Advertisement
ರಾ. ಹೆ. ಪ್ರಾಧಿಕಾರ ವತಿಯಿಂದ 12.85 ಕೋ. ರೂ. ವೆಚ್ಚದಲ್ಲಿ ನಿರ್ಮಿ ಸುವ 140 ಮೀಟರ್ ಉದ್ದದ, 16.5 ಮೀ. ಅಗಲದ ಸೇತುವೆ ಇದಾಗಿದೆ. 2018 ಡಿಸೆಂಬರ್‌ನಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ ಒಂದು ವರ್ಷ ಕೆಲಸ ನಡೆಸಲು ಸಾಧ್ಯವಾಗಿರಲಿಲ್ಲ. ಅನಂತರ ಕಾಮಗಾರಿ ವೇಗ ಪಡೆದುಕೊಂಡಿದ್ದು, ಇದೀಗ ಗರ್ಡರ್ ಅಳವಡಿಕೆ ಹಂತಕ್ಕೆ ತಲುಪಿದೆ. ಈ ಸೇತುವೆ ಒಟ್ಟು 5 ಬೃಹತ್ ಪಿಲ್ಲರ್‌ಗಳನ್ನು ಒಳಗೊಂಡಿದೆ. ಸೇತುವೆ ನಿರ್ಮಾಣಕ್ಕೆ 35 ಮೀ.ಉದ್ದದ 20 ಗರ್ಡರ್‌ಗಳನ್ನು ಕಾಮಗಾರಿ ಸ್ಥಳದಲ್ಲೇ ನಿರ್ಮಿಸಲಾಗಿದೆ. 30ಕ್ಕೂ ಅಧಿಕ ಕಾರ್ಮಿಕರು ರಾತ್ರಿ, ಹಗಲು 8 ತಿಂಗಳು ಶ್ರಮಿಸಿದ್ದಾರೆ.
ಗರ್ಡರ್ ಅಳವಡಿಕೆಗೆ 220 ಮೆಟ್ರಿಕ್ ಟನ್ ಮತ್ತು 200 ಮೆ. ಟನ್ ಭಾರವನ್ನು ಎತ್ತುವ ಸಾಮರ್ಥ್ಯ ಎರಡು ಬೃಹತ್ ಕ್ರೇನ್‌ಗಳನ್ನು ಮಂಗಳೂರು ಮತ್ತು ಬೆಂಗಳೂರಿನಿಂದ ಬಾಡಿಗೆಗೆ ತಂದಿದ್ದು, ವಿಶೇಷ ಹೈಡ್ರಾಲಿಕ್ ತಂತ್ರಜ್ಞಾನವನ್ನು ಇದು ಹೊಂದಿದೆ. ಒಂದು ಗರ್ಡರ್ ಅಳವಡಿಕೆಗೆ ಮೂರು ಲಕ್ಷ ರೂ. ವ್ಯಯಿಸಲಾಗುತ್ತದೆ ಎಂದು ಎಂಜಿನಿಯರ್ ತಿಳಿಸಿದ್ದಾರೆ. ಮಳೆಯಿಂದಾಗಿ ಎರಡು ದಿನ ಮುಂದಕ್ಕೆ
ಬೃಹತ್ ಸೇತುವೆಗಳ ನಿರ್ಮಾಣದಲ್ಲಿ ಅನುಭವ ಇರುವ ಕುಂದಾಪುರ ಮೂಲದ ಸಂಸ್ಥೆಯೊಂದು ಈ ಸೇತುವೆ ನಿರ್ಮಾಣದ ಗುತ್ತಿಗೆ ಪಡೆದಿದೆ. 20 ಗರ್ಡರ್ ಲಾಂಚಿಂಗ್‌ಗೆ
10 ದಿನಗಳ ಕಾಲಾವಕಾಶ ಬೇಕಿದ್ದು, ಸೇತುವೆ ಮೇಲ್ಭಾಗದಲ್ಲಿ ಡೆಕ್‌ವರ್ಕ್ ಮತ್ತು ಸ್ಲಾéಬ್ ಕೆಲಸಕ್ಕೆ ಒಂದು ತಿಂಗಳು ಸಮಯ ಬೇಕು. ಸೋಮವಾರ ಗರ್ಡರ್ ಲಾಂಚಿಂಗ್‌ಗೆ
ಎಲ್ಲ ತಯಾರಿ ಮಾಡಿಕೊಂಡಿದ್ದೆವು. ವ್ಯವಸ್ಥಿತವಾಗಿ, ಸೂಕ್ಷ್ಮವಾಗಿ ಕಾಮಗಾರಿ ನಿರ್ವಹಿಸಬೇಕಿದ್ದು, ರವಿವಾರ ರಾತ್ರಿ ಸುರಿದ ಮಳೆಯಿಂದಾಗಿ ಮಣ್ಣು ಕೆಸರು ಆಗಿರುವುದರಿಂದ ಕ್ರೇನ್‌ಗಳ ಚಾಲನೆಗೆ ಕಷ್ಟವಾಗಿದೆ. ಎರಡು ದಿನ ಲಾಂಚಿಂಗ್ ಕಾರ್ಯ ಮುಂದೂಡಲಾಗಿದೆ. ಮಾರ್ಚ್ ತಿಂಗಳ ಒಳಗೆ ಸೇತುವೆ ಕೆಲಸ ಸಂಪೂರ್ಣಗೊಳ್ಳಲಿದೆ ಎಂದು ಎಂಜಿನಿಯರ್ ಮಾಹಿತಿ ನೀಡಿದ್ದಾರೆ.