ ಸಮ್ಮಿಲನದೊಂದಿಗೆ ನಡೆಯುತ್ತಿದೆ. ಇದು ಶ್ರೀಕೃಷ್ಣನನ್ನು ಗಾನಸುಧೆಯ ಮೂಲಕ ನಮಿಸುವ ಒಂದು ಸಾಂಸ್ಕೃತಿಕ ಕಲಾಸೇವೆ. ಮೊದಲ ಸ್ವರಾಂಜಲಿ ಕಾರ್ಯಕ್ರಮವು 2000ದಲ್ಲಿ ಶಶಿಧರ್ ಕೋಟೆ ಹಾಗೂ ವೆಂಕಟೇಶ್ ಕುಮಾರ್ ಅವರೊಂದಿಗೆ ಆರಂಭಗೊಂಡಿತು. 2002ರಲ್ಲಿ ವೆಂಕಟೇಶ್ ಕುಮಾರ್ ಅವರ ಸ್ವರದೊಂದಿಗೆ ರಿಂಪಾ ಸಿವಾ ಇವರ ತಬಲಾ ವಾದನ, 2004ರಲ್ಲಿ ವೆಂಕಟೇಶ್ ಕುಮಾರ್ – ಟಿ.ಎನ್. ಶೇಷಗೋಪಾಲನ್ ಅವರ ಗಾಯನ, 2006ರಲ್ಲಿ ಮಲ್ಲಾಡಿ ಬ್ರದರ್ ಹಾಗೂ ಅಶ್ವಿನಿ ಭಿಡೆ ದೇಶಪಾಂಡೆ, 2008ರಲ್ಲಿ ಗಾಯತ್ರಿ ಗಿರೀಶ್ ಹಾಗೂ ವೆಂಕಟೇಶ್ ಕುಮಾರ್ ಅವರ ಸಂಗೀತ, 2010ರಲ್ಲಿ ಖ್ಯಾತ ಮೂವರು ಕಲಾವಿದರ ಅಪೂರ್ವ ಸಂಗಮ, ಪಂಡಿತ್ ಗಣಪತಿ ಭಟ್ ಹಸಣಗಿಯವರ ಗಾಯನದೊಂದಿಗೆ ವೇಣು ವಾದಕ ಪ್ರವೀಣ್ ಗೋಡ್ಖಿಂಡಿ ಹಾಗೂ ಸಿತಾರ್ ಮಾಂತ್ರಿಕ ರಫೀಕ್ ಖಾನ್‌ರ ಜುಗಲ್ಬಂದಿ, 2012ರಲ್ಲಿ ಪ್ರೊ| ವೆಂಕಟೇಶ್ ಕುಮಾರ್, 2014ರಲ್ಲಿ ಕಿರಾನ ಗಾರನ ಶೈಲಿಯ ಗಾಯಕ ಜಯತೀರ್ಥ ಮೇವುಂಡಿಯವರ ಗಾಯನ, 2016ರ ಪೇಜಾವರ ಶ್ರೀಗಳ ಪಂಚಮ ಪರ್ಯಾಯದಲ್ಲಿ ಕೋಲ್ಕತಾ ಮೂಲದ ಕೌಶಿಕಿ ಚಕ್ರವರ್ತಿಯವರ ಹಿಂದೂಸ್ಥಾನಿ ಗಾಯನ, 2018ರಲ್ಲಿ ಮಗದೊಮ್ಮೆ ಪ್ರೊ| ವೆಂಕಟೇಶ್ ಕುಮಾರ್, 2020ರಲ್ಲಿ ಟಿ.ಎಂ. ಕೃಷ್ಣ ಅವರ ಕರ್ನಾಟಕ ಶಾಸ್ತ್ರೀಯ ಹಾಡುಗಾರಿಕೆ ನಡೆದಿತ್ತು. ಒಟ್ಟಾರೆ ಕಳೆದ 11 ಪರ್ಯಾಯಗಳಲ್ಲಿ ಲಕ್ಷಾಂತರ ಸಂಗೀತಾಸಕ್ತರು ಸ್ವರಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಈ ಬಾರಿ ಅರಾಜ್ ತಂಡ
ಸ್ವರಾಂಜಲಿಯಲ್ಲಿ ಈ ಬಾರಿ ಶಾಸ್ತ್ರೀಯ ಸಂಗೀತದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅರಾಜ್ ಎಂಬ ಯುವ ಪ್ರತಿಭೆಗಳ ತಂಡ ಭಾಗವಹಿಸಲಿದೆ. ಇಶಾನ್ ಘೋಷ್ (ತಬಲಾ), ಪ್ರತೀಕ್ ಸಿಂಗ್ (ಗಾಯನ), ಮೆಹ್ತಾಬ್ ಅಲಿ ನಿಯಾಝಿ (ಸಿತಾರ್), ವನರಾಜ್ ಶಾಸಿŒ (ಸಾರಂಗಿ), ಎಸ್. ಆಕಾಶ್ (ಕೊಳಲು) ಹೀಗೆ ಹಲವು ಕಲಾವಿದರ ಅಪೂರ್ವ ಸಂಗಮದಲ್ಲಿ ಈ ಬಾರಿಯ ಹರ್ಷ ಸ್ವರಾಂಜಲಿ ಮೂಡಿ ಬರಲಿದೆ.
ಉಚಿತ ಪ್ರವೇಶ ಪತ್ರ
ಸಂಗೀತಾಸಕ್ತರು ಉಚಿತ ಪ್ರವೇಶ ಪತ್ರವನ್ನು ಹರ್ಷ ಉಡುಪಿ, ಕುಂದಾಪುರ, ಬ್ರಹ್ಮಾ ವರ, ಮಂಗಳೂರು, ಸುರತ್ಕಲ್, ಪುತ್ತೂರು ಮಳಿಗೆಗಳಲ್ಲಿ ಪಡೆಯ ಬಹುದು.