ದೊಡ್ಡಬಳ್ಳಾಪುರ: ರಸಗೊಬ್ಬರ ಮಾರಾಟದ ಅಂಗಡಿ ಗಳ ಮುಂದೆ ರಸಗೊಬ್ಬರದ ಬೆಲೆ ಪ್ರದರ್ಶನ ಮಾಡುವಂತೆ ಮಾರಾಟಗಾರರಿಗೆ ಸೂಚಿಸಲಾಗಿದ್ದು, ಹೊಸಕೋಟೆ ತಾಲೂಕಿನಲ್ಲಿ ನಕಲಿ ಕ್ರಿಮಿನಾಶ ಮಾರಾಟ ಮಾಡುತ್ತಿದ್ದವರನ್ನು ಪತ್ತೆ ಮಾಡಿ 35 ಜನರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಯಸ್ವಾಮಿ ಹೇಳಿದರು.
ನಗರದ ಕೃಷಿ ಇಲಾಖೆ ಕಚೇರಿಯಲ್ಲಿ ರೈತರು ಹಾಗೂ ರಸಗೊಬ್ಬರ ಮಾರಾಟ ಮಳಿಗೆ ಮಾಲೀಕರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರಾಗಿ, ಮುಸುಕಿನಜೋಳ ಸೇರಿದಂತೆ ಇತರೆ ಬಿತ್ತನೆ ಸಮಯದಲ್ಲಿ ರಸಗೊಬ್ಬರ ಬಳಕೆ ಕುರಿತಂತೆ ರೈತರಿಗೆ ಮಾಹಿತಿ ನೀಡಲು 80 ಸಾವಿರ ಕರಪತ್ರ ಮುದ್ರಿಸಿ ವಿತರಣೆ ಮಾಡಲಾಗುತ್ತಿದೆ. ರಾಗಿ ಸೇರಿದಂತೆ ಒಂದೇ ಬೆಳೆಯನ್ನೇ ಬೆಳೆಯುವುದಕ್ಕೆ ಬದಲಾಗಿ ಎಣ್ಣೆಕಾಳು ಬೆಳೆ ಬೆಳೆಯುವ ಕಡೆಗೂ ಆದ್ಯತೆ ನೀಡಬೇಕು ಎಂದರು.
16 ಪೋಷಕಾಂಶ ಅಗತ್ಯ: ಯಾವುದೇ ಒಂದು ಬೆಳೆಗೆ 16 ರೀತಿಯ ಪೋಷಕಾಂಶಗಳ ಅಗತ್ಯವಿದೆ. ಇದರಲ್ಲಿ ಒಂದಿಷ್ಟು ಪೋಷಕಾಂಶಗಳು ಸ್ವಾಭಾವಿಕವಾಗಿ ಗಾಳಿ, ನೀರಿನ ಮೂಲಕ ಪಡೆದುಕೊಳ್ಳುತ್ತವೆ. ಉಳಿದವನ್ನು ನಾವು ನೀಡಬೇಕಾಗುತ್ತದೆ. ಬಹುತೇಕ ರೈತರು ರಾಗಿ, ಜೋಳ ಬಿತ್ತನೆ ಸಂದರ್ಭದಲ್ಲಿ ಯಾವುದಾದರು ಒಂದೇ ರೀತಿಯ ರಸಗೊಬ್ಬರವನ್ನೇ ಅವಲಂಬಿಸುತ್ತಾರೆ. ಆದರೆ, ನಮ್ಮಲ್ಲಿ ಲಭ್ಯವಿರುವ ರಸಗೊಬ್ಬರ ಸಂಯೋಜನೆಗೊಳಿಸಿ ನೀಡುವುದರಿಂದಲು ಉತ್ತಮ ಇಳುವರಿ ಪಡೆಯಲು ಸಾಧ್ಯವಿದೆ ಎಂದರು.
ಬಿತ್ತನೆ ಬೀಜ ದಾಸ್ತಾನು: ಒಂದು ಎಕರೆ ಪ್ರದೇಶಕ್ಕೆ ಅಗತ್ಯವಿರುವ ರಸಗೊಬ್ಬರದ ಬಳಕೆ, ಯಾವ ಬೆಳೆಗೆ ಎಷ್ಟು ಪ್ರಮಾಣದಲ್ಲಿ ರಸಗೊಬ್ಬರ ಬಳಕೆ ಮಾಡಬೇಕಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಕರಪತ್ರದಲ್ಲಿ ಮುದ್ರಿಸಲಾಗಿದೆ. ಜಿಲ್ಲೆಯ ರೈತರಿಗೆ ಅಗತ್ಯವಿರುವ ರಾಗಿ,ಮುಸುಕಿನಜೋಳ, ಅಲಸಂದೆ, ತೊಗರಿ ಬಿತ್ತನೆ ಬೀಜ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ ಎಂದರು.
ರೈತರು ಯಾವುದೇ ರೀತಿಯ ಗಾಳಿಸುದ್ದಿಗೆ ಕಿವಿಗೊಡದೆ ಕೃಷಿ ಇಲಾಖೆಯಿಂದ ಬಿತ್ತನೆ ಬೀಜಗಳನ್ನು ರೀಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ. ರೈತರು ಬಿತ್ತನೆ ಮಾಡುವುದಕ್ಕೂ ಮುನ್ನ ಒಂದಿಷ್ಟು ಬೀಜ, ಖರೀದಿಯ ರಶೀದಿ, ಬಿತ್ತನೆ ಬೀಜದ ಬ್ಯಾಗನ್ನು ಬೆಳೆ ಕಟಾವಿಗೆ ಬರುವವರೆಗೂ ಇಟ್ಟು ಕೊಳ್ಳಬೇಕು. ಬಿತ್ತನೆ ಬೀಜ ಕಳಪೆಯಾದರೆ ಬೀಜದ ಕಂಪನಿ ವಿರುದ್ಧ ದೂರು ದಾಖಲಿಸಲು ಸುಲಭವಾಗಲಿದೆ ಎಂದರು.
ಗೊಬ್ಬರ ಕೊರತೆ ಆಗದಂತೆ ಕ್ರಮ ಕೈಗೊಳ್ಳಿ: ರೈತ
ಸಂಘದ ಜಿಲ್ಲಾ ಅಧ್ಯಕ್ಷ ಪ್ರಸನ್ನ, ತಾಲೂಕು ಅಧ್ಯಕ್ಷ ಹನುಮೇಗೌಡ, ಮುಖಂಡ ಹನುಮಂತರಾಯಪ್ಪ, ವಸಂತಕುಮಾರ್, ಮುತ್ತೇಗೌಡ, ಸತೀಶ್ ಮಾತನಾಡಿ, ಬಿತ್ತನೆ ಸಂದರ್ಭದಲ್ಲಿ ರಸಗೊಬ್ಬರ ಹೆಚ್ಚಿನ ಬೆಲೆಗೆ ಮಾರಾಟ ಮಾಡದಂತೆ, ಗೊಬ್ಬರ ಕೊರತೆಯಾಗದಂತೆ ಕೃಷಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು. ಕೃಷಿ ಇಲಾಖೆ ತಾಲೂಕು ಸಹಾಯಕ ನಿರ್ದೇಶಕಿ ಸುಶೀಲಮ್ಮ, ತಾಂತ್ರಿಕ ವಿಭಾಗದ ರೂಪಾ, ಕಸಬಾ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಗೀತಾ ಇದ್ದರು.