Advertisement

ಶುದ್ಧ ವರ್ಸಸ್‌ ಅಶುದ್ಧ: ಕಾಂಗ್ರೆಸ್‌ ಮತ್ತು ಬಿಜೆಪಿ ನಡುವಣ ಮಾತಿನೇಟಿನ ರಂಗು

06:34 PM Jan 25, 2023 | Team Udayavani |

ಬೆಂಗಳೂರು: ಭ್ರಷ್ಟಾಚಾರದ ವಿಚಾರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವಣ ವಾಕ್ಸಮರ ಮುಂದುವರಿದಿದೆ. ಬಿಜೆಪಿ ಸರಕಾರ ಇಡೀ ರಾಜ್ಯಕ್ಕೆ ಕಳಂಕ ತಂದಿದ್ದು, ಮುಖ್ಯಮಂತ್ರಿ ಸಹಿತ ಸಚಿವರು ವಿಧಾನಸೌಧದಿಂದ ಗಂಟು ಮೂಟೆ ಕಟ್ಟಿಕೊಂಡು ಹೊರಡಲಿ, ನಾವು ಗಂಜಲ ತಂದು ಶುದ್ಧ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸವಾಲೆ ಸೆದಿದ್ದಾರೆ.

Advertisement

ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಪಿಂಗರ್‌ ಫ್ರಿಂಟ್‌ ಸಿಗದ ರೀತಿಯಲ್ಲಿ ಕದ್ದವರನ್ನು ಬರೀ ಕಳ್ಳರು ಎನ್ನಲಾಗದು; ಅವರನ್ನು ಕ್ರಿಮಿನಲ್‌ ಕಳ್ಳರು ಎಂದು ಕರೆಯಬೇಕು. ಕಾಂಗ್ರೆಸ್‌ನವರದ್ದು ಟೂಲ್‌ಕಿಟ್‌ ರಾಜಕಾರಣ. ಭ್ರಷ್ಟಾಚಾರದ ಬಗ್ಗೆ ಮಾತಾಡುವ ನೈತಿಕತೆ ಇಲ್ಲ, ಭ್ರಷ್ಟಾಚಾರವನ್ನು ಬೆಳೆಸಿದ್ದೇ ಕಾಂಗ್ರೆಸ್‌ ಎಂದು ತಿರುಗೇಟು ನೀಡಿದ್ದಾರೆ.

ಮತ್ತೂಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲು, ದೇಶ ಮತ್ತು ರಾಜ್ಯದಲ್ಲಿ ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್‌ ಎಂದು ವಾಗ್ಧಾಳಿ ನಡೆಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರಾಮಾಣಿಕರಾಗಿದ್ದರೆ ಅವರ ಕಾಲದಲ್ಲಿ ಯಾಕೆ ಲೋಕಾಯುಕ್ತವನ್ನು ಮುಚ್ಚುತ್ತಿದ್ದರು? ಲೋಕಾಯುಕ್ತಕ್ಕೆ ಇದ್ದ ಶಕ್ತಿ ತೆಗೆದು ಹಲ್ಲು ಕಿತ್ತ ಹಾವಿನಂತೆ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.

ಡಿಕೆಶಿ ಏನೆಂದರು?
ಈ ಸರಕಾರದ ಆಯಸ್ಸು ಇನ್ನು 40 ದಿನ ಇದೆ. ನೀವು ಇನ್ಯಾರಿಂದ ವಸೂಲಿ ಮಾಡುವುದು ಬಾಕಿ ಇದೆಯೋ ಅದನ್ನು ಮಾಡಿಕೊಂಡು ನಿಮ್ಮ ಟೆಂಟ್‌ ಖಾಲಿ ಮಾಡಿ. ನಾವು ಬಂದು ವಿಧಾನಸೌಧ ಸ್ವತ್ಛ ಮಾಡುತ್ತೇವೆ. ಈ ಸರಕಾರವನ್ನು ಜನರೇ ಓಡಿಸುತ್ತಾರೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಬಿಜೆಪಿ ಸರಕಾರಕ್ಕೆ 40 ಪರ್ಸೆಂಟ್‌ ಕಮಿಷನ್‌ ಸರಕಾರ ಎಂಬ ಬ್ರ್ಯಾಂಡ್‌ ಬಂದಿದ್ದು, ಅದನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್‌ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ಕಾಲದಲ್ಲಿ 35 ಸಾವಿರ ಕೋಟಿ ರೂ. ಅಕ್ರಮವಾಗಿದೆ ಎಂದು ಹೇಳಿಸಿದ್ದಾರೆ. ಈಗ ಆರೋಪ ಮಾಡುವವರು ಕಳೆದ ಮೂರೂವರೆ ವರ್ಷಗಳಿಂದ ಕಡಲೇಕಾಯಿ ತಿನ್ನುತ್ತಿದ್ದರಾ? ನಿಮಗೆ ಅಧಿಕಾರ ಇದ್ದಾಗ ತನಿಖೆ ಮಾಡದಂತೆ ತಡೆದವರು ಯಾರು ಎಂದು ಪ್ರಶ್ನಿಸಿದರು.

Advertisement

ಕಾಂಗ್ರೆಸ್‌ ಪಕ್ಷ ಪ್ರಜಾಧ್ವನಿ ಯಾತ್ರೆ ಸಂದರ್ಭದಲ್ಲಿ 200 ಯೂನಿಟ್‌ ಉಚಿತ ವಿದ್ಯುತ್‌, ಎರಡು ಸಾವಿರ ರೂ. ಪ್ರೋತ್ಸಾಹ ಧನ ನೀಡುವುದು ಖಚಿತ ಎಂದು ಘೋಷಿಸಿದ ಅನಂತರ ಬಿಜೆಪಿಯವರ ತಲೆ ಕೆಟ್ಟು ಹೋಗಿದೆ ಎಂದು ಹೇಳಿದರು.

ಕ್ರಿಮಿನಲ್‌ ಕಳ್ಳರು: ಬಿಜೆಪಿ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮಾತನಾಡಿ, ಕಾಂಗ್ರೆಸ್‌ನವರದ್ದು ಟೂಲ್‌ಕಿಟ್‌ ರಾಜಕಾರಣ. ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾತಾಡುವ ಯಾವ ನೈತಿಕತೆಯೂ ಇಲ್ಲ. ಭ್ರಷ್ಟಾಚಾರವನ್ನು ಬೆಳೆಸಿದ್ದೇ ಕಾಂಗ್ರೆಸ್‌. ಆ ಪಕ್ಷದ ನಾಯಕರೇ ಭ್ರಷ್ಟಾಚಾರದ ಪಿತಾಮಹರು ಎಂದು ಆರೋಪಿಸಿದರು.

ನ್ಯಾ| ಕೆಂಪಣ್ಣ ಆಯೋಗ ರೀಡೂ ಹೆಸರಲ್ಲಿ ಅಕ್ರಮ ಆಗಿದೆಯೆಂದು ಹೇಳಿದೆ. ಆದರೂ ಸಿದ್ದರಾಮಯ್ಯ ಒಂದು ಪೈಸೆಯಷ್ಟು ಭ್ರಷ್ಟಾಚಾರ ಮಾಡಿಲ್ಲ ಎನ್ನುತ್ತಾರೆ. ಅವರು ಹೇಳಿದ್ದು ಸತ್ಯ. ಒಂದು ಪೈಸೆ ಅಲ್ಲ, ಸಾವಿರಾರು ಕೋಟಿ ರೂ. ಭ್ರಷ್ಟಾಚಾರ ಮಾಡಿದ್ದಾರೆ. ವೈಟ್‌ ಟ್ಯಾಪಿಂಗ್‌ ಹೆಸರಿನಲ್ಲಿ ದೊಡ್ಡ ದೊಡ್ಡ ಲೆಕ್ಕ ಮಾಡಿದ್ದಾರೆ ಎಂದು ದೂರಿದರು.

ನಳಿನ್‌ ವಾಗ್ಧಾಳಿ
ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲು ಮಾತನಾಡಿ, ಕಾಂಗ್ರೆಸ್‌ನ ಮಹಾನ್‌ ನಾಯಕರ ಮೇಲೆ ಭ್ರಷ್ಟಾಚಾರದ ಆರೋಪ ಇದೆ. ಕೆಪಿಸಿಸಿ ಅಧ್ಯಕ್ಷರು ಭ್ರಷ್ಟಾಚಾರದ ಆರೋಪದ ಮೇಲೆ ತಿಹಾರ್‌ ಜೈಲಿಗೆ ಹೋಗಿ ಬಂದಿದ್ದಾರೆ. ಮಾಜಿ ಸಚಿವ ಜಾರ್ಜ್‌ ಮೇಲೆ ಕೇಸ್‌ ಇದೆ. ಸೋನಿಯಾ ಗಾಂಧಿ , ರಾಹುಲ್‌ ಗಾಂಧಿ, ವಾಧ್ರಾ ಮತ್ತು ರಾಜ್ಯಾಧ್ಯಕ್ಷರು ಬೇಲ್‌ನಲ್ಲಿದ್ದಾರೆ ಎಂದರು. ಕಾಂಗ್ರೆಸ್‌ ಬೇಲ್‌ ಮೇಲಿರುವ ಪಕ್ಷ ಎಂದು ಲೇವಡಿ ಮಾಡಿದ ಅವರು, ದೇಶ ಭ್ರಷ್ಟಚಾರ ಮುಕ್ತ ಆಗಬೇಕು ಎಂದರೆ ಕಾಂಗ್ರೆಸ್‌ ಮುಕ್ತ ಆಗಬೇಕು ಎಂದರು.

ಕಾಂಗ್ರೆಸ್‌ ನಾಯಕರು ಬಿಜೆಪಿ ನಾಯಕರ ಮೇಲೆ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದು, ಇದರ ಬದಲು ಲೋಕಾಯುಕ್ತಕ್ಕೆ ದಾಖಲೆ ಸಹಿತ ದೂರು ನೀಡಲಿ. ಯಾವುದೇ ಸಚಿವರ ಮೇಲಿನ ಆರೋಪ ಸಾಬೀತಾದರೆ ಅಂಥವರನ್ನು ಸಂಪುಟದಿಂದ ತೆಗೆದುಹಾಕುತ್ತೇವೆ ಎಂದರು.

ರಾಜ್ಯದಲ್ಲಿ ಬಿಜೆಪಿಯ ಬೆಳವಣಿಗೆಯನ್ನು ಸಹಿಸದೆ ಕಾಂಗ್ರೆಸ್‌ ಕುತಂತ್ರದ ರಾಜಕಾರಣಕ್ಕೆ ಇಳಿದಿದೆ. ನೇರ ಹಣಾಹಣಿಯಲ್ಲಿ ವೈಫಲ್ಯ ಕಾಣುತ್ತಿದೆ. ಸರ್ವೇ ವರದಿಗಳಲ್ಲಿ ಬಿಜೆಪಿ 150 ಸ್ಥಾನಗಳನ್ನು ಗೆಲ್ಲುತ್ತದೆ ಎಂಬುದಾಗಿ ಇದ್ದು, ಹೀಗಾಗಿ ಕಾಂಗ್ರೆಸ್‌ ಷಡ್ಯಂತ್ರದ ರಾಜಕಾರಣಕ್ಕೆ ಕಾಂಗ್ರೆಸ್‌ ಮುಂದಾಗಿದೆ ಎಂದರು.

ಬಿಜೆಪಿಯಲ್ಲೇ 32 ಗುಂಪು
ಬಿಜೆಪಿಯಲ್ಲಿ ಯಡಿಯೂರಪ್ಪ- ಬೊಮ್ಮಾಯಿ, ಯತ್ನಾಳ್‌ -  ನಿರಾಣಿ, ಯೋಗೇಶ್ವರ್‌- ಅಶೋಕ್‌ ನಡುವೆ ಜಗಳ ಹೆಚ್ಚಾಗುತ್ತಿದೆ. ಬಿಜೆಪಿಯಲ್ಲಿ 32 ಗುಂಪುಗಳಿವೆ.
– ಡಿ.ಕೆ. ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

ಸಿದ್ದು ಹೇಳಿದ್ದೆಲ್ಲವೂ ಉಲ್ಟಾ
ಸಿದ್ದು ಹೇಳಿದ್ದೆಲ್ಲ ಉಲ್ಟಾ ಆಗಿ ದೆ. 2018ರ ಚುನಾವಣೆಯಲ್ಲೂ ಯಡಿಯೂರಪ್ಪ, ಕುಮಾರಸ್ವಾಮಿ ನಮ್ಮಪ್ಪನಾಣೆ ಮತ್ತೆ ಮುಖ್ಯಮಂತ್ರಿ ಆಗುವುದಿಲ್ಲ ಅಂದರು, ಆಗಲಿಲ್ಲವೇ? ಈಗಲಾದರೂ ಬಿಜೆಪಿ ಅಧಿಕಾರಕ್ಕೆ ಬರಲಿ, ಬೊಮ್ಮಾಯಿ ಮತ್ತೆ ಸಿಎಂ ಆಗಲಿ ಎನ್ನಲಿ.
– ಸಿ.ಟಿ. ರವಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next