ಮಸ್ಕಿ: ಸರ್ಕಾರ ಅರಿವು ಸಾಲ ಯೋಜನೆಯನ್ನು ಮೊದಲಿನಂತೆ ಯಥಾಸ್ಥಿಯಲ್ಲಿ ಮುಂದುವರಿಸುವಂತೆ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಶನ ಕರ್ನಾಟಕ ಮಸ್ಕಿ ಘಟಕದ ಸದಸ್ಯರು ಒತ್ತಾಯಿಸಿದರು.
ಪಟ್ಟಣದ ಬಸವೇಶ್ವರ ನಗರದಲ್ಲಿರುವ ತಹಸಿಲ್ ಕಚೇರಿ ಮುಂಭಾಗದಲ್ಲಿ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಶನ ಕರ್ನಾಟಕ ಮಸ್ಕಿ ಘಟಕದ ವತಿಯಿಂದ ಸರ್ಕಾರಕ್ಕೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಕವಿತಾ. ಆರ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಅಧ್ಯಕ್ಷೆ ನಿಶಾತ್ ಅಫ್ರೂಜ್ ಮಾತನಾಡಿ, ಸರ್ಕಾರ ಅಲ್ಪಸಂಖ್ಯಾತರ ವಿದ್ಯರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಅನುಕೂಲವಾಲೆಂದು ಈ ಹಿಂದೆ ಅರಿವು ಯೋಜನೆಯನ್ನು ಜಾರಿಗೆ ತಂದಿತ್ತು. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಅರಿವು ಸಾಲ ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಸಾಲ ನೀಡಲಾಗುತ್ತಿತ್ತು. ಆದರೆ, ಇದೀಗ ಅದರ ವಿಧಾನವನ್ನು ಬದಲಿಸಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು, ಸಾವಿರಾರು ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗ ಮಾಡಲು ಸಮಸ್ಯೆಯಾಗಿದೆ. ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ಈ ಯೋಜನೆ ಬಡತನ ರೇಖೆಗಿಂತ ಕೆಳಗಿರುವ ಮಕ್ಕಳ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ನೆರವಾಗಲಿದೆ. ಆದರೆ ಈಗ ರಾಜ್ಯದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡುತ್ತಿರುವ ಸುಮಾರು 30 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ ಮೊಟಕುಗೊಳಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹೀಗಾಗಿ ಸರ್ಕಾರ ಅರಿವು ಸಾಲ ಯೋಜನೆ ಯಥಾಸ್ಥಿತಿಯಲ್ಲಿ ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹಾಜರುನ್ನೀಸ್, ಸುಮಯ್ಯ, ತಂಕಿನ್, ನಿಶಾತ್ ನಾಜ್ನಿನ್, ಅಬ್ದುಲ್ ಗನಿಸಾಬ್, ಬಾಹರಲಿಸಾಬ್ ಸೇರಿದಂತೆ ಇನ್ನಿತರರಿದ್ದರು.