ಮೈಸೂರು: ಮೈಮುಲ್ ನೇಮಕಾತಿಯಲ್ಲಿ ಅವ್ಯವಹಾರ ನಡೆದಿರುವುದು ನಿಜವಾಗಿದ್ದರೆ ಸಾಕ್ಷ್ಯವನ್ನು ಸಾರ್ವಜನಿಕರ ಮುಂದಿಡಬೇಕು. ಅದುಬಿಟ್ಟು ನನ್ನ ಬಳಿ ಮತ್ತಷ್ಟು ಆಡಿಯೋಗಳಿದ್ದು ಮುಂದೆ ಬಿಡುಗಡೆ ಮಾಡುತ್ತೇನೆ ಎಂದು ಬ್ಲಾಕ್‌ಮೇಲ್ ಮಾಡುವುದು ತರವಲ್ಲ ಎಂದು ಸಚಿವ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಮೈಮುಲ್ ಸಿಬ್ಬಂದಿ ನೇಮಕ ಪ್ರಕ್ರಿಯೆ ವಿಚಾರ ಕಳೆದ ಆರೇಳು ತಿಂಗಳಿನಿಂದ ನಡೆದುಕೊಂಡು ಬಂದಿದೆ. ಸಂಸ್ಥೆಯಲ್ಲಿ ಕಳೆದ 6 ತಿಂಗಳಿನಿಂದ ನೇಮಕಾತಿ ಚಟುವಟಿಕೆ ನಡೆಯುತ್ತಿವೆ. ಸಾರಾ ಹೇಳಿದ ತಕ್ಷಣ, ಆರೋಪ ಮಾಡಿದ ತಕ್ಷಣ ನೇಮಕಾತಿ ರದ್ದು ಮಾಡಲು ಅಸಾಧ್ಯ. ಈಗಾಗಲೇ ಇಲಾಖೆಯಿಂದ ತನಿಖೆ ನಡೆಯುತ್ತಿದೆ.
ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದರು. ತನಿಖೆ ಯಾರು ಮಾಡಬೇಕು ಅಂತ ಸಾ.ರಾ. ಮಹೇಶ್ ಅವರನ್ನು ಕೇಳಿ ತನಿಖೆ ಮಾಡಿಸುವುದಲ್ಲ. ಇಲಾಖೆಗೆ ಸಂಬಂಧಪಟ್ಟಿದ್ದು ಯಾರು ಮಾಡಿದರೇನು. ಹಾಗಾಗಿ ಇಲಾಖೆಯಿಂದಲೇ ತನಿಖೆ ನಡೆಯುತ್ತಿದೆ. ಇದನ್ನು ರಿಜಿಸ್ಟ್ರರ್ ಕೂಲಂಕುಶವಾಗಿ ಪರಿಶೀಲಿಸುತ್ತಾರೆ ಎಂದರು.
ಸಾರಾ ಡೇರಿ ಮುಂದೆ ಪ್ರತಿಭಟನೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಅದು ಅವರ ಹಕ್ಕು ಪ್ರತಿಭಟನೆ ಮಾಡಬೇಡಿ ಎಂದು ನಾವು ಹೇಳಲಾಗುವುದಿಲ್ಲ. ಇದು ರೈತರ ಸಂಸ್ಥೆ ರೈತರಿಗೋಸ್ಕರ ಇರುವ ಸಂಸ್ಥೆ. ನೌಕರರ ಸಮಸ್ಯೆ ಇದೆ ಎಂದು ನೇಮಕಾತಿಗೆ ಅನುಮೋದನೆ ಪಡೆದಿದ್ದೇ ಅವರು. ಈಗ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆಡಿಯೋ ಬಿಡುಗಡೆ ಮಾಡ್ತೀನಿ, ಮಾಡ್ತೀನಿ ಎನ್ನುತ್ತಿದ್ದಾರೆ.
ನೇಮಕಾತಿಯಲ್ಲಿ ಅರ್ಹ ಅಭ್ಯರ್ಥಿ ಬಿಟ್ಟು ಬೇರೆಯವರಿಗೆ ಉದ್ಯೋಗ ನೀಡಬಾರದು, ಜೊತೆಗೆ ಅನ್ಯಾಯವಾಗಬಾರದು. ಈ ಬಗ್ಗೆ ಇಲಾಖೆಯವರು ವಿಚಾರಣೆ ನಡೆಸುತ್ತಿದ್ದು, ಸತ್ಯಾಂಶ ಹೊರಬರಲಿದೆ ಎಂದರು.
ಸಚಿವ ಮಾಧುಸ್ವಾಮಿ ರೈತ ಮಹಿಳೆ ಜೊತೆ ವರ್ತಿಸಿದ್ದು ಸರಿಯಲ್ಲ. ನನಗೆ ಮಾಹಿತಿಯೂ ಇಲ್ಲ, ಕೇಳಲು ಮಾಧು ಸ್ವಾಮಿ ಸಿಕ್ಕಿಲ್ಲ, ಮಂತ್ರಿಗಳು ಮಾತನಾಡು ವಾಗ ಎಚ್ಚರಿಕೆಯಿಂದ ಇರಬೇಕು, ಅವರು ಮಾತನಾಡುವ ವೇಳೆ ಅಲ್ಲಿನ ಸಂದರ್ಭ ಹೇಗಿತ್ತು ಎಂಬ ಬಗ್ಗೆ ನನಗೆ ತಿಳಿದಿಲ್ಲ.
-ಎಸ್.ಟಿ. ಸೋಮಶೇಖರ್, ಸಚಿವ