ಹರಪನಹಳ್ಳಿ: ನೀರಿನ ಶಾಶ್ವತ ಮೂಲಗಳನ್ನು ಶುದ್ಧೀಕರಣಗೊಳಿಸುವುದು ಸೇರಿದಂತೆ ಅಂತರ್ಜಲ ಮರುಪೂರಣ ಮೂಲಕ ಬೇಸಿಗೆ ಸಮಯದಲ್ಲಿ ನೀರಿನ ಬವಣೆ ನೀಗಿಸಲು ತಾಲೂಕಿನ ಉಚ್ಚಂಗಿದುರ್ಗ ಗ್ರಾಪಂ ಆಡಳಿತ ಮಂಡಳಿ ಶ್ರಮಿಸುತ್ತಿದೆ. ಬೇಸಿಗೆ ಆರಂಭವಾಗಿದ್ದು, ಈಗಾಗಲೇ ತಾಲೂಕಿನ ಹಲವೆಡೆ ನೀರಿನ ಅಭಾವ ಸೃಷ್ಠಿಯಾಗಿದೆ.
ಅಂತರ್ಜಲದ ಮರುಪೂರಣಕ್ಕೆ ಹೆಚ್ಚಿನ ಒತ್ತು ನೀಡಿದರೆ ಭವಿಷ್ಯದಲ್ಲಿ ನೀರಿನ ಸಮಸ್ಯೆಯಿಂದ ಹೊರಬರಲು ಸಾಧ್ಯವಾಗುತ್ತದೆ ಎನ್ನುವ ಉದ್ದೇಶದಿಂದ ಐತಿಹಾಸಿಕ ಬಾವಿ, ಪುಷ್ಕರಣಿಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಗ್ರಾಮದ ಹಾಲಮ್ಮನ ತೋಪಿನಲ್ಲಿರುವ ಪುಷ್ಕರಣಿ ಸ್ವಚ್ಛತೆ, ಉಚ್ಚೆಂಗೆಮ್ಮದೇವಿ ದೇಗುಲದ ಮುಂಭಾಗದ ಬಾವಿ, ಹೊಂಡಗಳನ್ನು ಅಂತರ್ಜಲ ಮರುಪೂರ್ಣಗೊಳಿಸಲಾಗಿದೆ.
ಜನರಿಗೆ ಉದ್ಯೋಗವಿಲ್ಲದ ಸಮಯದಲ್ಲಿ ದುಡಿಯುವ ಕೈಗಳಿಗೆ ಕೆಲಸವೂ ಸಿಕ್ಕಿದೆ. ಒಂದು ವಾರದಿಂದ ಸ್ವಚ್ಛಗೊಳಿಸುವ ಕಾಮಗಾರಿ ನಿರಂತರವಾಗಿ ಸಾಗಿದೆ. ಕೆರೆ, ಗೋಕಟ್ಟೆ, ಚೆಕ್ ಡ್ಯಾಂ ಸೇರಿದಂತೆ ಎಲ್ಲಿಯೂ ಒಂದು ಹನಿ ನೀರು ದೊರೆಯುತ್ತಿಲ್ಲ. ಇದರಿಂದ ಜನರು ಹಾಗೂ ಜಾನುವಾರುಗಳು ತತ್ತರಿಸಿ ಹೋಗಿವೆ.
ಇಂತಹ ಕಠಿಣ ಪರಿಸ್ಥಿತಿಯಲ್ಲಿ ಗ್ರಾಮಸ್ಥರಿಗೆ ಕುಡಿಯುವ ನೀರು ಒದಗಿಸುವುದು ಗ್ರಾಪಂ ಜವಾಬ್ದಾರಿಯಾಗಿರುತ್ತಿದೆ. ಈ ನಿಟ್ಟಿನಲ್ಲಿಯೇ ಹೊಂಡಗಳನ್ನು ಸ್ವಚ್ಛಗೊಳಿಸಿ ಅವುಗಳಿಗೆ ಟ್ಯಾಂಕರ್ ಮೂಲಕ ನೀರು ತುಂಬಿಸಲಾಗುತ್ತಿದೆ. ಈ ಮೂಲಕ ಪ್ರಾಣಿ, ಪಕ್ಷಿ, ಜಾನುವಾರುಗಳಿಗೆ ಕುಡಿಯಲು ನೀರು ದೊರೆಕಿದೆ.
ನೀರಿಗೆ ಬೇರೆ ಪರ್ಯಾಯ ಮಾರ್ಗವಿಲ್ಲ. ಆದ್ದರಿಂದ ನೀರಿನ ದುರುಪಯೋಗ ತಡೆಯುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ಅಂತರ್ಜಲ ರಕ್ಷಣೆ ಎಲ್ಲರ ಜವಾಬ್ದಾರಿ ಎಂದು ಗ್ರಾಪಂ ಅಧ್ಯಕ್ಷೆ ಎಲ್. ಸುಮಲತಾ ನಿಂಗಪ್ಪ ಹಾಗೂ ಉಪಾಧ್ಯಕ್ಷೆ ಪಿ.ಉಚ್ಚೆಂಗೆಮ್ಮ ಅಂಜಿನಪ್ಪ ತಿಳಿಸುತ್ತಾರೆ.
* ಎಸ್.ಎನ್.ಕುಮಾರ್ ಪುಣಬಗಟ್ಟಿ