Advertisement

ಲಕ್ಷಾಂತರ ಜನ ಭಾಗಿಯಾಗಿದ್ದ ಪುಷ್ಕರ ನಡೆಸಿದ್ದ್ಯಾರು?

08:19 AM Sep 21, 2017 | Team Udayavani |

ಮಂಡ್ಯ: ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಜೀವನದಿ ಕಾವೇರಿ ಪುಷ್ಕರಕ್ಕೆ ರಾಜ್ಯ- ಹೊರ ರಾಜ್ಯಗಳಿಂದ ಪ್ರತಿ ದಿನ ಲಕ್ಷಾಂತರ ಜನ ಪುಣ್ಯ ಸ್ನಾನಕ್ಕೆಂದು ಆಗಮಿಸುತ್ತಿದ್ದು, ರಾಜ್ಯ ಸರ್ಕಾರ ಕಿಂಚಿತ್‌ ಸೌಲಭ್ಯದ ವ್ಯವಸ್ಥೆ ಸಹ ಮಾಡಿಲ್ಲ. ಕಾವೇರಿ ಪುಷ್ಕರಕ್ಕೂ ತನಗೂ ಯಾವುದೇ ಸಂಬಂಧವಿಲ್ಲವೆಂದು ಕಣ್ಮುಚ್ಚಿ ಕುಳಿತಿದೆ.

Advertisement

ಕಾವೇರಿ ನದಿಯ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಶ್ರೀರಂಗಪಟ್ಟಣಕ್ಕೆ ಲಕ್ಷಾಂತರ ಜನ ಸೇರುವ ಸ್ಥಳದಲ್ಲಿ ಸೂಕ್ತ ಬಂದೋಬಸ್ತ್, ಕಾವೇರಿ ನದಿ ಸ್ನಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಭದ್ರತೆ, ನದಿ ದಡದಲ್ಲಿ ಸ್ನಾನ ಮಾಡುವಾಗ ದುರಂತ ಸಂಭವಿಸದಂತೆ ಮುನ್ನೆಚ್ಚರಿಕೆ ಹಾಗೂ ಒಂದು ವೇಳೆ ಅಪಾಯ ಸಂಭವಿಸಿದರೆ ಭಕ್ತಾದಿಗಳ ರಕ್ಷಣೆಗೆ ಯಾವುದೇ ವ್ಯವಸ್ಥೆಯನ್ನೂ ಜಿಲ್ಲಾಡಳಿತ ಮಾಡಿಲ್ಲ. ದೇಶದ 12 ಪ್ರಮುಖ ನದಿಗಳಲ್ಲಿ ವರ್ಷ ಕ್ಕೊಮ್ಮೆ ನಡೆಯುವ ಪ್ರಸಿದ್ಧ ಪುಷ್ಕರಣೆ ಸಂದರ್ಭ ದಲ್ಲಿ ಸ್ಥಳೀಯ ಸರ್ಕಾರಗಳು ಭಕ್ತಾದಿಗಳಿಗೆ ಸೌಲಭ್ಯ ಕಲ್ಪಿಸಿ ದೇಶದ ಗಮನ ಸೆಳೆದಿವೆ.  ಉತ್ತರ ಪ್ರದೇಶದಲ್ಲಿ ಗಂಗಾನದಿಯ ಪುಷ್ಕರಣೆ ವೇಳೆ ಮಾಜಿ ಮುಖ್ಯಮಂತ್ರಿ ಅಖೀಲೇಶ್‌ ಯಾದವ್‌ ಸರ್ಕಾರದಿಂದಲೇ ಪುಷ್ಕರಣೆ ಏರ್ಪಡಿಸಿ ಮೆಚ್ಚುಗೆಗೆ ಭಾಜನರಾಗಿದ್ದರು.

ಅಪರೂಪಕ್ಕೆ ನಡೆಯುವ ಲಕ್ಷಾಂತರ ಭಕ್ತರನ್ನು ಆಕರ್ಷಿಸುವ ಕಾವೇರಿ ಪುಷ್ಕರವನ್ನು ರಾಜ್ಯ ಸರ್ಕಾರವೇ ವ್ಯವಸ್ಥಿತವಾಗಿ ಸಂಘಟಿಸಿ ದ್ದರೆ, ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದು ಕೀರ್ತಿ ಸಂಪಾದಿಸುವ ಅವಕಾಶವನ್ನು ಸರ್ಕಾರ ಕಳೆದುಕೊಂಡಿದೆ. ಮುಜರಾಯಿ ಇಲಾಖೆಯ ಆಯುಕ್ತರು ಪುಷ್ಕರಣೆಯನ್ನು ಖಾಸಗಿ ಸಂಘಟನೆ ಏರ್ಪಡಿಸಿದೆ. ಸ್ಥಳೀಯ ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿಸಿದೆ. ನಮಗೂ ಅದಕ್ಕೂ ಸಂಬಂಧವಿಲ್ಲ ಎನ್ನುವ ಧೋರಣೆ ತೋರಿದೆ. ಜಿಲ್ಲಾಡಳಿತವು ಪುಷ್ಕರಣೆ ನಮಗೆ ಸಂಬಂಧಿಸಿದ್ದಲ್ಲ. ಮುಜರಾಯಿ
ಇಲಾಖೆ ವ್ಯಾಪ್ತಿಗೆ ಬರುವುದು ಎಂದು ಹೇಳಿ ಕೈ ತೊಳೆದುಕೊಂಡಿದೆ.

ಪುಷ್ಕರ ಹೆಸರಿನಲ್ಲಿ ನಡೆಯುತ್ತಿರುವ ಪಿಂಡ ಪ್ರದಾನ, ಅಸ್ಥಿ , ಕೊಳಕು ಬಟ್ಟೆಗಳು ಹಾಗೂ ಇನ್ನಿತರ ಪೂಜಾ ಸಾಮಗ್ರಿಗಳ ವಿಸರ್ಜನೆಯಿಂದ ಅಕ್ಷರಶಃ ಕಾವೇರಿ ನಲುಗಿಹೋಗಿದ್ದಾಳೆ. ಪುಷ್ಕರದಿಂದ ಕಾವೇರಿ ಕೊಳಕಾಗುತ್ತಿರುವುದಕ್ಕೆ ಹೊಣೆ ಯಾರು ಎನ್ನುವುದಕ್ಕೆ ಉತ್ತರವಿಲ್ಲ. ಎಲ್ಲರಿಂದ ಜಾರಿಕೆ ಉತ್ತರ: ಈ ಮೊದಲು ಅಖೀಲ ಕರ್ನಾಟಕ ಕಮ್ಮವಾರಿ ಸಂಘದವರು ಇದರ ಆಯೋಜಕರೆಂದು ನಂಬಲಾಗಿತ್ತು. ಆದರೆ, ಆ ಸಂಘದವರು ಪುಷ್ಕರ ಮಹೋತ್ಸವ ಆಯೋಜನೆ ನಮ್ಮದಲ್ಲ. ಬಂದ ಭಕ್ತರಿಗೆ ಊಟದ ವ್ಯವಸ್ಥೆ ಮಾಡಿದ್ದೇವೆಂದು ಹೇಳುತ್ತಿ ದ್ದಾರೆ. ಜಿಲ್ಲಾಧಿಕಾರಿಯವರು ಮುಜರಾಯಿ ಇಲಾಖೆ ಆಯುಕ್ತರಿಗೆ ಪತ್ರ ಬರೆದು ತಮ್ಮ ಜವಾಬ್ದಾರಿ ಮುಗಿಯಿತೆಂದು ಕುಳಿತಿದ್ದಾರೆ. ಶಾಸಕ ರಮೇಶ್‌ ಬಂಡಿಸಿದ್ದೇಗೌಡರು ನಾವೇನು ಪುಷ್ಕರಕ್ಕೆ ಅನುಮತಿ ಕೊಟ್ಟಿಲ್ಲ. ಅದನ್ನು ನಡೆಸುತ್ತಿ ರುವವರನ್ನೇ ಕೇಳಿ ಎಂದು ಉತ್ತರ ನೀಡಿದ್ದಾರೆ. 

ಪುಷ್ಕರ ನಡೆಸುತ್ತಿರುವುದು ಖಾಸಗಿ ವ್ಯಕ್ತಿಗಳು. ಅವರ ಸಂಪ್ರದಾಯದಂತೆ ಪೂಜೆ ಮಾಡುತ್ತಿದ್ದಾರೆ. ನಾವು ಅದನ್ನು ತಡೆಯಲು ಬರುವುದಿಲ್ಲ. ಅವರು ಖಾಸಗಿಯಾಗಿ ಕಾರ್ಯಕ್ರಮ ಮಾಡಿಕೊಳ್ಳುತ್ತಿರುವುದರಿಂದ ರಾಜ್ಯ ಸರ್ಕಾರದಿಂದ ಯಾವುದೇ ಸಹಾಯ ಕೇಳಿಲ್ಲ. 
●ಷಡಕ್ಷರಿಸ್ವಾಮಿ, ಮುಜರಾಯಿ ಇಲಾಖೆ ಆಯುಕ್ತ

Advertisement

ಪುಷ್ಕರ ರಾಜ್ಯ ಸರ್ಕಾರದ ನೇತೃತ್ವದಲ್ಲಿ ನಡೆಯಬೇಕಿತ್ತು. ಆಂಧ್ರದಲ್ಲಿ ನಡೆದಾಗ ಅಲ್ಲಿನ ಸರ್ಕಾರವೇ ಸಂಪೂರ್ಣ ಜವಾಬ್ದಾರಿ ಹೊತ್ತಿತ್ತು. ಅಚ್ಚುಕಟ್ಟಾಗಿ ಪುಷ್ಕರ ನಡೆದಿತ್ತು. ಆದರೆ, ಇಲ್ಲಿ ಯಾರ ನೇತೃತ್ವ ಎನ್ನುವುದೇ ಅರ್ಥವಾಗುತ್ತಿಲ್ಲ.
●ಗಣೇಶ ಸ್ವರೂಪಾನಂದಗಿರಿ ಸ್ವಾಮೀಜಿ, ಆದಿಶಂಕರ ಮಠ, ಗಂಜಾಂ

ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next