ಪುಂಜಾಲಕಟ್ಟೆ: ಕಾವಳಪಡೂರು ಗ್ರಾ.ಪಂ.ನ ಘನ ತ್ಯಾಜ್ಯ ನಿರ್ವಹಣೆಗೆ ನಾಲ್ಕು ವರ್ಷಗಳ ಹಿಂದೆ ನಿರ್ಮಿಸಲಾದ ಘಟಕದಲ್ಲಿ ನಿರ್ವಹಣೆ ಆರಂಭಿಸದೆ ಘಟಕ ಖಾಲಿ ಉಳಿದಿದೆ. ಆದರೆ ಇಲ್ಲಿನ ಸಮಾಜ ಭವನದಲ್ಲಿ ಮಹಿಳೆಯರೇ ತ್ಯಾಜ್ಯ ನಿರ್ವಹಣೆ ನಡೆಸುತ್ತಿದ್ದಾರೆ.
ಪಂಚಾಯತ್‌ನಿಂದ ಸುಮಾರು ಏಳು ಕಿಲೋ ಮೀಟರ್ ದೂರದಲ್ಲಿ ಬರ್ಕಟ ಎಂಬಲ್ಲಿ ಘನತ್ಯಾಜ್ಯ ಘಟಕ ನಿರ್ಮಾಣ ಮಾಡಿದ್ದು, ವರ್ಷ ನಾಲ್ಕಾದರೂ ಇನ್ನೂ ಕಾರ್ಯಾರಂಭದ ಲಕ್ಷಣ ಕಾಣುತ್ತಿಲ್ಲ. ಎನ್‌ಆರ್‌ಇಜಿ ಮತ್ತು 15ನೇ ಹಣಕಾಸು ನಿಧಿಯಿಂದ ಘನ ತ್ಯಾಜ್ಯ ನಿರ್ವಹಣೆಗೆ ಘಟಕ ನಿರ್ಮಾಣವಾಗಿರುತ್ತದೆ. ಆದರೆ ಘಟಕಕ್ಕೆ ಸೂಕ್ತ ರಸ್ತೆ ವ್ಯವಸ್ಥೆಯೇ ಇಲ್ಲ. ಸದ್ಯ ಘಟಕ್ಕೆ ಬದಲಾಗಿ ಉಗ್ಗಬೆಟ್ಟು ಎಂಬಲ್ಲಿ ಪಂಚಾಯತ್‌ನ ಸಮಾಜ ಭವನದಲ್ಲಿ ಒಣಕಸಗಳ ವಿಂಗಡಣೆ ಮಾಡಲಾಗುತ್ತಿದೆ. ಪ್ರಸ್ತುತ ಅರುಣೋದಯ ಸಂಜೀವಿನಿ ಮಹಿಳಾ ಒಕ್ಕೂಟ ಸದಸ್ಯರಿಂದ ಘನ ತ್ಯಾಜ್ಯ ನಿರ್ವಹಣೆ ಮಾಡಲಾಗುತ್ತಿದೆ.
ಸುಮಾರು ಒಂಭತ್ತು ಸಾವಿರದಷ್ಟು ಜನಸಂಖ್ಯೆಯನ್ನು ಹೊಂದಿರುವ ಕಾವಳಪಡೂರು ಗ್ರಾ.ಪಂ. ಮಧ್ಯಭಾಗ ದಲ್ಲಿ ರಾಷ್ಟ್ರೀಯ ಹೆದ್ದಾರಿ ಬಿ.ಸಿ.ರೋಡ್-ಕಡೂರು ರಸ್ತೆ ಹಾದುಹೋಗಿರುತ್ತದೆ. ಬಿ.ಸಿ.ರೋಡಿನಿಂದ ಪುಂಜಾಲಕಟ್ಟೆಯ ವರೆಗೆ ರಸ್ತೆ ಅಭಿವೃದ್ಧಿಯಾಗಿದ್ದು, ನಿರಂತರವಾಗಿ ಪ್ರವಾಸಿಗರು ಸಂಚರಿಸುವ ರಸ್ತೆಯು ಇದಾಗಿದೆ. ಹೆಚ್ಚಾಗಿ ಕಾವಳಪಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆಯ ಬದಿಯಲ್ಲೇ ಪ್ರಯಾಣಿಕರು ಎಸೆಯುವ ಒಣಕಸ, ಪ್ಲಾಸ್ಟಿಕ್ ರಸ್ತೆ ಬದಿಯಲ್ಲೇ ರಾಶಿ ರಾಶಿಯಾಗಿರುತ್ತದೆ.
ತ್ಯಾಜ್ಯ ನಿರ್ವಹಣೆಗೆ ಪಂಚಾಯತ್ ಒಂದು ವಾಹನವನ್ನೊಳಗೊಂಡಿದ್ದು, ಹೆದ್ದಾರಿ ಬದಿಯಲ್ಲಿರುವ ಅಂಗಡಿಗಳು, ವಾಣಿಜ್ಯ ಕಟ್ಟಡಗಳಿಂದ ಹಾಗೂ ಹೆದ್ದಾರಿಯಲ್ಲಿ ರಾಶಿಬಿದ್ದಿರುವ ಕಸ ಹಾಗೂ ತ್ಯಾಜ್ಯಗಳನ್ನು ಒಂಬತ್ತು ಮಂದಿ ಸದಸ್ಯರಿರುವ ಅರುಣೋದಯ ಸಂಜೀವಿನಿ ಮಹಿಳಾ ಒಕ್ಕೂಟದ ಮಹಿಳೆಯರೇ ನಿರ್ವಹಣೆ ಮಾಡುತ್ತಿದ್ದಾರೆ. ಹಸಿ ಕಸ ಮತ್ತು ಒಣ ಕಸ ಎಂದು ತಿಂಗಳಿಗೆ ಸುಮಾರು 2.5 ಟನ್ ಕಸಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ.
ಮುಂದೆ ಮನೆಗಳಿಂದೂ ಒಣ ತ್ಯಾಜ್ಯ ಸಂಗ್ರಹ
ಕಳೆದ ನಾಲ್ಕು ವರ್ಷಗಳ ಹಿಂದೆ ಬರ್ಕಟ ಎಂಬಲ್ಲಿ ಘನತ್ಯಾಜ್ಯ ಘಟಕ ನಿರ್ಮಾಣ ಮಾಡಿದ್ದರೂ ಸೂಕ್ತವಾದ ರಸ್ತೆ ವ್ಯವಸ್ಥೆಯಿಲ್ಲದ ಅದನ್ನು ಉಪಯೋಗಿಸಲು ಸಾಧ್ಯವಾಗಿಲ್ಲ. ಪ್ರಸ್ತುತ ಅಂಗಡಿ, ವಾಣಿಜ್ಯ ಕಟ್ಟಡಗಳಿಂದ ಒಣ ತ್ಯಾಜ್ಯ ಸಂಗ್ರಹಣೆಯನ್ನು ಆರಂಭಿಸಿದ್ದು ಹಂತ ಹಂತವಾಗಿ ಗುಂಪು ಮನೆಗಳಿಂದ ಒಣ ತ್ಯಾಜ್ಯ ಸಂಗ್ರಹಣೆ ಅರಂಭಿಸಲಾಗುತ್ತಿದೆ ಎಂದು ಕಾವಳಪಡೂರು ಗ್ರಾಮ ಪಂಚಾಯತ್ ಅಧ್ಯಕ್ಷ ಲಕ್ಷ್ಮೀ ನಾರಾಯಣ ಶರ್ಮ ಹೇಳಿದ್ದಾರೆ.
ಶೀಘ್ರ ಕಾರ್ಯಾರಂಭ
ಕಳೆದ ಕೆಲವು ವರ್ಷದಿಂದ ಗ್ರಾಮ ಪಂಚಾಯತ್ ಸಮಾಜ ಭವನದಲ್ಲೇ ತಾತ್ಕಾಲಿಕವಾಗಿ ನಿರ್ವಹಣೆ ಮಾಡಲಾಗುತ್ತಿದ್ದು. ಪೂರ್ಣ ಪ್ರಮಾಣದ ಘನತ್ಯಾಜ್ಯ ಘಟಕ ಬರ್ಕಟ ಎಂಬಲ್ಲಿ ನಿರ್ಮಾಣ ಗೊಂಡಿದ್ದು ಶೀಘ್ರ ಆರಂಭಿಸಲಾಗುವುದು. ಪಂಚಾಯತ್ ವತಿಯಿಂದ ತ್ಯಾಜ್ಯ ಸಾಗಾಟ ವಾಹನದ ನಿರ್ವಹಣೆ ಮಾಡಲಾಗುತ್ತಿದೆ.
-ರಚನ್ ಕುಮಾರ್, ಪಂ. ಅ. ಅಧಿಕಾರಿ