Advertisement

ಪುರಂದರದಾಸರ ಹುಟ್ಟೂರು ತೀರ್ಥಹಳ್ಳಿ

06:15 AM Jan 20, 2018 | |

ಬೆಂಗಳೂರು: ಕೀರ್ತನ ಸಾಹಿತ್ಯದಲ್ಲಿ ಬಹು ದೊಡ್ಡ ಹೆಸರನ್ನು ಮಾಡಿರುವ ಪುರಂದರದಾಸರ ಹುಟ್ಟೂರಿನ ಬಗ್ಗೆ ಇನ್ನೂ ಜಿಜ್ಞಾಸೆಗಳಿವೆ. ಸುಮಾರು 4.75 ಲಕ್ಷ ಕೀರ್ತನೆಗಳನ್ನು ರಚಿಸಿರುವ ಪುರಂದರ ದಾಸರು ಎಲ್ಲಿಯೂ ತಮ್ಮೂರಿನ ಗುಟ್ಟನ್ನು ಬಿಟ್ಟು ಕೊಟ್ಟಿಲ್ಲ.

Advertisement

ಆದರೆ, ಹಂಪಿ ವಿಶ್ವವಿದ್ಯಾಲಯ ನೇಮಿಸಿರುವ ತಜ್ಞರ ತಂಡ ಇದೀಗ ಪುರಂದರ ದಾಸರು ಮಲೆನಾಡಿಗರು ಎಂಬ ತರ್ಮಾನಕ್ಕೆ ಬಂದಿದೆ.

ಪುರಂದರದಾಸರ ಹುಟ್ಟು ಮತ್ತು ಬೆಳವಣಿಗೆ ಬಗ್ಗೆ ಸಂಶೋಧನೆ ನಡೆಸುವ ಸಂಬಂಧ ನೇಮಕ ಮಾಡಲಾಗಿದ್ದ ತಜ್ಞರ ತಂಡ ಪುರಂದರ ದಾಸರ ಹುಟ್ಟೂರು ಪುಣೆ ಅಲ್ಲ. ಅವರು ಮಲೆನಾಡಿನ ತೀರ್ಥಹಳ್ಳಿಯವರು ಎಂದು ಹೇಳಿದ್ದು, ಈ ಬಗ್ಗೆ ಸದ್ಯದಲ್ಲಿಯೇ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ವರದಿಯನ್ನು ಸಲ್ಲಿಕೆ ಮಾಡಲಿದೆ. ಈಗಾಗಲೇ ತೀರ್ಥಹಳ್ಳಿ ಮತ್ತು ಪುಣೆ ಸೇರಿದಂತೆ ಹಲವು ಪ್ರದೇಶಗಳಿಗೆ ಭೇಟಿ ನೀಡಿರುವ ತಜ್ಞರ ತಂಡ, ಹಳ್ಳಿಗರ ಅಭಿಪ್ರಾಯಗಳನ್ನು ಸಂಗ್ರಹಿಸುವುದರ ಜತೆಗೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಾಕ್ಷ್ಯಧಾರಗಳನ್ನು ಕಲೆಹಾಕಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆರಗ ಹೋಬಳಿಯಲ್ಲಿರುವ ಪುಟ್ಟಗ್ರಾಮ ಕ್ಷೇಮಾಪುರ. ಈಗ
ಈ ಗ್ರಾಮವನ್ನು ಕೇಶವಪುರ ಎಂದು ಕರೆಯುತ್ತಾರೆ. ಈ ಗ್ರಾಮವೇ ಸಂಗೀತ ಪಿತಾಮಹ ಪುರಂದರ ದಾಸರ ಹುಟ್ಟೂರು ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.

ರಾಜ್ಯಸರ್ಕಾರ ಪುರಂದರ ಅಧ್ಯಯನ ಪೀಠ ಸ್ಥಾಪಿಸುವ ಹಿನ್ನೆಲೆಯಲ್ಲಿ ಪುರಂದರದಾಸರ ಪೂರ್ವಾ ಪರ ಅರಿಯಲು ಹಂಪಿಯ ಕನ್ನಡ ವಿವಿ ಕುಲಪತಿ ಡಾ.ಮಲ್ಲಿಕಾ ಘಂಟಿ ಅವರಿಗೆ ಈ ಸಂಬಂಧ ತಜ್ಞರ ಸಮಿತಿಯನ್ನು ರಚಿಸಿ ಅಧ್ಯಯನ ಕೈಗೊಳ್ಳುವಂತೆ ಸೂಚಿಸಿತ್ತು.

Advertisement

ಈ ಹಿನ್ನೆಲೆಯಲ್ಲಿ ಹಂಪಿ ವಿವಿಯು ಸಂಗೀತ ವಿದ್ವಾಂಸ ಪದ್ಮಭೂಷಣ ಆರ್‌.ಕೆ. ಪದ್ಮನಾಭ ನೇತೃತ್ವದಲ್ಲಿ 5 ಜನರ ತಜ್ಞರ ತಂಡವನ್ನು ನೇಮಕ ಮಾಡಿತ್ತು.ಆರ್‌.ಕೆ. ಪದ್ಮನಾಭ ಅವರು ಮುಖ್ಯಸ್ಥರಾಗಿರುವ ತಂಡದಲ್ಲಿ ಮಾಜಿ ಸಚಿವೆ ಲೀಲಾದೇವಿ ಆರ್‌ ಪ್ರಸಾದ್‌,ವಿದ್ವಾಂಸ ಎ.ವಿ.ನಾವಡ, ವೀರಣ್ಣ ರಜೋರಾ, ಅರಳು ಮಲ್ಲಿಗೆ ಪಾರ್ಥ ಸಾರಥಿ ಮತ್ತು ಶಿವಾನಂದ ವಿರಕ್ತ ಮಠ ಸಹ ಸಂಚಾಲಕರಾಗಿದ್ದಾರೆ.

ಈ ತಂಡ ಪುಣೆಯ ಪುರಂದರಗಡ ಸೇರಿದಂತೆ ಪಶ್ಚಿಮ ಘಟ್ಟ ಮತ್ತು ಸಹ್ಯಾದ್ರಿ ತಪ್ಪಲಿನ ವ್ಯಾಪ್ತಿಯ ಹಲವು ಪ್ರದೇಶಗಳಿಗೆ ಭೇಟಿ ನೀಡಿ ದಾಖಲೆಗಳನ್ನು ಸಂಗ್ರಹಿಸಿದೆ. ತೀರ್ಥಹಳ್ಳಿಯ ಆರಗ ಮತ್ತು ಪಶ್ಚಿಮ ಘಟ್ಟದ ಹಲವು ಊರುಗಳಿಗೆ ಕಾಲ್ನಡಿಗೆಯಲ್ಲಿ ಭೇಟಿ ನೀಡಿ ಸಾಂಸ್ಕೃತಿಕ ಮತ್ತು ಸಾಮಾಜಿಕ ಕುರುಹುಗಳನ್ನು ದಾಖಲು ಮಾಡಿದೆ.

ಈಗಿನ ತೀರ್ಥಹಳ್ಳಿ ಸಮೀಪದ ವತೇìಕೇರಿ ಹತ್ತಿರದ ಕ್ಷೇಮಾಪುರ ಪುರಂದರ ದಾಸರ ಹುಟ್ಟೂರು.ವತೇìಕೇರಿ ಆಳರಸರ ಕಾಲದಲ್ಲಿ ವರ್ತಕರ ಕೇರಿ ಆಗಿತ್ತು. ಆಗಿನ ಕಾಲದಲ್ಲಿ ಇದು ವ್ಯಾಪಾರಿಗಳ ಸ್ಥಳ ಆಗಿತ್ತು. ಶ್ರೀನಿವಾಸ ನಾಯಕ (ಪುರಂದರದಾಸರು) ವ್ಯಾಪಾರಸ್ಥ ರಾಗಿದ್ದರು. ನಾಯಕ ಜನಾಂಗ ಇನ್ನೂ ಆರಗ ಹೋಬಳಿಯಲ್ಲಿದ್ದಾರೆ. ದಾಸನಗದ್ದೆ ಮತ್ತು ವಿಠಲನ ಗುಂಡಿಯನ್ನು ನಾವಿಲ್ಲಿ ಕಾಣಬಹುದಾಗಿದೆ. ಅಲ್ಲದೆ ವಿಠಲ, ಪುಂಡಲೀಕ ಮತ್ತು ನಾಯಕ ಹೆಸರಿನವರೂ ಸಾಕಷ್ಟು ಮಂದಿ ಸಿಗುತ್ತಾರೆ ಎಂದು ಸಮಿತಿಯ ಮುಖ್ಯಸ್ಥ ಆರ್‌.ಕೆ.ಪದ್ಮನಾಭ ಹೇಳಿದ್ದಾರೆ.

ಈ ಪ್ರದೇಶ ವಿಜಯನಗರದ ಆಳರಸರ ಕಾಲದಲ್ಲಿ ದೊಡ್ಡ ಸಾಂಸ್ಕೃತಿಕ ಪ್ರದೇಶವಾಗಿ ಗುರುತಿಸಿಕೊಂಡಿತ್ತು. ಆರಗ ರಾಜಧಾನಿಯಾಗಿ ಮೆರೆದಿತ್ತು. ಪುರಂದರ ದಾಸರ ಕಾವ್ಯಗಳಲ್ಲಿ ಮಲೆನಾಡಿನ ಕಂಪನ್ನು ನೋಡಬಹು ದಾಗಿದೆ. ಮಹಾರಾಷ್ಟ್ರದಲ್ಲಿ ಇದ್ದವರು ಇಲ್ಲಿಗೆ ಬಂದು ಕರ್ನಾಟಕ ಸಂಗೀತವನ್ನು ಕಲಿಯಲು ಹೇಗೆ ಸಾಧ್ಯ ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ಅಷ್ಟೊಂದು ಸೊಗಸಾಗಿ ಕೀರ್ತನೆಗಳನ್ನು ರಚಿಸಲು ಹೇಗೆ ಸಾಧ್ಯ ಎಂಬ ಜಿಜ್ಞಾಸೆ ಹುಟ್ಟು ಹಾಕುತ್ತದೆ.

ಇದರ ಜತೆ ಪುಣೆಯಲ್ಲಿರುವ ಪುರಂದರಗಡದಲ್ಲಿ ಪುರಂದರ ದಾಸರ ಕುರಿತು ಯಾವುದೇ ಕುರುಹುಗಳು ದೊರೆಯುತ್ತಿಲ್ಲ. ಆದರೆ ತೀರ್ಥಹಳ್ಳಿಯಲ್ಲಿ ವಿಠಲನ ಗುಂಡಿ ಸೇರಿದಂತೆ ಹಲವು ಕಡೆಗಳಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಮಾಹಿತಿಗಳು ದೊರಕುತ್ತವೆ. ಹಾಗೆ ಈ ಭಾಗದಲ್ಲಿ ಇನ್ನೂ ನಾಯಕ ಜನಾಂಗದವರು ಇದ್ದಾರೆ ಎಂದು ಆರ್‌.ಕೆ. ಪದ್ಮನಾಭ ತಿಳಿಸಿದ್ದಾರೆ.

ಈ ಹಿಂದೆ ಪುರಂದರ ದಾಸರು ಮಹಾರಾಷ್ಟ್ರದ ಪುಣೆ ಸಮೀಪದ ಪುರಂದರಗಡದಲ್ಲಿ ಜನಿಸಿದ್ದರು. ನಂತರ ಪುರಂದರದಾಸರ ಕುಟುಂಬಸ್ಥರು ಹಂಪಿಗೆ ಬಂದು ನೆಲೆಸಿದ್ದರು ಎಂದು ಹೇಳಲಾಗುತ್ತಿತ್ತು. ಕೀರ್ತನೆಕಾರ ವಿಜಯದಾಸರು ಈ ಬಗ್ಗೆ ಹೇಳಿದರೂ ಅವರು ಸ್ಪಷ್ಟವಾಗಿ ಎಲ್ಲಿಯೂ ನಮೂದಿಸಿಲ್ಲ. ಇದಕ್ಕೂ ಮೊದಲು ತೀರ್ಥಹಳ್ಳಿಯ ಪುರಂದರ ಸಮಿತಿ ಈ ಬಗ್ಗೆ ಸಂಶೋಧನೆ ಕೈಗೊಳ್ಳಲು ಸರ್ಕಾರದ ಮೇಲೆ ಪದೇ ಪದೇ ಒತ್ತಡ ಕೂಡ ಹೇರಿತ್ತು. ಕಮಿಟಿ ರಚನೆ ಸಂಬಂಧ ಮಾಜಿ ಶಾಸಕ, ಸಹಕಾರಿ ಬಿ.ಎಸ್‌. ವಿಶ್ವನಾಥ್‌ ಸರ್ಕಾರದ ಮೇಲೆ ಒತ್ತಡ ತಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next