Advertisement

ಶುದ್ಧ ಸಾಹಿತ್ಯ ಎಲ್ಲರಿಗೂ ತಿಳಿಸುವುದು ಇಂದಿನ ಅಗತ್ಯ: ಶತಾವಧಾನಿ ಆರ್‌. ಗಣೇಶ್‌

12:56 AM Apr 09, 2022 | Team Udayavani |

ಮಂಗಳೂರು: ಸಾಹಿತ್ಯ, ದೃಶ್ಯ, ಶ್ರಾವ್ಯ, ಶಿಲ್ಪ ಹೀಗೆ ಪ್ರತಿಯೊಂದು ಕಲೆಯ ಪರಮೋದ್ದೇಶ ರಸ. ರಸಕ್ಕೆ ಮೂಲ ಸಾಮಗ್ರಿ ಭಾವ. ರಸ ಮೈಮರೆವು ಅಲ್ಲ; ಅರಿವು. ಶುದ್ಧ ಸಾಹಿತ್ಯವನ್ನು ಎಲ್ಲರಿಗೂ ತಿಳಿಯುವಂತೆ ಮಾಡುವುದು ಇಂದಿನ ಅಗತ್ಯ ಎಂದು ಶತಾವಧಾನಿ ಡಾ| ಆರ್‌. ಗಣೇಶ್‌ ಅಭಿಪ್ರಾಯಪಟ್ಟರು.

Advertisement

ನಗರದಲ್ಲಿ ಶುಕ್ರವಾರ ನಾಲ್ಕನೇ ಆವೃತ್ತಿಯ ಮಂಗಳೂರು ಲಿಟ್‌ ಫೆಸ್ಟ್‌ ಸಾಹಿತ್ಯೋತ್ಸವವನ್ನು ಉದ್ಘಾಟಿಸಿ ಮೊದಲ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಸವೊಂದೇ ಕವಿನೀತಿ ಎಂದು ಕುವೆಂಪು ಹೇಳಿದ್ದರು. ಪ್ರಾಚೀನ ಗ್ರಂಥಗಳಾದ ರಾಮಾ ಯಣ, ಮಹಾಭಾರತಗಳು ರಸಾ ಸ್ವಾದದ ಕಲಾ ಸಾಹಿತ್ಯ ಹೊಂದಿವೆ. ಸತ್ಯದ ಸೌಂದರ್ಯವನ್ನು ಪರಿಣಾಮ ಕಾರಿಯಾಗಿ ಕಲೆಯ ಮೂಲಕ ಹೊರತರಬಹುದು ಎಂದರು.

ಆಡಳಿತಾರೂಢರಲ್ಲಿ
ಸಂವೇದನೆಯ ಕೊರತೆ
ಸಾಹಿತ್ಯ ಮತ್ತು ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರಕಾರದ ಮೊರೆ ಹೋಗುವ ವಿಚಾರದಲ್ಲಿ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಸರಕಾರ‌ದಲ್ಲಿ ಆಡಳಿತ ನಡೆಸುವವರಲ್ಲಿ ಸಂವೇದನಶೀಲಯ ಕೊರತೆ ಸಮಸ್ಯೆ ತಂದಿದೆ. ಅಕಾಡೆಮಿಗಳು ಇದ್ದರೂ ಅಲ್ಲಿಯೂ ಸಾಹಿತ್ಯ, ಕಲೆಗಳ ಬಗ್ಗೆ ಚಿಂತನೆ ನಡೆಸಿರುವುದು ವಿರಳವಾಗುತ್ತಿದೆ. ನಾನೂ ಸೇರಿದಂತೆ ಏಳು ಮಂದಿ ಅವಧಾನಿಗಳಿದ್ದರೂ ಸಾಹಿತ್ಯ ಸಮ್ಮೇಳನಗಳಲ್ಲಿ ಅಭಿಜಾತ ಕನ್ನಡದ ಬಗ್ಗೆ ಯಾವುದೇ ರೀತಿಯ ಕಾರ್ಯಕ್ರಮ ನಡೆಸಿಲ್ಲ. ಯಾರಾದರೂ ಪ್ರಸ್ತಾವ ಮುಂದಿರಿಸಿದರೆ, ಅದಕ್ಕೆ ಜಾತಿ, ಬಂಡವಾಳಶಾಹಿ ಬಣ್ಣವನ್ನು ಕಟ್ಟುತ್ತಾರೆ. ಇಂತಹ ಸಂಕುಚಿತ ದೃಷ್ಟಿಕೋನಹೊಂದಿದ್ದರೆ ಕಲೆ, ಸಂಸ್ಕೃತಿಗಳ ಉದ್ಧಾರ ಹೇಗೆ ಆಗಲು ಸಾಧ್ಯ ಎಂದು ಪ್ರಶ್ನಿಸಿದ ಅವರು ಸರಕಾರ ಇಲ್ಲವೇ ಅಕಾಡೆಮಿಗಳಿಂದ ಕಲೆ, ಸಂಸ್ಕೃತಿಯ ಉದ್ಧಾರವಾಗುತ್ತದೆ ಎಂಬ ಆಶಯ ಬೇಡ, ಇದರ ಬದಲು ಖಾಸಗಿ ಸಂಸ್ಥೆಗಳ ಮುತುವರ್ಜಿ ಅಥವಾ ಸ್ವಯಂಪ್ರೇರಣೆಯಿಂದ ತೊಡಗಿಸಿಕೊಳ್ಳುವುದೇ ಸೂಕ್ತ ಎಂದು ಅಭಿಪ್ರಾಯ ಪಟ್ಟರು.

ಸಮ್ಮಾನ
ಕುವೆಂಪು ಭಾಷಾ ಪ್ರಾಧಿಕಾರ ಅಧ್ಯಕ್ಷ ಅಜಕ್ಕಳ ಗಿರೀಶ್‌ ಭಟ್‌ ಪ್ರಥಮ ಗೋಷ್ಠಿ ನಡೆಸಿಕೊಟ್ಟರು. ಸಾಹಿತ್ಯ ಕ್ಷೇತ್ರಕ್ಕೆ ಅಸಮಾನ್ಯ ಕೊಡುಗೆಗಾಗಿ ಶತಾವಧಾನಿ ಡಾ| ಆರ್‌. ಗಣೇಶ್‌ ಅವರನ್ನು ಸಮ್ಮಾನಿಸಲಾಯಿತು.

ಭಾರತ್‌ ಫೌಂಡೇಶನ್‌ ಟ್ರಸ್ಟ್‌ ಹಾಗೂ ಲಿಟ್‌ ಫೆಸ್ಟ್‌ ಸಂಯೋಜಕ ಸುನೀಲ್‌ ಕುಲಕರ್ಣಿ ಸ್ವಾಗತಿಸಿದರು. ಮಿಥಿಕ್‌ ಸೊಸೈಟಿಯ ಆಡಳಿತ ಮಂಡಳಿಯ ಸದಸ್ಯ ವಿ. ಪ್ರಸನ್ನ ಉಪಸ್ಥಿತರಿದ್ದರು. ಪ್ರಕಾಶ್‌ ಮಲ್ಪೆ ಅವರು ಡಾ| ಗಣೇಶರನ್ನು ಪರಿಚಯಿಸಿದರು.

Advertisement

ಕವಿಗೆ, ಕೃತಿಗೆ ಅಪಚಾರವೆಸಗದಿರಿ
ಅಭಿಜಾತ ಸಾಹಿತ್ಯದ ಪುನರ್‌ರಚನೆ ಮಾಡುವಾಗ ಆನೇಕರು ಮೂಲ ಕವಿಗೆ, ಕೃತಿಗೆ ಅಪಚಾರವೆಸಗುವ ಪ್ರವೃತ್ತಿಯನ್ನು ಇಂದು ಕಾಣುತ್ತಿದ್ದೇವೆ. ರಾಮಾಯಣದ ಬಗ್ಗೆ ಕೃತಿ ರಚನೆ ಮಾಡುವವರು ರಾಮನನ್ನೇ ಕೆಟ್ಟದಾಗಿ ಚಿತ್ರಿಸಿ ಮೂಲರಾಮಾಯಣಕ್ಕೆ ಧಕ್ಕೆ ತರುತ್ತಿದ್ದಾರೆ. ಮಹಾನ್‌ ಕವಿಗಳ, ವಿದ್ವಾಂಸರ ಬರವಣಿಗೆಯನ್ನು ತಿರುಚುವುದು ಸರಿಯಲ್ಲ ಎಂದವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next