Advertisement

Putthige Mutt ಪರ್ಯಾಯೋತ್ಸವ; ಭರದಿಂದ ಸಾಗುತ್ತಿದೆ ಸ್ವಾಗತ ಕಮಾನುಗಳ ನಿರ್ಮಾಣ

12:00 PM Jan 01, 2024 | Team Udayavani |

ಉಡುಪಿ: ಐದು ಶತಮಾನಗಳ ಹಿಂದೆ ಶ್ರೀ ವಾದಿರಾಜರು ಉಡುಪಿ ಶ್ರೀಕೃಷ್ಣಮಠದ ಪರ್ಯಾಯ ವ್ಯವಸ್ಥೆಯಲ್ಲಿ ಪರಿವರ್ತನೆ ಮಾಡಿ, ಎರಡು ತಿಂಗಳ ಪರ್ಯಾಯ ಎರಡು ವರ್ಷಗಳಿಗೆ ವಿಸ್ತರಿಸಿದರು. ಈಗ ಎರಡು ವರ್ಷದಂತೆ 252ನೇ ಪರ್ಯಾಯ ಮಹೋತ್ಸವಕ್ಕೆ ಪುತ್ತಿಗೆ ಮಠ ಅಣಿಯಾಗು ತ್ತಿದೆ. ಪರ್ಯಾಯೋತ್ಸ ದಲ್ಲಿ ಮೊದಲ ಪ್ರಮುಖ ಆಕರ್ಷಣೆ ನಗರದ ಅಲಂಕಾರ. ಇದಕ್ಕೆ ಇನ್ನಷ್ಟು ಮೆರುಗು ನೀಡುವುದು ಸ್ವಾಗತ ಕಮಾನುಗಳು. ಇದರ ನಿರ್ಮಾಣ ಕಾರ್ಯ ಈಗಾಗಲೇ ಭರದಿಂದ ಸಾಗುತ್ತಿದೆ. ನಗರದಲ್ಲಿ ಒಟ್ಟು 22 ಸ್ವಾಗತ ಕಮಾನುಗಳು ನಿರ್ಮಾಣಗೊಳ್ಳಲಿವೆ. ಈಗಾಗಲೇ ಜೋಡುಕಟ್ಟೆಯಿಂದ ಡಯಾನ ವೃತ್ತದ ವರೆಗೆ ಸ್ವಾಗತ ಕಮಾನು ನಿರ್ಮಾಣ ಮಾಡುವ ಕೆಲಸ ನಡೆಯುತ್ತಿದೆ. 40ಕ್ಕೂ ಅಧಿಕ ಕಾರ್ಮಿಕರು ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

Advertisement

ಉಡುಪಿ ಸಾಂಪ್ರದಾಯಿಕ ಶೈಲಿಯ ಸ್ವಾಗತ ಕಮಾನುಗಳನ್ನು ನಿರ್ಮಿಸಲಾಗು ತ್ತದೆ. ಈ ಬಾರಿ ಪರಿಸರಸ್ನೇಹಿ ವಿಶೇಷ ಅಲಂಕೃತ ಸ್ವಾಗತ ಕಮಾನುಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಮುಖ್ಯವಾಗಿ ಸೋದೆ ಮಠದ ಸಮೀಪ ಹಗ್ಗದ ಸ್ವಾಗತ ಕಮಾನು ಮತ್ತು ಬುಟ್ಟಿಯ ಕಮಾನು, ಕೃಷ್ಣಾಪುರ ಮಠದ ಸಮೀಪ ಬುಟ್ಟಿಯ ಕಮಾನು, ಕಾಣಿಯೂರು ಮಠದ ಬಳಿ ಪ್ರಭಾವಳಿ ಮಾದರಿ ಸ್ವಾಗತ ಕಮಾನು ರೂಪಿಸಲಾಗುತ್ತದೆ. ಬುಟ್ಟಿಯ ಕಮಾನು ಕೊರಗ ಸಮಾಜದವರಿಂದ ನಡೆಯಲಿದೆ. ಕನಕದಾಸ ರಸ್ತೆಯಲ್ಲಿ, ಅನಂತೇಶ್ವರ ದೇಗುಲದ ಬಳಿ ಅನಂತದ್ವಾರ ಕಮಾನುಗಳನ್ನು ಆಕರ್ಷಕವಾಗಿ ರೂಪಿಸ ಲಾಗುತ್ತದೆ. ಇನ್ನುಳಿದಂತೆ ನಗರದ ದ್ವಿಪಥ ರಸ್ತೆಯಲ್ಲಿ ಭಗವಾಧ್ವಜಗಳಿಂದ ಅಲಂಕಾರ ಮಾಡಲಾಗುತ್ತದೆ. ಪರ್ಯಾಯ ಮಹೋತ್ಸವಕ್ಕೆ ಸ್ವಾಗತ ಕೋರುವ ವೃತ್ತಾಕಾರದ ಮಾದರಿಯಲ್ಲಿ ಬ್ಯಾಡ್ಜ್ ರೀತಿಯ ಅಲಂಕಾರವನ್ನು 16 ಕಡೆಗಳಲ್ಲಿ ರಚಿಸಲಾಗುತ್ತದೆ. ಬನ್ನಂಜೆ, ಕಿನ್ನಿಮೂಲ್ಕಿ, ಜೋಡುಕಟ್ಟೆ, ಕೆ.ಎಂ. ಮಾರ್ಗ, ಗುಂಡಿ ಬೈಲು, ಕಲ್ಸಂಕ, ಪಾರ್ಕಿಂಗ್‌ ಸುತ್ತ ವಿದ್ಯುತ್‌ ದೀಪಗಳಿಂದ ನಗರವನ್ನು ಸಂಪೂರ್ಣ ಅಲಂಕಾರಗೊಳಿಸಲಾಗುತ್ತದೆ.

ತೀರ್ಥಮಂಟಪಗಳ ನಿರ್ಮಾಣ

ಪರ್ಯಾಯ ಮೆರವಣಿಗೆಗೆ ಬರುವ ಹಳೆ ಡಯಾನ ವೃತ್ತದಿಂದ ತೆಂಕಪೇಟೆವರೆಗೂ 30 ತೀರ್ಥ ಮಂಟಪ ರೂಪಿಸಲಾಗುತ್ತದೆ. ಅಡಕೆ ಕಂಬವಿರಿಸಿ ಅದಕ್ಕೆ ವಸ್ತ್ರಗಳಿಂದ ಅಲಂಕರಿಸಿ ಕಲಶವನ್ನಿಟ್ಟು ಆಕರ್ಷಕ ತೀರ್ಥ ಮಂಟಪ ರಚಿಸಿ ಅದರಲ್ಲಿ ಪುತ್ತಿಗೆ ಮಠದ ಹಿಂದಿನ ಯತಿಗಳ ಪರಂಪರೆ ಹೆಸರಿಸಲಾಗುತ್ತದೆ. ಪ್ರತಿಯೊಂದು ತೀರ್ಥ ಮಂಟಪದಲ್ಲಿ 30 ಯತಿಗಳ ಹೆಸರು ಬರೆಯಲಾಗುತ್ತದೆ. ಶ್ರೀ ಮಧ್ವಾ ಚಾರ್ಯರ ಶಿಷ್ಯ ಶ್ರೀ ಉಪೇಂದ್ರ ತೀರ್ಥ ಶ್ರೀಪಾದರಿಂದ 29ನೇ ಯತಿ ಶ್ರೀ ಸುಜ್ಞಾನೇಂದ್ರ ತೀರ್ಥ ಶ್ರೀಪಾದರು 30ನೇ ಯತಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, 31ನೇ ಯತಿ ಸುಶ್ರೀಂದ್ರತೀರ್ಥ ಶ್ರೀಪಾದರ ಹೆಸರನ್ನು ಬರೆಯಲಾಗುತ್ತದೆ.

ಪೂರಕ ಕೆಲಸ ಆರಂಭ: ಪರ್ಯಾಯ ಮಹೋತ್ಸವ ಅಂಗವಾಗಿ ನಗರದಲ್ಲಿ ಈಗಾಗಲೆ ಸ್ವಾಗತ ಕಮಾನುಗಳ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ನಗರದ ಪ್ರಮುಖ ರಸ್ತೆ ಮತ್ತು ಜಂಕ್ಷನ್‌ ಸಹಿತ ಶ್ರೀಪಾದರ ಪುರ ಪ್ರವೇಶ ಮೆರವಣಿಗೆ, ಪರ್ಯಾಯ ಮೆರವಣಿಗೆ ಸಾಗುವ ರಸ್ತೆಗಳಲ್ಲಿ ಸ್ವಾಗತ ಕಮಾನು ನಿರ್ಮಾಣ ಮತ್ತು ವಿದ್ಯುತ್‌ ಅಲಂಕಾರಕ್ಕೆ ಪೂರಕ ಕೆಲಸಗಳು ಆರಂಭಗೊಂಡಿದೆ. -ರಮೇಶ್‌ ಭಟ್‌, ಪುತ್ತಿಗೆ ಮಠ.

Advertisement
Advertisement

Udayavani is now on Telegram. Click here to join our channel and stay updated with the latest news.

Next