ಪುಂಜಾಲಕಟ್ಟೆ: ಚುನಾವಣೆಯ ಸಂದರ್ಭದಲ್ಲ ರೈತರು ತಮ್ಮ ಪರವಾನಗಿ ಹೊಂದಿದ ಕೋವಿಗಳನ್ನು ಹತ್ತಿರದ ಪೊಲೀಸ್ ಠಾಣೆಯಲ್ಲಿ ಇರಿಸಬೇಕೆಂಬ ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶದ ವಿರುದ್ಧ ಬಂಟ್ವಾಳ ತಾಲೂಕಿನ ರೈತರೋರ್ವರು ಚುನಾವಣಾ ಮತ ಬಹಿಷ್ಕಾರಕ್ಕೆ ಕರೆ ನೀಡಿ ಫ್ಲೆಕ್ಸ್ ಅಳವಡಿಸಿದ್ದಾರೆ.
ಕೃಷಿಕರ ಕೋವಿಯನ್ನು ಪ್ರತಿ ಸಲ ಚುನಾವಣಾ ಸಮಯದಲ್ಲಿ ಪೊಲೀಸ್ ಠಾಣೆಯಲ್ಲಿಡುವುದರಿಂದ ಪ್ರಾಣಿಗಳ ಹಾವಳಿಗೆ ತುತ್ತಾಗಿ ಕೃಷಿ ನಷ್ಟಕ್ಕೆ ಒಳಗಾಗುತ್ತದೆ. ಬಂಟ್ವಾಳ ತಾಲೂಕಿನ ಬಡಗಕಜೆಕಾರು ಮತ್ತು ತೆಂಕಕಜೆಕಾರು ಗ್ರಾಮದ ಎಲ್ಲಾ ಅಪರಾಧ ಇಲ್ಲದ ಕೋವಿ ಬಳಕೆದಾರರು ಚುನಾವಣಾ ಮತ ಬಹಿಷ್ಕರಿಸುವಂತೆ ವಿನಂತಿಸಿ ಬಂಟ್ವಾಳ ತಾ.ಪಂ.ಮಾಜಿ ಅಧ್ಯಕ್ಷರಾದ ಕೆ.ಎ.ಸತೀಶ್ಚಂದ್ರ ಹೊಸಮನೆ ಅವರು ಕೋವಿ ಬಳಕೆದಾರರ ಪರವಾಗಿ ಫ್ಲೆಕ್ಸ್ ಅಳವಡಿಸಿ ಎಚ್ಚರಿಕೆ ನೀಡಿದ್ದಾರೆ.
ಬಂಟ್ವಾಳ ತಾಲೂಕಿನಲ್ಲೂ ಹಲವಾರು ಮಂದಿ ಕೃಷಿಕರು ಪರವಾನಿಗೆಯುಳ್ಳ ಕೋವಿಯನ್ನು ಹೊಂದಿದ್ದು, ಜಿಲ್ಲಾಧಿಕಾರಿಯವರ ಆದೇಶದಂತೆ ಬಂಟ್ವಾಳ ನಗರ ಮತ್ತು ಗ್ರಾಮಾಂತರ, ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪರವಾನಿಗೆ ಹೊಂದಿರುವ ರೈತರು ಚುನಾವಣೆಯ ಹಿನ್ನೆಲೆಯಲ್ಲಿ ಈಗಾಗಲೇ ತಮ್ಮ ಕೋವಿಯನ್ನು ಡೆಪಾಸಿಟ್ ಇರಿಸಿರುವುದು ಇಲ್ಲಿ ಗಮನಾರ್ಹ ಅಂಶವಾಗಿದೆ.
ಕೋವಿ ಠೇವಣಾತಿ ವಿನಾಯಿತಿಗಾಗಿ ಜಿಲ್ಲಾಧಿಕಾರಿ ನೇತೃತ್ವದ ಸ್ಟೀನಿಂಗ್ ಕಮಿಟಿಗೆ ಅರ್ಜಿ ಸಲ್ಲಿಸಿದ ಹಾಗೂ ಹೈಕೋರ್ಟ್ ಮೆಟ್ಟಿಲೇರಿದ್ದ ಸುಳ್ಯ ಮತ್ತು ಕಡಬದ ಸುಮಾರು 197 ರೈತರಿಗೆ ವಿನಾಯಿತಿ ನೀಡಿ ಸ್ಟೀನಿಂಗ್ ಕಮಿಟಿ ಮತ್ತು ಹೈಕೋರ್ಟ್ ಆದೇಶ ಮಾಡಿದೆ.
ಆದರೆ ಬಂಟ್ವಾಳ ಪರಿಸರದ ಕೋವಿ ಹೊಂದಿದ ರೈತರು ಯಾರು ಕೂಡ ವಿನಾಯಿತಿ ಕೋರಿ ನ್ಯಾಯಾಲಯದ ಮೋರೆ ಹೋದ ಬಗ್ಗೆ ಸ್ಪಷ್ಟತೆಯಿಲ್ಲ. ಇದೀಗ ಬಂಟ್ವಾಳದಲ್ಲಿ ಪರವಾನಿಗೆ ಹೊಂದಿರುವ ಕೋವಿದಾರರು ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.