Advertisement

ಪ್ರತಿ ಹಳ್ಳಿಗೂ ಶುದ್ಧ ಕುಡಿಯುವ ನೀರು ಪೂರೈಕೆ

08:18 AM Dec 19, 2018 | Team Udayavani |

ವಿಧಾನಪರಿಷತ್ತು: ರಾಜ್ಯದ ಪ್ರತಿ ಹಳ್ಳಿಗೂ ಶುದ್ಧ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಜಲಧಾರೆ ಹೆಸರಿನಡಿಯಲ್ಲಿ ಅಂದಾಜು 60-70 ಸಾವಿರ ಕೋಟಿ ರೂ.ವೆಚ್ಚದಲ್ಲಿ ಯೋಜನೆಯ ರೂಪುರೇಷೆ ತಯಾರಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಪ್ರಶ್ನೋತ್ತರ ವೇಳೆ ಬಿಜೆಪಿಯ ತೇಜಸ್ವಿನಿಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಹುತೇಕ ಹಳ್ಳಿಗಳಿಗೆ
ಶುದ್ಧ ಹಾಗೂ ಖಚಿತ ನೀರಿನ ಪೂರೈಕೆ ಇಲ್ಲವಾಗಿದೆ. ಗದಗನಲ್ಲಿ ಎಚ್‌.ಕೆ.ಪಾಟೀಲರು ಕೈಗೊಂಡ ಶುದ್ಧ ಕುಡಿಯುವ ನೀರಿನ ಯೋಜನೆ ಮಾದರಿಯಲ್ಲಿ ಜಲಧಾರೆ ಯೋಜನೆಯಡಿ ಎಲ್ಲ ಹಳ್ಳಿಗಳಿಗೆ ಶುದ್ಧ ಹಾಗೂ ಶಾಶ್ವತ ನೀರು ಪೂರೈಕೆ ಯೋಜನೆ
ಕೈಗೊಳ್ಳಲಾಗುವುದು ಎಂದರು.

Advertisement

ಆಯಾ ಜಿಲ್ಲೆ ಹತ್ತಿರದ ನದಿ ಹಾಗೂ ಜಲಾಶಯಗಳಿಂದ ನೀರು ಪಡೆದು, ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆ ಕೈಗೊಳ್ಳಲಾಗುವುದು. ಸಚಿವ ಸಂಪುಟದ ಸಭೆ ಮುಂದೆ ಈ ಯೋಜನೆಯನ್ನು ತಂದು ತೀರ್ಮಾನ ತೆಗೆದುಕೊಳ್ಳಲಾಗುವುದು. 2018-19ನೇ ಸಾಲಿನಲ್ಲಿ 24,294 ಜನವಸತಿಗಳಿಗೆ ನೀರು ಸರಬರಾಜು ಮಾಡಲು 42,393 ಕಾಮಗಾರಿಗಳನ್ನು ಕೈಗೊಳ್ಳ ಲಾಗಿದ್ದು, 6,135 ಕಾಮಗಾರಿಗಳು ಪೂರ್ಣಗೊಂಡಿವೆ ಎಂದರು. 

ನಾಲ್ಕೈದು ವರ್ಷದಿಂದ ಅನುದಾನವಿಲ್ಲ: ಹಳ್ಳಿಗಳಿಗೆ ಉತ್ತಮ ದರ್ಜೆ ರಸ್ತೆಗಳ ನಿರ್ಮಾಣ ಹಾಗೂ ನಿರ್ವಹಣೆ ನಿಟ್ಟಿನಲ್ಲಿ ಹೊಸ ಯೋಜನೆ ಕೈಗೊಳ್ಳಲಾಗುತ್ತಿದೆ. ಕೇಂದ್ರ ಸರಕಾರದ ಪಿಎಂ ಜಿಎಸ್‌ವೈ ಯೋಜನೆ 3ನೇ ಹಂತದಡಿ ರಸ್ತೆ ನಿರ್ಮಾಣ, ದುರಸ್ತಿ ಯೋಜನೆ ಬಗ್ಗೆ ಕೇಂದ್ರ ಸರಕಾರ ಆದೇಶ ಹೊರಡಿಸಬೇಕಾಗಿದೆ. ಕೇಂದ್ರ ಹಾಗೂ ರಾಜ್ಯ ಶೇ.60:40ರ ಅನುಪಾತದಲ್ಲಿ
ಅನುದಾನ ದೊರೆಯಲಿದೆ. ಇದರಿಂದ 8 ಸಾವಿರ ಕಿ.ಮೀ. ರಸ್ತೆ ಅಭಿವೃದ್ಧಿಪಡಿಸಬೇಕಾಗಿದೆ. ನಾಲ್ಕೈದು ವರ್ಷಗಳಿಂದ ಪಿಎಂಜಿಎಸ್‌ವೈ ಅಡಿಯಲ್ಲಿ ಕೇಂದ್ರದಿಂದ ಅನುದಾನ ಬಂದಿಲ್ಲ ಎಂದರು.

ಮಾಸಾಂತ್ಯದೊಳಗೆ ಅನುದಾನ ಹಂಚಿಕೆ
ವಿಧಾನಪರಿಷತ್ತು: ರಾಜ್ಯದಲ್ಲಿ ಕೆರೆಗಳ ಹೂಳೆತ್ತುವ ಹಾಗೂ ಸ್ವತ್ಛತೆ ನಿಟ್ಟಿನಲ್ಲಿ ಈಗಾಗಲೇ 1,211 ಕೋಟಿ ರೂ.ಗಳನ್ನು
ವೆಚ್ಚಮಾಡಲಾಗಿದ್ದು, ಇನ್ನು 1,000 ಕೋಟಿ ರೂ.ಗಳನ್ನು ಮಾರ್ಚ್‌ ಅಂತ್ಯದೊಳಗೆ ವೆಚ್ಚ ಮಾಡಲಾಗುವುದು. ಅದೇರೀತಿ
ಕೆರೆಗಳ ನಿರ್ವಹಣೆ ಕುರಿತು ಸಹಕಾರ ಸಂಘಗಳಿಗೆ ನಿಗದಿ ಪಡಿಸಿದ 8 ಕೋಟಿ ರೂ.ಗಳನ್ನು ಮಾಸಾಂತ್ಯಕ್ಕೆ ಹಂಚಿಕೆ ಮಾಡಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್‌.ಪುಟ್ಟರಾಜು ಹೇಳಿದರು.

ಕಾಂಗ್ರೆಸ್‌ ಸದಸ್ಯ ಎಚ್‌.ಎಂ.ರೇವಣ್ಣ ಅವರ ಪಶ್ನೆಗೆ ಉತ್ತರಿಸಿದ ಅವರು, ಬಜೆಟ್‌ನಲ್ಲಿ ಇಲಾಖೆಗೆ ಒದಗಿಸಿ ಹಣವನ್ನು ಪೂರ್ಣಮಟ್ಟದಲ್ಲಿ ಬಳಕೆಗೆ ಕ್ರಮ ಕೈಗೊಳ್ಳಲಾಗಿದೆ. ಕೆರೆ ಸಂಜೀವಿನಿ ಯೋಜನೆ ಅಡಿಯಲ್ಲಿ ಕೆರೆ ಸ್ವಚ್ಛತೆ ಕ್ರಮ ಕೈಗೊಳ್ಳಲಾಗಿದೆ.
2017-18ನೇ ಸಾಲಿನಲ್ಲಿ ಯೋಜನೆ ಅನುಷ್ಠಾನಕ್ಕೆ 35ಕೋಟಿ ರೂ. ವೆಚ್ಚದಲ್ಲಿ 1,294 ಕೆರೆಗಳನ್ನು ಹೂಳೆತ್ತಲು ಉದ್ದೇಶಿಸಲಾಗಿದೆ.
ನವೆಂಬರ್‌ಅಂತ್ಯದವರೆಗೆ 136 ಕೆರೆಗಳಲ್ಲಿ ಪೂರ್ಣಗೊಳಿಸಲಾಗಿದೆ. ಶ್ರೀ ಧರ್ಮಸ್ಥಳ ಕ್ಷೇತ್ರ ಗ್ರಾಮೀಣಾಭಿವೃದ್ಧಿ ಯೋಜನೆ
ಸಹಭಾಗಿತ್ವದಲ್ಲಿ 100 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next