Advertisement

ಜೋಳ ಖರೀದಿ ಮಿತಿ ತೆರವು, ರೈತರು ನಿರಾಳ

10:53 AM Feb 10, 2022 | Team Udayavani |

ಸಿಂಧನೂರು: ರೈತರು ಭಾರಿ ನಿರೀಕ್ಷೆಯೊಂದಿಗೆ ಎದುರು ನೋಡುತ್ತಿದ್ದ ಬೇಡಿಕೆಯನ್ನು ಈಡೇರಿಸಲು ಕೊನೆಗೂ ಸರಕಾರ ಸಮ್ಮತಿಸಿದೆ. ಪ್ರತಿ ರೈತರಿಂದ ಕೇವಲ 20 ಕ್ವಿಂಟಲ್‌ ಮಾತ್ರ ಜೋಳ ಖರೀದಿ ಎಂಬ ಷರತ್ತು ಸಡಿಲಿಸಲು ಒಪ್ಪಿಗೆ ಸೂಚಿಸಲಾಗಿದೆ. ನಿರಂತರ ಹೋರಾಟ, ಜನ ಪ್ರತಿನಿಧಿಗಳು ಹಾಗೂ ನಿಯೋಗದ ಒತ್ತಡದಿಂದಾಗಿ ಪ್ರಯತ್ನಕ್ಕೆ ಫಲ ದೊರಕಿದೆ.

Advertisement

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಉಮೇಶ ಕತ್ತಿ ಬುಧವಾರ ಸಂಜೆಯಷ್ಟೇ ಇದಕ್ಕೆ ಸಹಮತಿ ಸೂಚಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದಲೂ ಹಸಿರು ನಿಶಾನೆ ದೊರಕಿದೆ. ಅಧಿಕೃತ ಆದೇಶ ಹೊರಡಿಸುವಂತೆ ಆಹಾರ ಮತ್ತು ನಾಗರಿಕ ಇಲಾಖೆ ಸರಬರಾಜು ಇಲಾಖೆಗೂ ಸೂಚನೆ ನೀಡಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

ಏನಿದು ಷರತ್ತು ಸಡಿಲಿಕೆ?

ಪ್ರತಿಯೊಬ್ಬ ರೈತರಿನಿಂದ 20 ಕ್ವಿಂಟಲ್‌ ಮಾತ್ರ ಜೋಳ ಖರೀದಿಸಬೇಕೆಂಬ ಷರತ್ತನ್ನು ಪ್ರಸಕ್ತ ಬಾರಿ ನಿಗದಿಪಡಿಸಲಾಗಿತ್ತು. ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳನ್ನು ತೆರೆದರೂ ಕೂಡ ರೈತರು ಜೋಳ ಮಾರಾಟಕ್ಕೆ ಉತ್ಸಾಹ ತೋರಿರಲಿಲ್ಲ. ಈ ಬಗ್ಗೆ ಕಳೆದ ಎರಡು ತಿಂಗಳಿಂದಲೂ ನಾನಾ ರೀತಿಯ ಪ್ರಯತ್ನ ನಡೆಸಿದರೂ ಸರಕಾರ ಮಾತ್ರ ಒಪ್ಪಿಗೆ ನೀಡಿರಲಿಲ್ಲ. ಇದೀಗ ಬುಧವಾರ ಸರಕಾರ ತನ್ನ ನಿರ್ಧಾರ ಬದಲಿಸಲು ಮುಂದಾಗಿದೆ. ಜೊತೆಗೆ, ಪ್ರತಿ ರೈತನಿಂದ 20 ಕ್ವಿಂಟಲ್‌ ಎಂಬ ಮಿತಿ ತೆಗೆದು, ಎಕರೆ ಲೆಕ್ಕದಲ್ಲಿ ಜೋಳ ಮಾರಾಟಕ್ಕೆ ಅನುಮತಿ ನೀಡಲು ಸೂಚಿಸಿದೆ.

ಕೆವಿ, ಬೆಳಗುರ್ಕಿ ಪ್ರಯತ್ನಕ್ಕೆ ಯಶಸ್ಸು

Advertisement

ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹಾಗೂ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಅವರು ಬುಧವಾರ ಸಂಜೆ ಆಹಾರ ಸಚಿವ ಉಮೇಶ ಕತ್ತಿಯವರನ್ನು ಭೇಟಿ ಮಾಡಿದ್ದರು. ಆಹಾರ ಇಲಾಖೆ ಆಯುಕ್ತೆ ಕನಗವಲ್ಲಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್‌ ಮೋಹನ್‌ ಅವರನ್ನು ಭೇಟಿ ಮಾಡಿದ್ದರು. ಇಲಾಖೆ ಮಟ್ಟದಲ್ಲಿ ಸಭೆ ನಡೆಸಿದ್ದ ವೇಳೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಅಂತಿಮವಾಗಿ ಜೋಳದ ಬೆಳೆಗಾರರಿಗೆ ಹಾಕಿದ ನಿರ್ಬಂಧ ತೆಗೆಯಲು ಒಪ್ಪಿಗೆ ಸೂಚಿಸಲಾಗಿದೆ. ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಲ್‌ಗೆ 2,738 ರೂ. ದರವಿದೆ. ಆದರೆ, ಮುಕ್ತ ಮಾರುಕಟ್ಟೆಯಲ್ಲಿ 1800-1900 ರೂ.ದರವಿದೆ. ಕಡಿಮೆ ಬೆಲೆ ಇದ್ದ ಹಿನ್ನೆಲೆಯಲ್ಲಿ ಖರೀದಿ ಕೇಂದ್ರದತ್ತ ಮುಖ ಮಾಡಿ ಕುಳಿತಿದ್ದ ರೈತರಲ್ಲಿ ಸರಕಾರದ ನಿರ್ಧಾರ ಸಂತಸ ಮೂಡಿಸಿದೆ.

ಸುದೀರ್ಘ‌ ಹೋರಾಟಕ್ಕೆ ಫಲ

ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಅವರು ಹೋರಾಟಕ್ಕಿಳಿದು, ರೈತ ನಿಯೋಗ ಕೊಂಡೊಯ್ದಿದ್ದರು. ಶಾಸಕ ವೆಂಕಟರಾವ್‌ ನಾಡಗೌಡ ಕೂಡ ಬಹಿರಂಗವಾಗಿ ತಹಶೀಲ್ದಾರ್‌ ಕಚೇರಿ ಎದುರು ಧರಣಿ ನಡೆಸಿದ್ದರು. ಈ ಎಲ್ಲ ಬೆಳವಣಿಗೆ ಬಳಿಕ ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಕೃಷಿ ಉತ್ಪನ್ನಗಳ ಬೆಲೆ ಸ್ಥಿರೀಕರಣ ಸಚಿವ ಸಂಪುಟ ಉಪಸಮಿತಿ ಸದಸ್ಯ ಹನುಮನಗೌಡ ಬೆಳಗುರ್ಕಿ ಸರ್ಕಾರದ ಗಮನ ಸೆಳೆಯಲು ನಿರಂತರವಾಗಿ ಪ್ರಯತ್ನಿಸಿದ್ದರು. ಸುದೀರ್ಘ‌ ಹೋರಾಟದ ಫಲವಾಗಿ ಸರ್ಕಾರ ಒಪ್ಪಿಗೆ ನೀಡಿದಂತಾಗಿದೆ.

ಜೋಳಕ್ಕೆ ಹಾಕಿದ ಗರಿಷ್ಠ ಮಿತಿ ತೆಗೆಯುವುದಕ್ಕೆ ಸಂಬಂಧಿಸಿ ಸಚಿವರು, ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ. ಕಡತಕ್ಕೂ ಸಹಿ ಹಾಕಿದ್ದು, ಆದೇಶ ಹೊರಬೀಳಲಿದೆ. ನಮ್ಮ ಸಮ್ಮುಖದಲ್ಲೇ ಕಡತಕ್ಕೆ ಸಹಿ ಬಿದ್ದಿದ್ದು, ರೈತರ ಬೇಡಿಕೆಗೆ ಸ್ಪಂದಿಸಲಾಗಿದೆ. -ಕೆ.ವಿರೂಪಾಕ್ಷಪ್ಪ, ಮಾಜಿ ಸಂಸದ, ಕೊಪ್ಪಳ ಲೋಕಸಭಾ ಕ್ಷೇತ್ರ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಡಿತರರಿಗೆ ಹೆಚ್ಚುವರಿಯಾಗಿ ಒಂದು ಕೆಜಿ ರಾಗಿ, ಜೋಳ ನೀಡುವ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಅದಕ್ಕೆ ಪೂರಕವಾಗಿ ಗರಿಷ್ಠ ಖರೀದಿ ಮಿತಿ ಸಡಿಲಿಕೆ ಮಾಡುತ್ತಿದ್ದು, ರೈತರಿಗೆ ಇದರಿಂದ ಅನುಕೂಲವಾಗಲಿದೆ. -ಹನುಮನಗೌಡ ಬೆಳಗುರ್ಕಿ, ಅಧ್ಯಕ್ಷ, ಕೃಷಿ ಬೆಲೆ ಆಯೋಗ

-ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next