Advertisement

ಪುತ್ತಿಗೆ: ಕೊರಗ ಸಮುದಾಯದವರ ಕೊರಗು 

09:04 PM Aug 24, 2021 | Team Udayavani |

ಪುತ್ತಿಗೆ ಗ್ರಾಮದಲ್ಲಿ ಮೂಲಸೌಲಭ್ಯ ಒದಗಿಸಬೇಕಿದೆ. ಗ್ರಾಮದ ಸಂಪರ್ಕ ರಸ್ತೆಗಳಿಗೆ ಡಾಮರು ಹಾಕಬೇಕಿದೆ. ನಿರ್ವಸತಿಕರಿಗೆ ಹಕ್ಕುಪತ್ರ ವಿತರಣೆ ಶೀಘ್ರ ಆಗಬೇಕಿದೆ. ಈ ಬಗ್ಗೆ ಸಂಬಂಧಪಟ್ಟವರ ಗಮನಸೆಳೆಯಲು ಉದಯವಾಣಿ ಸುದಿನದ “ಒಂದು ಊರು- ಹಲವು ದೂರು’ ಅಭಿಯಾನದ ಮೂಲಕ ಪ್ರಯತ್ನಿಸಲಾಗಿದೆ.

Advertisement

ಮೂಡುಬಿದಿರೆ: ಪುತ್ತಿಗೆ ಗ್ರಾಮದ ಬಂಕಿಮಜಲು ಪ್ರದೇಶದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಕೊರಗ ಸಮುದಾಯದ 20 ಕುಟುಂಬಗಳಿಗೆ ಒದಗಿಸಿರುವ ಜಾಗದಲ್ಲಿ ಬಹಳ ಸಮಸ್ಯೆಗಳಿವೆ.

2008-09ರಲ್ಲಿ ದ.ಕ. ನಿರ್ಮಿತಿ ಕೇಂದ್ರದ ಮೂಲಕ ಭೂಮಿ ಸಮತಟ್ಟು ಮಾಡುವ ಕಾಮಗಾರಿಯ ಫಲಕವೇನೋ ಕಾಣಿಸುತ್ತಿದೆ. ಆದರೆ ಕಾಮಗಾರಿ ನಡೆದ ಹಾಗಿಲ್ಲ. ಜಾಗದ ಗಡಿಗುರುತು, ಪಹಣಿ ಪತ್ರ ಆಗಿ 12 ವರ್ಷಗಳಾಗಿವೆ. ಫಲಾನುಭವಿಗಳ ಪಟ್ಟಿಯೂ ಇದೆ. ಈ 20 ಕುಟುಂಬಗಳಿಗೆ ಮುರಗಲ್ಲಿನ ಪ್ರದೇಶದಲ್ಲಿ ತಲಾ 10 ಸೆಂಟ್ಸ್‌ ಮನೆ ನಿವೇಶನ ನೀಡಿ ಅನತಿ ದೂರದಲ್ಲಿ ತಲಾ ಕೃಷಿಗಾಗಿ ತಲಾ 90 ಸೆಂಟ್ಸ್‌ ಒದಗಿಸಲಾಗಿದೆ. ಆದರೆ, ಈ ಎಲ್ಲ ಕುಟುಂಬಗಳಿಗೆ ತಮ್ಮ ಜಾಗ ನಿರ್ದಿಷ್ಟವಾಗಿ ಯಾವುದು ಎಂಬುದರ ಬಗ್ಗೆ ಯಾವುದೇ ಮಾಹಿತಿ, ಮಾರ್ಗದರ್ಶನ ಇಲ್ಲ. ಹೀಗಾಗಿ, ಮನೆ ಕಟ್ಟುವುದಾದರೂ ಹೇಗೆ? ಕೃಷಿ ಮಾಡುವುದಾದರೂ ಹೇಗೆ ಎಂಬ ಸಮಸ್ಯೆಯಲ್ಲಿ ತೊಳಲಾಡುತ್ತಿದ್ದಾರೆ.

ಜತೆಗೆ ಇಲ್ಲಿ ನೀರು, ವಿದ್ಯುತ್‌ ಶಕ್ತಿ ಪೂರೈಕೆ ಮೊದಲಾದ ಮೂಲಸೌಕರ್ಯಗಳ ಕೊರತೆಯೂ ಇದೆ. ಮನೆ ನಿವೇಶನಗಳಿರುವಲ್ಲಿ ಒಂದು ಬೋರ್‌ವೆಲ್‌ ತೋಡಿದ್ದಾರೆ. ಪಂಪ್‌ ಹಾಕಿಲ್ಲ. ಹಾಗಾಗಿ ನೀರು ಪೂರೈಕೆ ಆಗುತ್ತಿಲ್ಲ. (ಇಲ್ಲಿ ಕುಳಿತರೆ ಪ್ರಯೋಜನವಾಗದು ಎಂದು ಕೆಲವು ಫಲಾನುಭವಿಗಳು ತಮ್ಮ ಸಂಬಂಧಿಕರನ್ನು ಹಂಗಾಮಿಯಾಗಿ ನೆಲೆಗೊಳಿಸಿದ್ದು ಒಕ್ಕಟ್ಟಿನ ಹೋರಾಟಕ್ಕೆ ಬಲಬರದಂತಾಗಿದೆ)

ಅನೇಕ ಕಡೆ ರಸ್ತೆ ವಿಸ್ತರಣೆಯಾಗಬೇಕೆಂದು ಮೀಸಲಿಟ್ಟ ಜಾಗದಲ್ಲಿ ನಡೆದಿರುವ ಮಲ್ಲಿಗೆ ಮತ್ತು ಇತರ ಕೃಷಿಯನ್ನು ನಿವಾರಿಸಿ, ರಸ್ತೆ ವಿಸ್ತರಿಸುವ ಕಾರ್ಯ, ಡಾಮರು ಹಾಕುವ ಕಾಮಗಾರಿ ನಡೆಯಬೇಕು. ಒಂಟಿಕಟ್ಟೆಯಿಂದ ಪುತ್ತಿಗೆ ದೇವಸ್ಥಾನ ರಸ್ತೆಯ ಬದಿಗೆ ಹತ್ತಿರದ ಕೆಂಪುಕಲ್ಲು ಕೋರೆಗಳಿಂದ ತಂದು ರಾಶಿ ಹಾಕಲಾಗಿರುವ ಮಣ್ಣನ್ನು ಕೂಡಲೇ ಸಮತಟ್ಟು ಮಾಡಿಸಬೇಕು.

Advertisement

ಪುತ್ತಿಗೆ -ಪೆಲತ್ತಡ್ಕ ಗ್ರಾಮದಲ್ಲಿ ಬೀದಿದೀಪ ಹಾಕಿಸಬೇಕು. ಕಾಡುಪ್ರಾಣಿಗಳ ಹಾವಳಿಯನ್ನೂ ನಿಯಂತ್ರಿಸಬೇಕು.

ಪುತ್ತಿಗೆ ದೇವಸ್ಥಾನದ ಆಸುಪಾಸು ಸಾರ್ವಜನಿಕ ಶೌಚಾಲಯಗಳು ಅಗತ್ಯವಾಗಿ ನಿರ್ಮಾಣ ವಾಗಬೇಕಿದೆ. ಅಧಿಕೃತ,ಅನಧಿಕೃತವಾಗಿ ಕಾರ್ಯಾ ಚರಿಸುತ್ತಿರುವ ಕೆಂಪು ಕಲ್ಲಿನ ಕೋರೆಗಳು ರಕ್ಷಣಾ ವ್ಯವಸ್ಥೆ ಇಲ್ಲದೆ ಜನರಿಗೆ ಅಪಾಯಕಾರಿಯಾಗಿವೆ

ಇತರ ಸಮಸ್ಯೆಗಳೇನು? :

  • ಪುತ್ತಿಗೆ ಸೋಮನಾಥೇಶ್ವರ ದೇವಸ್ಥಾನದ ಎದುರಿನ ಪುಟ್ಟ ಸೇತುವೆ ದುರ್ಬಲವಾಗಿದೆ. ಇದನ್ನು ನೇರವಾಗಿ, ಅಗಲವಾಗಿ ನಿರ್ಮಿಸುವ ಕಾರ್ಯ ತುರ್ತು ಆಗಬೇಕು.
  • ನಿವೇಶನ ರಹಿತರು ಕಂಚಿಬೈಲು ಪದವು ಪ್ರದೇಶದಲ್ಲಿ 94 ಸಿ ಅಡಿಯಲ್ಲಿ ಸರಕಾರಿ ಭೂಮಿಯಲ್ಲಿ ಕಟ್ಟಿರುವ ಮನೆಗಳಿಗೆ ಹಕ್ಕು ಪತ್ರ ಸಿಗದೆ ನೀರು, ವಿದ್ಯುತ್‌ ಸಂಪರ್ಕ ಸಿಕ್ಕಿಲ್ಲ.
  • ಪುತ್ತಿಗೆ ಪರಿಸರದಲ್ಲಿ ಸುಮಾರು ಆರು ದಶಕಗಳ ಹಿಂದೆ ಹಾಕಲಾದ ವಿದ್ಯುತ್‌ ತಂತಿಗಳನ್ನು ಬದಲಾಯಿಸಬೇಕು.
  • ಮಿತ್ತಬೈಲ್‌ನಲ್ಲಿ ಎಸ್‌ಸಿ /ಎಸ್‌ಟಿ ನಿಗಮದಿಂದ ಮೂರು ವರ್ಷಗಳ ಹಿಂದೆ ಕೊರೆಯಲಾದ ಬೋರ್‌ವೆಲ್‌ಗ‌ಳಿಗೆ ಇನ್ನೂ ಪಂಪ್‌ ಅಳವಡಿಸಿಲ್ಲ. ಜೀವನೋಪಾಯ ಮಾಡಿಕೊಳ್ಳಲು ತೋಟ ಇರಿಸಿದವರಿಗೆ ಸಮಸ್ಯೆ ಆಗಿದೆ. ಎರಡು ವರ್ಷಗಳ ಹಿಂದೆ ಮಂಜೂರಾದ ಕೊಳವೆ ಬಾವಿಗಳನ್ನು ಇನ್ನೂ ಕೊರೆದಿಲ್ಲ.
  • ಕಂಚಿಬೈಲು ಎರುಗುಂಡಿ ಅರ್ಬಿಯ ಕಟ್ಟಹುಣಿಯುದ್ದಕ್ಕೂ ತಡೆಬೇಲಿ ನಿರ್ಮಿಸು ವುದು ಅಗತ್ಯ. ಪೇಟೆಯಿಂದ ಬರುವವರ ಜೀವ ರಕ್ಷಣೆ ಬಗ್ಗೆ, ಮೋಜು ಮಸ್ತಿ ಮತ್ತು ಪರಿಸರ ಮಾಲಿನ್ಯ ಉಂಟುಮಾಡುವ ಚಟುವಟಿಕೆಗಳಿಗೆ ತಡೆಹಾಕುವ ಬಗ್ಗೆ ಇಲ್ಲಿ ಹೋಂ ಗಾರ್ಡ್ಸ್‌ ಇಲ್ಲವೇ ತತ್ಸಮಾನ ವ್ಯವಸ್ಥೆ ಆಗಬೇಕು. (ಮಳೆಗಾಲದಲ್ಲಿ , ಅದರಲ್ಲೂ ವಾರಾಂತ್ಯದಲ್ಲಿ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ)
  • ಕಂಚಿಬೈಲು-ಗುಂಡ್ಯಡ್ಕ -ಕಲ್ಸಂಕ ಜೋಡಿಸುವ ಮಾರ್ಗ ರಚಿಸಬೇಕು.

 

-ಧನಂಜಯ ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next