ಉಡುಪಿ: ಭಾವೀ ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ವಿಶ್ವಗೀತಾ ಪರ್ಯಾಯೋತ್ಸವಕ್ಕೆ ಕೃಷ್ಣನಗರಿ ಸಜ್ಜಾಗುತ್ತಿದೆ. ವ್ಯವಸ್ಥೆಯ ಭಾಗವಾಗಿ ಶ್ರೀಕೃಷ್ಣ ಮಠದ ಪರಿಸರ, ಪುತ್ತಿಗೆ ಮಠದ ಪರಿಸರ ಹಾಗೂ ರಥಬೀದಿಯ ಪ್ರಮುಖ ಕಟ್ಟಡಗಳಿಗೆ ಸುಣ್ಣಬಣ್ಣ ಬಳಿಯುವ ಕಾರ್ಯವೂ ವೇಗವಾಗಿ ಸಾಗುತ್ತಿದೆ.
ಶ್ರೀ ಕೃಷ್ಣ ಮಠದ ಒಳಭಾಗದಲ್ಲಿ ಮರದ ದಾರಂದಗಳನ್ನು ಸ್ವಚ್ಛಗೊಳಿಸಿ ಎಣ್ಣೆ ಹಚ್ಚಲಾಗುತ್ತಿದೆ. ಕನಕ ಗೋಪುರ, ಕನಕ ಮಂಟಪ, ರಥಬೀದಿಯಲ್ಲಿರುವ ಕನಕನ ಗುಡಿ, ಶ್ರೀಕೃಷ್ಣ ದೇವರ ಗುಡಿಯ ಒಳಭಾಗ, ಮುಖ್ಯಪ್ರಾಣ ದೇವರ ಗುಡಿಯ ಸಮೀಪ ಹೀಗೆ ಎಲ್ಲ ಕಡೆಗಳ ಗೋಡೆಯನ್ನು ಸ್ವಚ್ಛಗೊಳಿಸಿ, ಬಣ್ಣ ಬಣ್ಣ ಬಳಿಯಲಾಗುತ್ತಿದೆ. ಸುಬ್ರಹ್ಮಣ್ಯ ದೇವರ ಗುಡಿಯ ಮುಂಭಾಗ, ಗುಡಿಯ ಸುತ್ತಲೂ ಸುಣ್ಣ ಬಣ್ಣ ಹಚ್ಚಲಾಗುತ್ತಿದೆ.
ರಥಬೀದಿಯಲ್ಲಿ ಕನಕ ಗೋಪುರವನ್ನು ಸಿಬಂದಿ ಸ್ವಚ್ಛಗೊಳಿಸುತ್ತಿದ್ದಾರೆ. ಎಲ್ಲ ರೀತಿಯ ಸುರಕ್ಷತೆ ಕ್ರಮಗಳನ್ನು ಅಳವಡಿಸಿಕೊಂಡು ಗೋಪುರದ ಮೇಲೇರಿ ಧೂಳು ತೆಗೆಯುವುದು ಸೇರಿದಂತೆ ಬಣ್ಣ ಹಚ್ಚುವ ಕಾರ್ಯವನ್ನು ಮಾಡುತ್ತಿದ್ದಾರೆ. ಕನಕನ ಗುಡಿಯ ಹೊರಭಾಗ ಮತ್ತು ಒಳಭಾಗಕ್ಕೂ ಬಣ್ಣ ಬಳಿಯಲಾಗುತ್ತಿದೆ. ಶ್ರೀಕೃಷ್ಣ ಮಠದ ಮುಖ್ಯದ್ವಾರ ಹಾಗೂ ಸ್ವಾಗತ ಗೋಪುರವನ್ನು ಸ್ವತ್ಛಗೊಳಿಸಿ, ಅಲಂಕರಿಸಲಾಗುತ್ತಿದೆ.
ಪುತ್ತಿಗೆ ಮಠದ ಸಿಂಗಾರ
ಪುತ್ತಿಗೆ ಮಠದ ಹೊರ ಮತ್ತು ಒಳಭಾಗವನ್ನು ಪರ್ಯಾಯೋತ್ಸವಕ್ಕೆ ಸಜ್ಜುಗೊಳಿಸಲಾಗುತ್ತಿದೆ. ಹೊರಭಾಗದಲ್ಲಿ ದುರಸ್ತಿ ಸಹಿತ ಸುಣ್ಣ ಬಣ್ಣ ಬಳಿಯುವ ಹಿನ್ನೆಲೆಯಲ್ಲಿ ಅಗತ್ಯ ಟರ್ಪಲ್‌ಗಳನ್ನು ಮುಚ್ಚಿಕೊಂಡು ಕಾಮಗಾರಿ ನಡೆಸಲಾಗುತ್ತಿದೆ. ಮಠದ ಒಳಭಾಗದಲ್ಲಿಯೂ ಸಿಂಗಾರದ ಕಾರ್ಯಗಳು ಬಹುಪಾಲು ಮುಗಿಯುವ ಹಂತಕ್ಕೆ ಬಂದಿದೆ.
ಶ್ರೀ ಕೃಷ್ಣ ಮಠದ ಒಳಭಾಗದ ಪರಿಸರದಲ್ಲಿ ಗೋಡೆಗಳಿಗೆ ಸುಣ್ಣಬಣ್ಣ ಬಳಿಯುವ ಜತೆಗೆ ಮರದ ದಾರಂದ, ಬಾಗಿಲು ಹಾಗೂ ಮರದಿಂದ ಮಾಡಿರುವ ಉಪಕರಣಗಳನ್ನು ಸ್ವಚ್ಛ ಗೊಳಿಸುವ ಅದರ ಸುರಕ್ಷತೆ ಹಾಗೂ ಇನ್ನಷ್ಟು ಬಾಳಿಕೆ ಬರುವಂತೆ ಮಾಡಲು ಬೇಕಾದ ಎಲ್ಲ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಶ್ರೀಕೃಷ್ಣ ಮಠದ ಹೊರ ಭಾಗದ ಪರಿಸರ ಸೇರಿದಂತೆ ಗೋಶಾಲೆಯ ಸುತ್ತಲಿನ ಭಾಗದಲ್ಲಿ ದುರಸ್ತಿ ಹಾಗೂ ಸುಣ್ಣ ಬಣ್ಣ ಬಳಿಯುವ ಕಾರ್ಯ ಆರಂಭವಾಗಿದೆ. ರಾಜಾಂಗಣದ ಸುತ್ತಲು ವಿಶೇಷ ಸ್ವಚ್ಛತೆ ನಡೆಯುತ್ತಿದೆ.