Advertisement
ನಗರದ ಹೊಸೂರ ಬಸವಣ ಗಲ್ಲಿಯ ಲಕ್ಷ್ಮೀಬಾಯಿ ಭಾವಕಣ್ಣ ಮೋದಗೇಕರ (85) ಎಂಬುವರು ಶುಕ್ರವಾರ ಮೃತಪಟ್ಟಿದ್ದು, ಇವರ ಅಂತ್ಯ ಸಂಸ್ಕಾರದ ವಿಧಿ-ವಿಧಾನಗಳನ್ನು ಐವರು ಪುತ್ರಿಯರು ನೆರವೇರಿಸಿ ಸಮಾಜಕ್ಕೆ ಹೊಸ ಸಂದೇಶ ರವಾನಿಸಿದ್ದಾರೆ.
ಲಕ್ಷ್ಮೀಬಾಯಿಗೆ ಐವರು ಪುತ್ರಿಯರು ಹಾಗೂ ಓರ್ವ ಪುತ್ರನಿದ್ದಾನೆ. 2011ರಲ್ಲಿ ತಂದೆಯ ನಿಧನಾನಂತರ ಪುತ್ರಿಯರೇ ತಮ್ಮ ತಾಯಿಯನ್ನು ನೋಡಿಕೊಳ್ಳುತ್ತಿದ್ದರು. ನಗರದ ಹೊಸೂರ ಬಸವಣ ಗಲ್ಲಿಯಲ್ಲಿರುವ ಮನೆಯಲ್ಲಿ ವಾಸವಾಗಿದ್ದ ಲಕ್ಷ್ಮೀಬಾಯಿಯ ಆರೈಕೆಯನ್ನು ಐವರು ಪುತ್ರಿಯರೇ ಮಾಡುತ್ತಿದ್ದರು. ಹಿರಿಯ ಪುತ್ರ ಬೇರೆ ಮನೆ ಮಾಡಿಕೊಂಡು ಪತ್ನಿಯೊಂದಿಗೆ ವಾಸವಿದ್ದು, ತಾಯಿಯ ಪಾಲಿಗೆ ಇದ್ದೂ ಇಲ್ಲದಂತಾಗಿದ್ದಾರೆ. ಒಂಟಿಯಾಗಿ ಜೀವನ ಸಾಗಿಸುತ್ತಿದ್ದ ತಾಯಿಗೆ ತಮ್ಮ ನಿಧನಾ ನಂತರ ಪುತ್ರಿಯರೇ ಎಲ್ಲ ವಿಧಿ ವಿಧಾನ ನೆರವೇರಿಸಬೇಕು ಎನ್ನುವ ಇಚ್ಛೆಯಿತ್ತು. ಆಪ್ರಕಾರ ಲಕ್ಷ್ಮೀಬಾಯಿ ಮೃತದೇಹಕ್ಕೆ ನಾಲ್ವರು ಪುತ್ರಿಯರು ಹೆಗಲು ಕೊಟ್ಟರೆ ಹಿರಿಯ ಪುತ್ರಿ ಸಂಧ್ಯಾ ಹಲಗೇಕರ ಮಡಿಕೆ (ಗಡಿಗೆ) ಹಿಡಿದು ತಾಯಿ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
Related Articles
Advertisement
ಆಸ್ತಿ ಮೇಲಷ್ಟೇ ಕಣ್ಣು:ಶುಕ್ರವಾರ ಸಂಜೆ 3:15ರ ಸುಮಾರಿಗೆ ತಾಯಿ ನಿಧನರಾದ ಸುದ್ದಿ ತಿಳಿದ ಕೂಡಲೇ ಬಂದ ಹಿರಿಯ ಪುತ್ರ ಯಾವುದೇ ಕಾರ್ಯ ನಡೆಸಲಿಲ್ಲ. ಹೀಗಾಗಿ ಈತನಿಂದ ವಿಧಿ ಮಾಡಿಸಬಾರದೆಂದು ನಿರ್ಧರಿಸಿದ್ದರು. ಹಿರಿಯ ಪುತ್ರ ಹೆಸರಿಗೆ ಮಾತ್ರ ಇದ್ದಾನೆ. ನಮ್ಮ ತಂದೆ-ತಾಯಿಯ ಆಸ್ತಿ ಕಬಳಿಸಲು ಹುನ್ನಾರ ನಡೆಸಿದ್ದಾನೆ. ಮನೆಯನ್ನು ತನ್ನ ಹೆಸರಿಗೆ ಮಾಡಿಕೊಂಡಿದ್ದಾನೆ. ಆದರೆ ಒಂದು ದಿನವೂ ತಾಯಿಯನ್ನು ನೋಡಿಕೊಂಡಿಲ್ಲ. ಹೀಗಾಗಿ ತಾಯಿ ಇಚ್ಛೆಯಂತೆ ನಾವೇ ಅಂತ್ಯಸಂಸ್ಕಾರದ ವಿಧಿ ವಿಧಾನ ನೆರವೇರಿಸಿದ್ದೇವೆ ಎನ್ನುತ್ತಾರೆ ಈ ದಿಟ್ಟ ಪುತ್ರಿಯರು. ತಾಯಿಯ ಅಂತ್ಯಸಂಸ್ಕಾರವನ್ನು ಪುತ್ರಿಯರೇ ಕೂಡಿ ಮಾಡುತ್ತಿದ್ದೇವೆಂಬ ಆತಂಕ ನಮ್ಮನ್ನು ಕಾಡಲಿಲ್ಲ. ಧೈರ್ಯದಿಂದ ನೆರವೇರಿಸಿದ್ದೇವೆ. ಮುಂದೆ ನಿಂತು ಏನಾದರೂ ಮಾಡುತ್ತೇನೆಂದು ನಮ್ಮ ಸಹೋದರ ಹೇಳಲೂ ಇಲ್ಲ. ಹೀಗಾಗಿ ನಾವೇ ಕಾರ್ಯ ಮುಗಿಸಿ ಅಂತಿಮ ನಮನ ಸಲ್ಲಿಸಿದ್ದೇವೆ.
– ರೇಣುಕಾ ಅಷ್ಟೇಕರ, ದ್ವಿತೀಯ ಪುತ್ರಿ ತಾಯಿಯ ಚಿತೆಗೆ ಅಗ್ನಿಸ್ಪರ್ಶವನ್ನು ಸಾಮಾನ್ಯವಾಗಿ ಪುತ್ರರೇ ಮಾಡುತ್ತಾರೆ. ಇಲ್ಲದಿದ್ದರೆ ಇತರ ಪುರುಷ ಬಂಧುಗಳು ಮಾಡುವುದು ಸಂಪ್ರದಾಯ. ಆದರೆ ಈ ಮಹಿಳೆಯರು ತಮ್ಮ ತಾಯಿಯ ಎಲ್ಲ ವಿಧಿಗಳನ್ನು ನೆರವೇರಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ನಮ್ಮ ಗಲ್ಲಿಯ ಜನ ಈ ಮಹಿಳೆಯರ ನಿರ್ಧಾರವನ್ನು ಕೊಂಡಾಡುತ್ತಿದ್ದಾರೆ.
– ಸೋಮನಾಥ ಶಿಂಧೆ, ಸ್ಥಳೀಯ ನಿವಾಸಿ – ಭೈರೋಬಾ ಕಾಂಬಳೆ