Advertisement

ಪುಟ್ಟರಾಜು ಲವ್‌ಸ್ಟೋರಿ

04:45 PM Mar 09, 2018 | Team Udayavani |

ಕನ್ನಡದಲ್ಲಿ ಸದ್ದಿಲ್ಲದೆಯೇ ಸಿನಿಮಾಗಳು ಶುರುವಾಗುವುದು ಹೊಸ ಸುದ್ದಿಯೇನಲ್ಲ. ಆ ಸಾಲಿಗೆ “ಪುಟ್ಟರಾಜು ಲವ್ವರ್‌ ಶಶಿಕಲಾ’ ಚಿತ್ರವೂ ಸೇರಿದೆ. ಸಹದೇವ್‌ ಈ ಚಿತ್ರದ ನಿರ್ದೇಶಕರು. ಇವರಿಗೆ ಇದು ಮೊದಲ ಚಿತ್ರ. ಹಾಗಂತ ಅನುಭವ ಇಲ್ಲದೆ ನಿರ್ದೇಶನಕ್ಕಿಳಿದಿಲ್ಲ. ಈ ಹಿಂದೆ, “ಕಾಲ್ಗೆಜ್ಜೆ’, “ಜಿಂಕೆಮರಿ’ ಮತ್ತು “ಎರಡು ಕನಸು’ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಈಗ ನೈಜ ಘಟನೆ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ.

Advertisement

ಈಗಾಗಲೇ ಶೇ.90 ರಷ್ಟು ಚಿತ್ರೀಕರಣವಾಗಿದ್ದು, ಕ್ಲೈಮ್ಯಾಕ್ಸ್‌ ಮಾತ್ರ ಬಾಕಿ ಉಳಿಸಿಕೊಂಡಿದ್ದಾರೆ ನಿರ್ದೇಶಕರು. ಇದೊಂದು ಮುಗ್ಧ ಮನಸುಗಳ ಸುತ್ತ ನಡೆಯುವ ಕಥೆಯಂತೆ. ಖೋ ಖೋ ಆಟದ ಮೇಲೆ ಕೇಂದ್ರಿತವಾಗಿರಿಸಿರುವ ಕಥೆಯಲ್ಲಿ ಒಂದು ಮುದ್ದಾದ ಪ್ರೇಮಕಥೆ ಹೆಣೆದಿದ್ದಾರೆ. 2001-02 ರಲ್ಲಿ ತುಮಕೂರು ನಗರದಲ್ಲಿ  ನಡೆದ ಒಂದು ನೈಜ ಘಟನೆ ಚಿತ್ರದ ಜೀವಾಳ.

ಈ ಚಿತ್ರದ ಕಥೆ ಮೆಚ್ಚಿಕೊಂಡು ನಿರ್ದೇಶಕರ ಬಾಮೈದ ನಾಗರಾಜ್‌ ಮತ್ತು ಬಾವ ಕೃಷ್ಣ, ಬಾಲಣ್ಣ ಸೇರಿ ಈ ಚಿತ್ರಕ್ಕೆ ಹಣ ಹಾಕುವ ಮೂಲಕ ನಿರ್ಮಾಪಕರಾಗಿದ್ದಾರೆ. ನಾಯಕಿ ಚಿತ್ರದಲ್ಲಿ ರಾಜ್ಯಮಟ್ಟದ ಆಟಗಾರ್ತಿ. ನಾಯಕನಿಗೆ ಖೋ ಖೋ ಆಡಲು ಬರಲ್ಲ. ಆದರೆ, ನಾಯಕಿಗಾಗಿಯೇ ಅವನು ಆಟ ಕಲಿತು ಎಲ್ಲರ ಗಮನಸೆಳೆಯುತ್ತಾನೆ. ಆಮೇಲೆ ಏನೆಲ್ಲಾ ಆಗುತ್ತೆ ಅನ್ನೋದೇ ಕಥೆ.

ನೋಡುಗರಿಗೆ ಒಂದು ಶಾಲೆಯ ನೆನಪಿನ ಜತೆಗೆ ಹಳೆಯ ಪ್ರೀತಿ ನೆನಪುಗಳೂ ಇಲ್ಲಿ ಬಿಚ್ಚಿಕೊಳ್ಳುವಷ್ಟರ ಮಟ್ಟಿಗೆ “ಪುಟ್ಟರಾಜು ಲವ್ವರ್‌ ಶಶಿಕಲಾ’ ಚಿತ್ರದಲ್ಲಿ ಮೂಡಿಬರಲಿದೆ. ಇನ್ನು, ಈ ಚಿತ್ರದಲ್ಲಿ ಅಮಿತ್‌, ಸುಶ್ಮಿತಾ, ಜಯಶ್ರೀ ನಾಯಕಿಯರು. ಇವರಿಗೆ ಇದು ಮೊದಲ ಚಿತ್ರ. ಹೊಸಬರನ್ನೇ ಇಟ್ಟುಕೊಂಡು ಮೊದಲು ಅವರಿಗೆ ತಿಂಗಳುಗಟ್ಟಲೆ ವರ್ಕ್‌ಶಾಪ್‌ ನಡೆಸಿ, ಆ ಬಳಿಕ ಕ್ಯಾಮೆರಾ ಮುಂದೆ ನಿಲ್ಲಿಸಿದ್ದಾರೆ ನಿರ್ದೇಶಕರು.

ಸುಮಾರು 40 ದಿನಗಳ ಕಾಲ ಚಿಕ್ಕಮಗಳೂರು, ಉಡುಪಿ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ನಾಯಕ ಅಮಿತ್‌, ಖೋ ಖೋ ಆಟ ಕಲಿಯುವಾಗ, ನಾಯಕಿಯ ಮೇಲೆ ಪ್ರೀತಿ ಚಿಗುರೊಡೆದು, ಒಂದಷ್ಟು ಸಮಸ್ಯೆ ಎದುರಿಸುವ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರಂತೆ. ಸಿವಿಲ್‌ ಎಂಜಿನಿಯರಿಂಗ್‌ ವಿದ್ಯಾರ್ಥಿನಿಯಾಗಿರುವ ಸುಶ್ಮಿತಾಗೆ ಇದು ಮೊದಲ ಸಿನಿಮಾ.

Advertisement

ಕಥೆ ಕೇಳಿದಾಗ, ಶಾಲೆ ನೆನಪಾಗಿ, ಒಪ್ಪಿಕೊಂಡಿರುವ ಸುಶ್ಮಿತಾ, ಮೂಲತಃ ಮೈಸೂರಿನ ಕ್ರೀಡಾಪಟು. ಚಿತ್ರದಲ್ಲೂ ಖೋ ಖೋ ಆಟಗಾರ್ತಿ ಹಾಗಾಗಿ ಅವರಿಗೆ ಖುಷಿ ಇದೆ. ಇನ್ನು, ಜಯಶ್ರೀ ಆರಾಧ್ಯ ಅವರಿಗೂ ಇದು ಮೊದಲ ಚಿತ್ರ. ಇವರು ಬೇರಾರೂ ಅಲ್ಲ, ಮಾರಿಮುತ್ತು ಖ್ಯಾತಿಯ ಸರೋಜಮ್ಮ ಅವರ ಮೊಮ್ಮಗಳು. ಅವರಿಗಿಲ್ಲಿ ಸಿಕ್ಕಾಪಟ್ಟೆ ಮಾತಾಡುವ ಪಾತ್ರವಂತೆ.

ರಿಯಲ್‌ ಲೈಫ್ನಲ್ಲೂ ಅವರು ಹೆಚ್ಚು ಮಾತಾಡುತ್ತಾರಂತೆ. ಮಾರಿಮುತ್ತು ಖ್ಯಾತಿಯ ಸರೋಜಮ್ಮ ಅವರಿಗೆ ಮೊಮ್ಮಗಳನ್ನು ಸಿನಿಮಾ ರಂಗಕ್ಕೆ ಕರೆತರುವ ಆಸೆ ಇತ್ತಂತೆ. ಅದೀಗ ಈಡೇರಿದೆ ಎಂಬ ತೃಪ್ತಿ ಜಯಶ್ರೀ ಅವರದು. ಉಳಿದಂತೆ ಚಿತ್ರದಲ್ಲಿ ಕಾವ್ಯಾ, ಮಹದೇವ್‌ ಮೂರ್ತಿ, ಡಾ. ಮನೋಹರ್‌ ಮಣಿ, ವಿಕ್ರಾಂತ್‌ ಇತರರು ನಟಿಸಿದ್ದಾರೆ. ರಾಜ್‌ ಶಿರಾ ಕ್ಯಾಮೆರಾ ಹಿಡಿದರೆ, ಶ್ರೀರಾಮ್‌ ಗಂಧರ್ವ ಸಂಗೀತವಿದೆ.

Advertisement

Udayavani is now on Telegram. Click here to join our channel and stay updated with the latest news.

Next