ಆತ ಮಧ್ಯಮ ವರ್ಗದ ಹುಡುಗ. ಆತನಿಗೊಂದು ಕನಸಿದೆ. ಆ ಕನಸು ದುಬೈಗೆ ಹೋಗಬೇಕೆಂಬುದು. ಆದರೆ, ಕನಸಿನ ಜೊತೆಗೆ ಹೆಗಲ ಮೇಲೆ ಒಂದಿಷ್ಟು ಜವಾಬ್ದಾರಿ, ಎದೆಯಲ್ಲೊಂದು ಪ್ರೀತಿಯಿದೆ… ಇಂತಹ ಸಂದಿಗ್ಧತೆಯಲ್ಲೇ ಆತ ಒಂದು ನಿರ್ಧಾರಕ್ಕೆ ಬರುತ್ತಾನೆ. ಅದೇನು ಎಂಬ ಕುತೂಹಲ ನಿಮಗಿದ್ದರೆ ನೀವು “ಪುರುಷೋತ್ತಮನ ಪ್ರಸಂಗ’ ಸಿನಿಮಾ ನೋಡಬಹುದು.
“ಪುರುಷೋತ್ತಮ ಪ್ರಸಂಗ’ ಹೆಸರಿಗೆ ತಕ್ಕಂತೆ ಪುರುಷೋತ್ತಮನ ಜೀವನದ ಸುತ್ತ ಸಾಗುವ ಕಥೆ. ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಆತ ಹೇಗೆಲ್ಲಾ ಅಗ್ನಿಪರೀಕ್ಷೆಗೆ ಒಳಗಾಗುತ್ತಾನೆ ಎಂಬುದು ಸಿನಿಮಾ ಹೈಲೈಟ್. ನಿರ್ದೇಶಕ ದೇವದಾಸ್ ಕಾಪಿಕಾಡ್ ಇಡೀ ಸಿನಿಮಾದುದ್ದಕ್ಕೂ ಕಾಮಿಡಿ ಅಂಶದ ಜೊತೆಗೆ ಸೆಂಟಿಮೆಂಟ್ ಫೀಲ್ ಉಳಿಸಿಕೊಂಡು ಬಂದಿದ್ದಾರೆ. ಮುಖ್ಯವಾಗಿ ಮಿಡಲ್ ಕ್ಲಾಸ್ ಫ್ಯಾಮಿಲಿಯ ಕಷ್ಟ, ಅವರ ಕನಸು, ಈ ನಡುವಿನ ಒದ್ದಾಟವನ್ನು ಬಿಂಬಿಸುವ ಹಲವು ದೃಶ್ಯಗಳು ಮನಮುಟ್ಟುವಂತೆ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಇದರ ಜೊತೆಗೆ ಇಡೀ ಸಿನಿಮಾ ಮಂಗಳೂರು ಹಿನ್ನೆಲೆಯಲ್ಲಿ ಸಾಗುತ್ತದೆ. ಮಂಗಳೂರು ಕನ್ನಡ, ಅಲ್ಲಿನ ಪರಿಸರ ಎಲ್ಲವೂ ಸಿನಿಮಾದ ಚೆಂದ ಹೆಚ್ಚಿಸಿದೆ. ಚಿತ್ರದಲ್ಲಿ ತುಳು ಸಿನಿಮಾ, ರಂಗಭೂಮಿಯ ಅನೇಕ ಹಾಸ್ಯ ಕಲಾವಿದರು ನಟಿಸಿದ್ದಾರೆ. ಸನ್ನಿವೇಶಕ್ಕನುಗುಣವಾಗಿ ಕಾಮಿಡಿ ಟ್ರ್ಯಾಕ್ ತೆರೆದುಕೊಳ್ಳುವ ಮೂಲಕ ಕಥೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ.
ಮುಖ್ಯವಾಗಿ ನಾಯಕ ಅಜಯ್ ಮೊದಲ ಚಿತ್ರದಲ್ಲೇ ಈ ತರಹದ ಒಪ್ಪಿಕೊಂಡು ಭವಿಷ್ಯದ ಭರವಸೆ ಮೂಡಿಸಿದ್ದಾರೆ. ಯಾವುದೇ ಬಿಲ್ಡಪ್ ಇಲ್ಲದ, ಅತಿಯಾದ ಕಮರ್ಷಿಯಲ್ ಅಂಶಗಳಿಂದ ಮುಕ್ತವಾಗಿರುವ ಪಾತ್ರದಲ್ಲಿ ನಟಿಸಿ ಕಲಾವಿದನಾಗುವ ಕನಸು ಕಂಡಿದ್ದಾರೆ. ಪಾತ್ರ ಹಾಗೂ ಮಂಗಳೂರು ಕನ್ನಡಕ್ಕೆ ಅಜಯ್ ಒಗ್ಗಿಕೊಂಡಿದ್ದಾರೆ. ನಾಯಕಿ ರಿಷಿಕಾ ನಾಯಕ್ ಸಾದಾಸೀದಾ ಹುಡುಗಿಯಾಗಿ ಇಷ್ಟವಾಗುತ್ತಾರೆ.
ಉಳಿದಂತೆ ಅರವಿಂದ್ ಬೋಳಾರ್, ಭೋಜರಾಜ ವಾಮಂಜೂರು, ನವೀನ್ ಡಿ ಪಡೀಲ್ ಸೇರಿದಂತೆ ಇತರರು ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಒಂದು ಫ್ಯಾಮಿಲಿ ಡ್ರಾಮಾವಾಗಿ ಪುರುಷೋತ್ತಮ ರಂಜಿಸುವಲ್ಲಿ ಹಿಂದೆ ಬಿದ್ದಿಲ್ಲ.
ರವಿಪ್ರಕಾಶ್ ರೈ