Advertisement

ದುಬಾರಿ ದರಕ್ಕೆ ವಿದ್ಯುತ್‌ ಖರೀದಿ; ಅಗ್ಗದ ದರಕ್ಕೆ ಮಾರಾಟ; 10 ರೂ.ಗೆ ಖರೀದಿ,3 ರೂ.ಗೆ ಮಾರಾಟ

11:19 PM May 26, 2024 | Team Udayavani |

ಬೆಂಗಳೂರು: ಒಂದೆಡೆ ಸರಕಾರದ ಖಜಾನೆಯಲ್ಲಿ ದುಡ್ಡು ಇಲ್ಲ ಎಂಬ ಆರೋಪ ನಿರಂತರವಾಗಿ ಕೇಳಿಬರುತ್ತಿದೆ. ಆದರೆ, ಮತ್ತೊಂದೆಡೆ ಅದೇ ಸರಕಾರದ ಇಂಧನ ಇಲಾಖೆಯು ಪ್ರತಿದಿನ 10ರಿಂದ 12 ಕೋಟಿ ರೂ.ಗಳನ್ನು ನೀರಿನಲ್ಲಿ ಹೋಮ ಮಾಡುತ್ತಿದೆ!

Advertisement

ಹೌದು, ಕೇವಲ ಮೂರು ತಿಂಗಳ ಹಿಂದಿನ ಮಾತು, ರಾಜ್ಯದಲ್ಲಿ ವಿದ್ಯುತ್‌ಗಾಗಿ ಹಾಹಾಕಾರ ಉಂಟಾಗಿತ್ತು. ಆಗ, ಇಂಧನ ಇಲಾಖೆಯು ಮಾರುಕಟ್ಟೆಯಲ್ಲಿ ಹೇಳಿದಷ್ಟು ಹಣ ಸುರಿದು ವಿದ್ಯುತ್‌ ಖರೀದಿಸಿತು. ಪ್ರತಿ ಯೂನಿಟ್‌ಗೆ 10 ರೂ.ಗಳಂತೆ ಸುಮಾರು 500 ಮೆ.ವಾ. (12 ಮಿ.ಯೂ.) ಖರೀದಿ ಮಾಡಲಾಯಿತು. ಅದು ಈಗಲೂ ಮುಂದುವರಿದಿದೆ. ಆದರೆ, ಈಗ ವರುಣನ ಕೃಪೆಯಿಂದ ವಿದ್ಯುತ್‌ ಬೇಡಿಕೆ ಇಳಿಮುಖವಾಗಿದೆ. ಇದರಿಂದ ಹೆಚ್ಚುವರಿಯಾಗುತ್ತಿರುವ ಅದೇ ವಿದ್ಯುತ್ತನ್ನು ಇಂಧನ ಇಲಾಖೆ ಬೇಕಾಬಿಟ್ಟಿ ಅಂದರೆ ಬರೀ 1 ರಿಂದ 3 ರೂ.ಗೆ ಮಾರಾಟ ಮಾಡುತ್ತಿದೆ. ಪರಿಣಾಮ ದಿನಕ್ಕೆ ಒಂದು ಲಕ್ಷ ಅಲ್ಲ, ಕೋಟಿ ಅಲ್ಲ. ಸರಾಸರಿ 10ರಿಂದ 12 ಕೋಟಿ ರೂ. ನಷ್ಟ ಆಗುತ್ತಿದೆ.

ಗ್ರಾಹಕರ ಜೇಬು ಸುಡುವುದು ಗ್ಯಾರಂಟಿ?
ಕಳೆದ ಹದಿನೈದು ದಿನಗಳಿಂದ ಹೆಚ್ಚುವರಿ ವಿದ್ಯುತ್‌ ಅನ್ನು ರಿಯಲ್‌ ಟೈಮ್‌ ಮಾರುಕಟ್ಟೆ (ಆರ್‌ಟಿಎಂ)ಯಲ್ಲಿ ಮಾರಾಟಕ್ಕಿಡಲಾಗಿದ್ದು, ಇದೇ ಅಗ್ಗದ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಇದನ್ನು ಲೆಕ್ಕ ಹಾಕಿದರೆ, ಸರಕಾರದ ಬೊಕ್ಕಸಕ್ಕೆ ಅನಾಯಾಸವಾಗಿ 160-180 ಕೋಟಿ ರೂ. ನಷ್ಟ ಉಂಟಾಗಿದೆ. ಇಲಾಖೆಯ ಇದೇ ಧೋರಣೆ ಮುಂದುವರಿದರೆ, ನಷ್ಟದ ಬಾಬ್ತು ಇನ್ನೂ ವಿಸ್ತಾರಗೊಳ್ಳುವ ಸಾಧ್ಯತೆ ಸ್ಪಷ್ಟವಾಗಿದೆ. ಅದು ಮುಂಬರುವ ದಿನಗಳಲ್ಲಿ ನೇರವಾಗಿ ಗ್ರಾಹಕರ ಮೇಲೆ ವರ್ಗಾವಣೆ ಆಗಲಿದ್ದು, ಅದು ಜೇಬು ಸುಡುವ ಮತ್ತೂಂದು ಗ್ಯಾರಂಟಿ’ ಆಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಬೇಸಗೆ ವಿದ್ಯುತ್‌ ಬೇಡಿಕೆ ನೀಗಿಸಲು ರಾಜ್ಯದಲ್ಲಿ ಈ ಹಿಂದೆ ಇಂಧನ ಕಾಯ್ದೆ ಸೆಕ್ಷನ್‌ 11 ಜಾರಿಗೊಳಿಸಲಾಗಿತ್ತು. ಇದರ ಅನ್ವಯ ಕೇಂದ್ರದ ಗ್ರಿಡ್‌ನಿಂದ ನಿತ್ಯ ಅಂದಾಜು 10 ಮಿ.ಯು. ದೊರೆಯುತ್ತದೆ. ಇದು ಕೆಇಆರ್‌ಸಿ ನಿಗದಿಪಡಿಸಿದ ದರದಲ್ಲಿ ಪೂರೈಕೆ ಆಗುತ್ತಿದೆ. ಮತ್ತೊಂದೆಡೆ ಮಾರುಕಟ್ಟೆಯಿಂದ 12 ಮಿ.ಯು. ಖರೀದಿಯಾಗುತ್ತಿದ್ದು, ಇದು ಸರಾಸರಿ ಯೂನಿಟ್‌ಗೆ 10 ರೂ. ದರದಲ್ಲಿ ಸರಬರಾಜು ಆಗುತ್ತಿದೆ. ಅಂದರೆ ಒಟ್ಟಾರೆ 18 ಕೋಟಿ ರೂ. ಆಗುತ್ತದೆ. ಈ ಪೈಕಿ 15 ಮಿ.ಯೂ. ಅನ್ನು ಇಂಧನ ಇಲಾಖೆ ಮಾರಾಟ ಮಾಡುತ್ತಿದೆ. ಇದರಿಂದ ಅಬ್ಬಬ್ಟಾ ಎಂದರೆ 5ರಿಂದ 6 ಕೋಟಿ ರೂ. ಬರುತ್ತಿದೆ. ಶನಿವಾರವಷ್ಟೇ 2,000-3,500 ಮೆ.ವಾ. ವಿದ್ಯುತ್‌ ಅನ್ನು ಯೂನಿಟ್‌ಗೆ ಬರೀ 1.95 ರೂ.ಗೆ ಮಾರಾಟ ಮಾಡಲಾಗಿದೆ ಎಂದು ಸ್ವತಃ ವಿದ್ಯುತ್‌ ವಹಿವಾಟಿಗೆ ಸಂಬಂಧಿಸಿದ ಅಂಕಿ-ಅಂಶಗಳು ಹೇಳುತ್ತವೆ.

ರಿಯಲ್‌ ಟೈಮ್‌ನಲ್ಲಿ
ಮಾತ್ರ ಭಾಗಿ; ಅನುಮಾನಕ್ಕೆಡೆ
ವಿದ್ಯುತ್‌ ಖರೀದಿ-ಮಾರಾಟ ವಹಿವಾಟಿನಲ್ಲಿ ಹಲವು ಪ್ರಕಾರಗಳಿವೆ. ರಿಯಲ್‌ ಟೈಮ್‌ (ನೈಜ ಸಮಯ- ಇಲ್ಲಿ ಪ್ರತಿ 15 ನಿಮಿಷಕ್ಕೆ ಬಿಡ್ಡಿಂಗ್‌ ನಡೆಯುತ್ತದೆ), ಡೇ ಅಹೆಡ್‌ (ಒಂದು ದಿನ ಮುಂಚಿತವಾಗಿ ಖರೀದಿಗೆ ಬುಕಿಂಗ್‌), ಟರ್ಮ್ ಅಹೆಡ್‌ (ಅವಧಿಗೆ ಅಂದರೆ ಗರಿಷ್ಠ 11 ತಿಂಗಳವರೆಗೆ ಖರೀದಿಸುವುದು), ತುರ್ತು ಸಂದರ್ಭ (cಟnಠಿಜಿnಜಛಿncy), ಗ್ರೀನ್‌ ಟರ್ಮ್ ಅಹೆಡ್‌, ಗ್ರೀನ್‌ ಡೇ ಅಹೆಡ್‌ ಅಂತ ಇವೆ. ಆಯಾ ವರ್ಗಗಳಲ್ಲಿ ಭಾಗವಹಿಸಿ, ವಿದ್ಯುತ್‌ ಖರೀದಿ ಅಥವಾ ಮಾರಾಟ ಮಾಡಬಹುದಾಗಿದೆ. ಇಂಧನ ಇಲಾಖೆಯು ಈ ಪೈಕಿ ರಿಯಲ್‌ ಟೈಮ್‌ ಬಿಡ್‌ನ‌ಲ್ಲಿ ಮಾತ್ರ ಭಾಗವಹಿಸುತ್ತಿದೆ. ಉಳಿದ ವಿಭಾಗಗಳಲ್ಲಿ ಭಾಗವಹಿಸಲು ಸೆಕ್ಷನ್‌ 11ರ ಸಬೂಬು ಹೇಳುತ್ತಿದೆ. ಖರೀದಿ ಮಾತ್ರ ಟರ್ಮ್ ಅಹೆಡ್‌ನ‌ಲ್ಲಿ ಮಾಡಿದೆ ಎಂದು ದಾಖಲೆಗಳು ಹೇಳುತ್ತವೆ. ಇದರ ಹಿಂದೆ ಕಾಳಸಂತೆಯ ಕಳ್ಳಾಟದ ಅನುಮಾನ ವ್ಯಕ್ತವಾಗುತ್ತಿದೆ.
ಒಂದು ವೇಳೆ ಇತರೆ ವಿಭಾಗಗಳ ಮಾರುಕಟ್ಟೆ ಯಲ್ಲೂ ಭಾಗವಹಿಸಿದ್ದರೆ, ಉತ್ತಮ ದರ ಸಿಗುವ ಸಾಧ್ಯತೆಗಳಿವೆ. ಆಗ, ನಷ್ಟದ ಹೊರೆ ಕಡಿಮೆ ಆಗಬಹುದು. ಆದರೆ, ಇದಕ್ಕೆಲ್ಲ ಗಾಳಿಯೇ ಉತ್ತರ ಆಗದಿರಲಿ ಎಂದು ಹೇಳಲಾಗುತ್ತಿದೆ.

Advertisement

ಬೇಡಿಕೆ ಇಲ್ಲದಿದ್ದರೂ
ನಿಲ್ಲದ ಘಟಕಗಳು!
ರಾಜ್ಯದಲ್ಲಿ ವಿದ್ಯುತ್‌ ಬೇಡಿಕೆ ಗಣನೀಯವಾಗಿ ಕುಸಿತ ಕಂಡಿದ್ದರೂ ವಿದ್ಯುತ್‌ ಉತ್ಪಾದನ ಘಟಕಗಳು ಮಾತ್ರ ನಿಲ್ಲುತ್ತಿಲ್ಲ. ಕಳೆದ 15 ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಇದರಿಂದ ಎಸಿ, ಕೃಷಿ ಪಂಪ್‌ಸೆಟ್‌ಗಳು ಸೇರಿದಂತೆ ವಿವಿಧ ವಿಭಾಗಗಳಲ್ಲಿ ವಿದ್ಯುತ್‌ ಬೇಡಿಕೆ ಇಳಿಕೆಯಾಗಿದೆ. ಉದಾಹರಣೆಗೆ ಏಪ್ರಿಲ್‌ 25ರಂದು 322 ಮಿ.ಯೂ. ಇದ್ದ ವಿದ್ಯುತ್‌ ಬೇಡಿಕೆ ಶನಿವಾರ (ಮೇ 25) 186 ಮಿ.ಯೂ.ಗೆ ಕುಸಿದಿದೆ. ಅಂದರೆ ತಿಂಗಳ ಅಂತರದಲ್ಲಿ ಸುಮಾರು 135 ಮಿ.ಯೂ. ಕಡಿಮೆಯಾಗಿದೆ. ಆದಾಗ್ಯೂ ಉಷ್ಣವಿದ್ಯುತ್‌ ಸ್ಥಾವರಗಳು ಬೇಸಗೆಯಲ್ಲಿ ಓಡುವಂತೆ ಈಗಲೂ ಓಡುತ್ತಲೇ ಇವೆ.

ಉಷ್ಣ ವಿದ್ಯುತ್‌ ಸ್ಥಾವರಗಳಿಂದ ಆಗುತ್ತಿರುವ ಉತ್ಪಾದನೆ
– ಆರ್‌ಟಿಪಿಎಸ್‌- 8ರಲ್ಲಿ 7 ಘಟಕಗಳು ಕಾರ್ಯಾಚರಿಸುತ್ತಿದ್ದು, 1,200 ಮೆ.ವಾ. ಉತ್ಪಾದನೆ ಆಗುತ್ತಿದೆ. ಒಂದು ಘಟಕ ತಾಂತ್ರಿಕ ಕಾರಣಗಳಿಂದ ಸ್ಥಗಿತ.
– ವೈಟಿಪಿಎಸ್‌- ಎರಡೂ ಘಟಕಗಳಿಂದ 1,200 ಮೆ.ವಾ.
– ಬಿಟಿಪಿಎಸ್‌- 3 ರಲ್ಲಿ 2 ಘಟಕಗಳು ಕಾರ್ಯಾಚರಣೆಗೊಳ್ಳುತ್ತಿದ್ದು, 800 ಮೆ.ವಾ. ಉತ್ಪಾದನೆ ಆಗುತ್ತಿದೆ. ಒಂದು ಘಟಕ ತಾಂತ್ರಿಕ ಕಾರಣಗಳಿಂದ ಸ್ಥಗಿತ.
– ಯುಪಿಸಿಎಲ್‌- ಎರಡೂ ಘಟಕಗಳಿಂದ 1,100 ಮೆ.ವಾ.
– ಎನ್‌ಟಿಪಿಸಿ ಸೇರಿ ಕೇಂದ್ರೀಯ ಘಟಕಗಳಿಂದ 3,500- 4,000 ಮೆ.ವಾ.

– ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next