Advertisement

Udupi ಪರ್ಯಾಯ ಸಂಭ್ರಮ ಸವಿದ ಕೃಷ್ಣನಗರಿ

11:55 PM Jan 17, 2024 | Team Udayavani |

ಉಡುಪಿ: ವಿಶ್ವ ಗೀತಾ ಪರ್ಯಾಯವಾಗಿ ಮುಂದಿನ ಎರಡು ವರ್ಷ ಶ್ರೀಕೃಷ್ಣ ಪೂಜಾ ಕೈಂಕರ್ಯ ನೆರವೇರಿಸಲಿರುವ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯದ ಸಂದರ್ಭವನ್ನು ಶ್ರೀ ಕೃಷ್ಣನಗರ ಉಡುಪಿ ಮನಸಾರೆ ಸ್ವಾಗತಿಸಿತು.

Advertisement

ಕಿನ್ನಿಮೂಲ್ಕಿ ಸ್ವಾಗತಗೋಪುರದ ಬಳಿಯಿಂದ ಆರಂಭಗೊಂಡ ಭವ್ಯ ಮೆರವಣಿಗೆಗೆ ಜೋಡುಕಟ್ಟೆಯಲ್ಲಿ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಶ್ರೀಮಠದ ಪಟ್ಟದ ದೇವರೊಂದಿಗೆ ಕೂಡಿಕೊಂಡರು. ಮೆರವಣಿಗೆಯುದ್ದಕ್ಕೂ ಸೇರಿದ್ದ ಭಕ್ತ ಸಮೂಹ ಶ್ರೀಕೃಷ್ಣ ದೇವರಿಗೆ, ಶ್ರೀಪಾದರಿಗೆ ಜಯಕಾರ ಹಾಕಿದರು.

ಶ್ರೀ ಕೃಷ್ಣಮಠದ ಪರಿಸರ ಸೇರಿದಂತೆ ಉಡುಪಿಯ ವಿವಿಧ ಭಾಗಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಭಕ್ತರು ತಾವು ಇದ್ದಲ್ಲಿಂದಲೇ ನೋಡಲು ಅನುಕೂಲವಾಗುವಂತೆ ದೊಡ್ಡ ಸ್ಕ್ರೀನ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಇಡೀ ಪ್ರಕ್ರಿಯೆಯನ್ನು ಲಕ್ಷಾಂತರ ಭಕ್ತರು ಲೈವ್‌ ಮೂಲಕ ಆಸ್ವಾದನೆ ವಿಶೇಷವಾಗಿದೆ.

ಬುಧವಾರ ಬೆಳಗ್ಗೆಯಿಂದಲೇ ಶ್ರೀ ಕೃಷ್ಣಮಠ ಆವರಣದಲ್ಲಿ ಪರ್ಯಾಯೋತ್ಸವದ ಹಿನ್ನೆಲೆಯಲ್ಲಿ ಹಬ್ಬದ ವಾತಾವರಣ ಕಳೆ ಕಟ್ಟಿತ್ತು. ಎರಡು ವರ್ಷಗಳ ಪರ್ಯಾಯ ಪೂಜಾ ಕಾರ್ಯ ಪೂರ್ಣಗೊಳಿಸಿದ ಕೃಷ್ಣಾಪುರ ಮಠದ ಸಿಬಂದಿಯವರು ತಮ್ಮ ಸೊತ್ತುಗಳನ್ನು ಶ್ರೀ ಕೃಷ್ಣಮಠದಿಂದ ತಮ್ಮ ಮಠಕ್ಕೆ ಕೊಂಡೊಯ್ಯುವ ಮತ್ತು ಮುಂದಿನ ಎರಡು ವರ್ಷಗಳ ಪರ್ಯಾಯ ಪೂಜೆ ನಡೆಯುವ ಪುತ್ತಿಗೆ ಮಠದಿಂದ ಅಗತ್ಯದ ಸೊತ್ತುಗಳನ್ನು ಶ್ರೀಕೃಷ್ಣಮಠಕ್ಕೆ ತರುವ, ಶ್ರೀಮಠದ ವ್ಯವಸ್ಥೆಗೆ ತಕ್ಕಂತೆ ಕಚೇರಿ ಇತ್ಯಾದಿಗಳನ್ನು ಸಿದ್ಧಪಡಿಸುವ ದೃಶ್ಯಗಳು ಕಂಡುಬಂದವು. ಬುಧವಾರ ಮಧ್ಯಾಹ್ನ ಕೃಷ್ಣಾಪುರ ಮಠದಿಂದ ಪರ್ಯಾಯದ ಕೊನೆಯ ಅನ್ನಸಂತರ್ಪಣೆ ನಡೆದ ಬಳಿಕ ಸೂರೆ ಬಿಡುವ ಪ್ರಕ್ರಿಯೆ ನಡೆಯಿತು.

ಪುತ್ತಿಗೆ ಮಠವನ್ನು ವಿವಿಧ ಹೂವು, ಗೆಂದಾಳೆ ಎಳನೀರು, ಅಡಿಕೆ ಗೊನೆ ಹೀಗೆ ವಿವಿಧ ಬಗೆಯ ವಸ್ತುಗಳಿಂದ ಅಲಂಕರಿಸಲಾಗಿತ್ತು. ಇದರ ಜತೆಗೆ ವಿದ್ಯುದ್ದೀಪದ ಅಲಂಕಾರ ಇನ್ನಷ್ಟು ಮೆರಗು ನೀಡಿತ್ತು. ಮಠದ ಒಳಗೆ ಪಟ್ಟದ ದೇವರ ಗುಡಿಗೂ ಹೂವಿನ ಅಲಂಕಾರ ಮಾಡಲಾಗಿತ್ತು. ಪರ್ಯಾಯೋತ್ಸವದ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಸಾವಿರಾರು ಮಂದಿ ಅನ್ನ ಪ್ರಸಾದ ಸ್ವೀಕರಿಸಿದರು.

Advertisement

ಬುಧವಾರ ಸಂಜೆ ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ರಥಬೀದಿಯಲ್ಲಿ ರಥೋತ್ಸವ ನಡೆಯಿತು. ಅನಂತರ ಶ್ರೀಪಾದರು ಸರ್ವಜ್ಞ ಪೀಠದಿಂದ ಭಕ್ತರಿಗೆ ಅನುಗ್ರಹ ಮಂತ್ರಾಕ್ಷತೆ ನೀಡಿದರು. ಪರ್ಯಾಯ ಬಿಟ್ಟೇಳುವ ಸ್ವಾಮೀಜಿಯವರ ಕಡೆಯಿಂದ ನಡೆಯುವ ಪ್ರಾತಃಕಾಲದ ಪೂಜೆಗಳು ನೆರವೇರಿದವು.

Advertisement

Udayavani is now on Telegram. Click here to join our channel and stay updated with the latest news.

Next