ಕುದೂರು: ಹುಲಿಕಲ್ ಗ್ರಾಮದ ಮಾರುತಿ ಬಡಾವಣೆಯ ಚರಂಡಿಗಳಲ್ಲಿ ಸ್ವಚ್ಛತೆ ಕಾಣದಂತಾಗಿದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ನಾಗರಿಕರನ್ನು ಕಾಡುತ್ತಿದೆ. ಹೋಬಳಿ ಹುಲಿಕಲ್ ಗ್ರಾಮದ ಚರಂಡಿಗಳಲ್ಲಿ ಕೊಳಚೆ ನೀರು ಸರಾಗವಾಗಿ ಮುಂದೆ ಹರಿಯದೇ ಮಡುಗಟ್ಟಿ ನಿಂತಿದೆ.
ಚರಂಡಿಯ ಅಕ್ಕಪಕ್ಕದಲ್ಲಿ ವಾಸ ಮಾಡುತ್ತಿರುವವರ ಪಾಡು ಹೇಳತೀರದಾಗಿದೆ. ಗ್ರಾಮ ಪಂಚಾಯ್ತಿ ಅಧಿಕಾರಿಗಳು ಮನಸ್ಸಿಗೆ ಬಂದಾಗ ಚರಂಡಿಗೆ ಬ್ಲೀಚಿಂಗ್ ಪೌಡರ್ ಸಿಂಪಡಿಸಿ ಹೋದರೆ ಮತ್ತೆ ಇತ್ತ ಮುಖ ಹಾಕುವುದೇ ಇಲ್ಲ ಎಂಬ ಆರೋಪ ಸಾರ್ವಜನಿಕರಲ್ಲಿ ಕೇಳಿ ಬರುತ್ತಿದೆ.
ಚರಂಡಿಗಳಲ್ಲಿ ಹೂಳು ತುಂಬಿದೆ: ಗ್ರಾಮದ ಎಲ್ಲಾ ಚರಂಡಿಗಳಲ್ಲಿ ಹೂಳು ತುಂಬಿಕೊಂಡು ಕೊಳಚೆ ನೀರು ಸಂಗ್ರಹವಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಗ್ರಾಮಸ್ಥರನ್ನು ಕಾಡುತ್ತಿದೆ. ಚರಂಡಿಯ ಕೊಳಚೆ ನೀರಿನಲ್ಲಿ ಹುಲ್ಲು ಮತ್ತು ಗಿಡ-ಗಂಟೆಗಳು ಬೆಳೆದು ನಿಂತಿದೆ. ಕೊಳಚೆ ನೀರಿನಲ್ಲಿಯೇ ಪ್ಲಾಸ್ಟಿಕ್ ಕವರ್, ಬಾಟಲ್‌ಗಳು ಮತ್ತು ತ್ಯಾಜ್ಯ ಅವರಿಸಿದೆ. ಗಬ್ಬೆದ್ದು ನಾರುತ್ತಿರುವ ಚರಂಡಿಯು ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿದ್ದು, ಸ್ಥಳೀಯರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
ಬೇಜವಾಬ್ದಾರಿ ಪ್ರದರ್ಶನ: ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಅನೇಕ ಬಾರಿ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಚರಂಡಿಗಳಲ್ಲಿನ ಹೂಳು ತೆಗೆಯಲು ಮತ್ತು ಸ್ವಚ್ಛಗೊಳಿಸಲು ಗ್ರಾಮ ಪಂಚಾಯ್ತಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಚುನಾವಣೆ ವೇಳೆ ಮತ ಕೇಳಲು ಬರುವ ಜನ ಪ್ರತಿನಿಧಿಗಳು ಮೂಲ ಸೌಲಭ್ಯ ಕಲ್ಪಿಸಲು ಮತ್ತ ಸ್ವಚ್ಛತೆ ಕಾಪಾಡಲು ನಿರ್ಲಕ್ಷ್ಯವಹಿಸಿದ್ದಾರೆ ಎಂದು ದೂರುಗಳು ನಾಗರಿಕರಿಂದ ಕೇಳಿ ಬರುತ್ತಿದೆ.
ಕಳಪೆ ಚರಂಡಿ ಕಾಮಗಾರಿ: ಹುಲಿಕಲ್ ಗ್ರಾಮದಲ್ಲಿ ಬಹುತೇಕ ಚರಂಡಿ ಕಾಮಗಾರಿಗಳು ಅವೈಜ್ಞಾನಿಕ ಮತ್ತು ಕಳಪೆಯಾಗಿವೆ. ಬೇಕಾಬಿಟ್ಟಿಯಾಗಿ ನಿರ್ಮಾಣ ಮಾಡಿರುವ ಚರಂಡಿಯಲ್ಲಿ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಕೆಲವಡೆ ಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತಿದೆ. ವೈಜ್ಞಾನಿಕ ಚರಂಡಿ ಕಾಮಗಾರಿ ಅನುಷ್ಠಾನಕ್ಕೆ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಎಚ್ಚರ ವಹಿಸಬೇಕಿತ್ತು.
ಇಚ್ಛಾಶಕ್ತಿ ಕೊರತೆ ಮತ್ತು ನಿರ್ಲಕ್ಷ್ಯದಿಂದ ಪದೇ ಪದೆ ಚರಂಡಿಯನ್ನು ದುರಸ್ತಿ ಮಾಡಬೇಕಾದ ಅನಿವಾರ್ಯವಿದೆ. ಸಾರ್ವಜನಿಕರಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಮುನ್ನ ಹುಲಿಕಲ್ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಎಚ್ಚರವಹಿಸಿ, ಚರಂಡಿಗಳಲ್ಲಿ ತುಂಬಿರುವ ಹೂಳು ತೆಗೆದು, ಕೊಳಚೆ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಬೇಕಿದೆ.
ಬೃಹತ್ ಪ್ರತಿಭಟನೆಯ ಎಚ್ಚರಿಕೆ: ಗ್ರಾಮ ಪಂಚಾಯ್ತಿ ಅಧಿಕಾರಿಗಳು ನಾಗರಿಕರ ಸಹನೆ ಪರೀಕ್ಷೆಗೆ ಮುಂದಾಗದೇ ಶೀಘ್ರದಲ್ಲಿಯೇ ಸ್ವಚ್ಛ ನಗರ ನಿರ್ಮಾಣಕ್ಕೆ ಮುಂದಾಗಬೇಕಿದೆ. ಇಲ್ಲವಾದರೆ ಗ್ರಾಮ ಪಂಚಾಯ್ತಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ನಾಗರಿಕರು ಎಚ್ಚರಿಸಿದ್ದಾರೆ.
* ಕೆ.ಎಸ್.ಮಂಜುನಾಥ್ ಕುದೂರು