Advertisement

ಶುದ್ಧ ನೀರಿನ ಘಟಕ ಅಸಮರ್ಪಕ ನಿರ್ವಹಣೆ

08:24 PM Mar 31, 2021 | Team Udayavani |

ಗದಗ: ಇಲ್ಲಿನ ಸರಕಾರಿ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಶುದ್ಧ ನೀರಿನ ಘಟಕ ಅಸಮರ್ಪಕ ಕಾರ್ಯನಿರ್ವಹಣೆಯಿಂದ ಆಸ್ಪತ್ರೆಗೆ ಆಗಮಿಸುವ ನೂರಾರು ರೋಗಿಗಳು ಪರದಾಡುವಂತಾಗಿದೆ. ಶುದ್ಧ ನೀರಿನ ಘಟಕಕ್ಕೆ ಬಹುತೇಕ ಬೀಗ ಹಾಕುತ್ತಿದ್ದು, ಜನರು ದಾಹ ತೀರಿಸಿಕೊಳ್ಳಲು ಅನಿವಾರ್ಯವಾಗಿ ಬಾಟಲ್‌ ನೀರಿನ ಮೊರೆ ಹೋಗುವಂತಾಗಿದೆ.

Advertisement

ಇಲ್ಲಿನ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣದಲ್ಲಿ ಜಿಪಂ ಗ್ರಾಮೀಣ ಕುಡಿಯುವ ನೀರು ಮತ್ತು ನೈ ರ್ಮಲ್ಯ ವಿಭಾಗದಿಂದ ಲಕ್ಷಾಂತರ ರೂ. ಮೊತ್ತದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಇದರಿಂದ ಆಸ್ಪತ್ರೆ ಸಿಬ್ಬಂದಿ ಹಾಗೂ ಆಸ್ಪತ್ರೆಗೆ ಬರುವ ಬಡ ರೋಗಿಗಳೂ ಕುಡಿಯುವ ನೀರಿಗೆ ಇದೇ ಘಟಕ ಅವಲಂಬಿಸಿದ್ದಾರೆ. ಆದರೆ, ಕಳೆದ ಒಂದು ತಿಂಗಳಿಂದ ಘಟಕದಲ್ಲಿ ಒಮ್ಮೆ ನೀರು ಬಂದರೆ, ಮತ್ತೂಮ್ಮೆ ಬರುವುದಿಲ್ಲ.

ಇದು ಒಳ ರೋಗಿಗಳಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಘಟಕದ ಸಿಬ್ಬಂದಿ ಬೆಳಗ್ಗೆ ಒಮ್ಮೆ ಟ್ಯಾಂಕ್‌ ತುಂಬಿಸಿ ಹೋದರೆ, ಮತ್ತೆ ಸಂಜೆ 4ರ ಸುಮಾರಿಗೆ ಬಂದು ಟ್ಯಾಂಕ್‌ ತುಂಬಿಸುತ್ತಾರೆ. ಆದರೆ, ಇತ್ತೀಚೆಗೆ ಬೇಸಿಗೆಯ ಬಿಸಿಲು ಹೆಚ್ಚಿದ್ದರಿಂದ ಕುಡಿಯುವ ನೀರಿಗೆ ಬೇಡಿಕೆ ಹೆಚ್ಚಿದೆ. ಆಸ್ಪತ್ರೆಯ ಸಿಬ್ಬಂದಿ ತಮಗೆ ಅಗತ್ಯವಿರುವಷ್ಟು ನೀರಿನ ಕ್ಯಾನ್‌ಗಳನ್ನು ಬೆಳಗ್ಗೆಯೇ ತುಂಬಿಟ್ಟುಕೊಳ್ಳುತ್ತಾರೆ. ಘಕಟದಲ್ಲಿ ಒಮ್ಮೆ 2 ರೂ. ನಾಣ್ಯ ಹಾಕಿದರೆ ಒಂದು ಕ್ಯಾನ್‌ ತುಂಬುತ್ತದೆ. ಆದರೆ, ಒಳ ರೋಗಿಗಳು ಮತ್ತು ಸಾರ್ವಜನಿಕರು ತಮ್ಮೊಂದಿಗೆ ಕೇವಲ 1, 2 ಲೀಟರ್‌ ನೀರಿನ ಖಾಲಿ ಬಾಟಲ್‌ ತಂದಿರುತ್ತಾರೆ. ಅವು ತುಂಬುತ್ತಿದ್ದಂತೆ ಇನ್ನುಳಿದ ನೀರು ಪೋಲಾಗುತ್ತದೆ. ಇದು ಕೂಡಾ ಟ್ಯಾಂಕ್‌ ಬೇಗ ಖಾಲಿಯಾಗಲು ಕಾರಣ. ಹೀಗಾಗಿ ಪ್ರತಿನಿತ್ಯ ಮಧ್ಯಾಹ್ನ 12ರ ಒಳಗೆ ಟ್ಯಾಂಕ್‌ನಲ್ಲಿ ನೀರು ಖಾಲಿಯಾಗುತ್ತದೆ. ಆನಂತರ ಆಗಮಿಸುವ ಜನರಿಗೆ ನೀರು ಸಿಗುವುದಿಲ್ಲ ಎನ್ನುತ್ತಾರೆ ಆಸ್ಪತ್ರೆಯ ಸಿಬ್ಬಂದಿ.

Advertisement

Udayavani is now on Telegram. Click here to join our channel and stay updated with the latest news.

Next