ಪುಂಜಾಲಕಟ್ಟೆ: ಹುಲ್ಲು ತರಲು ತೋಟಕ್ಕೆ ಹೋದವರು ನೀರು ಹರಿಯುವ ತೋಡಿನಲ್ಲಿ ಶವವಾಗಿ ಪತ್ತೆಯಾದ ಘಟನೆ ಆ. 7ರಂದು ಸಂಭವಿಸಿದೆ.
ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಅಜ್ಜಿಬೆಟ್ಟು ಗ್ರಾಮದ ಕೌಡಾಡಿ ನಿವಾಸಿ ವಿಶ್ವನಾಥ ಶೆಟ್ಟಿ (60) ಮೃತಪಟ್ಟವರಾಗಿದ್ದಾರೆ.
ಗುರುವಾರ ಮಧ್ಯಾಹ್ನ ಹುಲ್ಲು ತರಲು ತೋಟಕ್ಕೆ ಹೋದವರು ಹಲವು ಹೊತ್ತಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಗಾಬರಿಯಾದ ಮನೆಮಂದಿ, ತೋಟಕ್ಕೆ ಹೋಗಿ ಹುಡುಕಿದಾಗ ಅಲ್ಲಿ ನೀರು ಹರಿಯುವ ತೋಡಿನಲ್ಲಿ ಇವರು ಬಿದ್ದಿರುವುದು ಕಂಡು ಬಂದಿದೆ.
ತತ್ಕ್ಷಣ ಅವರನ್ನು ಮೇಲಕ್ಕೆತ್ತಿ ವಾಮದಪದವು ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದನ್ನು ದೃಢಪಡಿಸಿದರು.ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.