Advertisement

ಪುಂಜಾಲಕಟ್ಟೆ-ಚಾರ್ಮಾಡಿ ಚತುಷ್ಪಥ ಮತ್ತಷ್ಟು ವಿಳಂಬ?

01:58 AM Jan 07, 2021 | Team Udayavani |

ಬೆಳ್ತಂಗಡಿ: ರಾಜಧಾನಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಶಿರಾಡಿ ರಸ್ತೆಯ ನಂತರದ ಪರ್ಯಾಯ ಚಾರ್ಮಾಡಿ ರಸ್ತೆಯ ಅಭಿವೃದ್ಧಿಗೆ ಮುಹೂರ್ತವೇ ಕೂಡಿಬಂದಿಲ್ಲ. ಜತೆಗೆ ಮುಂದಿನ 3 ವರ್ಷ ಇದೇ ಸಂಕಟದಲ್ಲಿ ಕಾಲ ಕಳೆಯಬೇಕಿದೆ.

Advertisement

ಪ್ರಸ್ತುತ ರಾಷ್ಟ್ರೀಯ ಹೆದ್ದಾರಿ 73ರ ಮಂಗಳೂರು -ವಿಲ್ಲುಪುರಂ ರಸ್ತೆಯ ಬಿ.ಸಿ. ರೋಡ್‌- ಪುಂಜಾಲಕಟ್ಟೆ ರಸ್ತೆ ಕಾಮಗಾರಿ ಪೂರ್ಣಗೊಂಡ ಬಳಿಕ ಎರಡನೇ ಹಂತದಲ್ಲಿ ಪುಂಜಾಲಕಟ್ಟೆ- ಚಾರ್ಮಾಡಿ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳುವ ಸಂಬಂಧ ರಾ. ಹೆ. ಇಲಾಖೆ 3 ಹಂತಗಳಲ್ಲಿ ಡಿಪಿಆರ್‌ ನಡೆಸಿದೆ. ಈ ಕಾಮಗಾರಿಯನ್ನು ಶೀಘ್ರ ಆರಂಭವಾಗಲಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಹೇಳಿದ್ದಾರೆ. ಆದರೆ ಬಿ.ಸಿ. ರೋಡ್‌ – ಪುಂಜಾಲಕಟ್ಟೆ ರಸ್ತೆ ಕಾಮಗಾರಿ ಪೂರ್ಣಗೊಳ್ಳದೆ 2 ನೇ ಹಂತದ ಕಾಮಗಾರಿ ಆರಂಭವಾಗುವ ಸಾಧ್ಯತೆ ಕಡಿಮೆ. ಹಾಗಾಗಿ ಇದು ವಿಳಂಬವಾಗುವ ಸಂಭವವಿದೆ.

ಅನುದಾನ ಕೊರತೆ
ಒಂದೆರೆಡು ಸೇತುವೆ ಹೊರತುಪಡಿಸಿ ಬಿ.ಸಿ.ರೋಡ್‌ – ಪುಂಜಾಲಕಟ್ಟೆ ರಸ್ತೆ ಕಾಮಗಾರಿ ಎಪ್ರಿಲ್‌ನಲ್ಲಿ ಪೂರ್ಣಗೊ ಳಿಸುವುದಾಗಿ ಇಲಾಖೆ ತಿಳಿಸಿತ್ತು. ಈ ಮಧ್ಯೆ ಮಣಿಹಳ್ಳ ಮಾರ್ಗ ಮಧ್ಯೆ ಪದೇಪದೆ ಭೂ ಕುಸಿತ ಉಂಟಾಗುತ್ತಿದ್ದು, ಅಲ್ಲಿ ಭೂ ಸ್ವಾಧೀನ ನಡೆಸಬೇಕಿದೆ. ಆರಂಭದಲ್ಲಿ 159 ಕೋ.ರೂ. ನಲ್ಲಿ ಕಾಮಗಾರಿ ಆರಂಭಗೊಂಡಿದ್ದು, ಅದಕ್ಕೆ ಹೆಚ್ಚಿನ ಅನುದಾನ ಅಗತ್ಯವಿದೆ. ಒಂದನೇ ಹಂತದಲ್ಲಿ ಬಿ.ಸಿ.ರೋಡ್‌-ಜಕ್ರಿಬೆಟ್ಟು ಚತುಷ್ಪಥ (3.85 ಕಿ.ಮೀ.) ಹಾಗೂ ಪುಂಜಾಲಕಟ್ಟೆ- ಜಕ್ರಿಬೆಟ್ಟು (16 ಕಿ.ಮೀ.) ಸೇರಿ ಒಟ್ಟು 19.85 ಕಿ.ಮೀ. ಕಾಮಗಾರಿ ಪೂರ್ಣಗೊಂಡಾಗ ಮಳೆಗಾಲ ಆರಂಭವಾದರೂ ಆಶ್ಚರ್ಯವಿಲ್ಲ.

ಘಾಟಿಯಲ್ಲಿ ರಿಟೇನಿಂಗ್‌ ವಾಲ್‌ ಕಾಮಗಾರಿ
ಚಾರ್ಮಾಡಿ ಘಾಟಿಯಲ್ಲಿ 26 ಹೊಸ ಮೋರಿಗಳು ಸಹಿತ 2 ಕಡೆಗಳಲ್ಲಿ 10ರಿಂದ 15 ಮೀ. ಉದ್ದ, 4ರಿಂದ 5 ಮೀ. ಎತ್ತರದ ರಿಟೇನಿಂಗ್‌ ವಾಲ್‌ಗ‌ಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

ಭೂಸ್ವಾಧೀನ ನಡೆದಿಲ್ಲ
ಇವೆಲ್ಲದಕ್ಕೂ ಮುನ್ನ ಕಾಮಗಾರಿಗೆ ಭೂ ಸ್ವಾಧೀನ ಪ್ರಕ್ರಿಯೆ ಆರಂಭಿಸಬೇಕಿದ್ದು, ಭೂ ಮಾಲಕರಿಗೆ ನೋಟಿಸ್‌ ನೀಡಿ, ಆಕ್ಷೇಪಣೆಗೆ ಅವಕಾಶ ನೀಡಬೇಕಿದೆ. ರಾಜ್ಯ ಸರಕಾರ ಭೂಸ್ವಾಧೀನ ನಡೆಸಿದ ಬಳಿಕ ಕೇಂದ್ರ ಸರಕಾರ ಅನುದಾನ ಒದಗಿಸಲಿದೆ. ಇದಕ್ಕೆಲ್ಲಾ ಕನಿಷ್ಠ 2 ವರ್ಷಕ್ಕಿಂತ ಹೆಚ್ಚಿನ ಅವಧಿ ಅಗತ್ಯವಿದೆ.

Advertisement

ಪುಂಜಾಲಕಟ್ಟೆ – ಚಾರ್ಮಾಡಿ ಚತುಷ್ಪಥ
ಪುಂಜಾಲಕಟ್ಟೆಯಿಂದ ಚಾರ್ಮಾಡಿ (40 ಕಿ.ಮೀ. ನಿಂದ 75 ಕಿ.ಮೀ.) ವರೆಗೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಮೂರು ಬಾರಿ ಡಿಪಿಆರ್‌(ಡಿಟೇಲ್‌ ಪ್ರಾಜೆಕ್ಟ್ ರಿಪೋರ್ಟ್‌) ಸರ್ವೇ ಕಾರ್ಯ ನಡೆದಿದ್ದು, ಸುಮಾರು 395 ಕೋ.ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಸಂಸದರು ಮತ್ತು ಶಾಸಕ ಹರೀಶ್‌ ಪೂಂಜ ಅವರು ನಿರಂತರ ಫಾಲೋಅಪ್‌ನಲ್ಲಿದ್ದಾರೆ.

ಹಳ್ಳ ಹಿಡಿದ ಘಾಟಿ ರಸ್ತೆ ಅಭಿವೃದ್ಧಿ
2019ರ ಆ.8ರಲ್ಲಿ ಪ್ರಾಕೃತಿಕ ದುರಂತ ಸಂಭವಿಸಿದ ಚಾರ್ಮಾಡಿ ಘಾಟಿಯ ಚಿಕ್ಕಮಗಳೂರು ವ್ಯಾಪ್ತಿಯಲ್ಲಿ 3 ಕಡೆಗಳಲ್ಲಿ ರಸ್ತೆ ಅಭಿವೃದ್ಧಿಗೆ ಭೂಸ್ವಾಧೀನ ಪ್ರಕ್ರಿಯೆ ನಡೆಸಿಲ್ಲ. ಅದಕ್ಕೂ 3 ವರ್ಷಗಳ ಹಿಂದೆ ಚಾರ್ಮಾಡಿ ಘಾಟಿ 75 ಕಿ. ಮೀ.ನಿಂದ 99 ಕಿ. ಮೀ.ವರೆಗೆ ರಸ್ತೆ ಅಗಲೀಕರಣ ಹಾಗೂ ತಡೆಗೋಡೆ ರಚಿಸಿ ಸಾಯಿಲ್‌ ನೇಲಿಂಗ್‌ ಟೆಕ್ನಾಲಜಿ ಅಳವಡಿಕೆಗೆ 225 ಕೋ.ರೂ.ಯ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದು ಅರಣ್ಯ ಇಲಾಖೆ ಗುದ್ದಾಟದಿಂದ ಹಳ್ಳ ಹಿಡಿದಿದೆ. ಪರಿಣಾಮ ಬಸ್‌ ಸಹಿತ ಘನವಾಹನ ಸಂಚರಿಸದೆ ಮುಂದಿನ ಆಗಸ್ಟ್‌ ಗೆ 3 ವರ್ಷ ಆಗಲಿದೆ.

2ನೇ ಹಂತದಲ್ಲಿ ಪುಂಜಾಲಕಟ್ಟೆ- ಚಾರ್ಮಾಡಿ ಕಾಮಗಾರಿ ನಡೆಸಲು ಸರ್ವೇ ನಡೆದಿದೆ. ಯೋಜನೆ ಅನುಮೋದನೆ ದೊರೆತಲ್ಲಿ ಕಾಮಗಾರಿ ಆರಂಭಿಸಲಾಗುವುದು. ಸದ್ಯ ಪ್ರಾಕೃತಿಕ ವಿಕೋಪ ನಿಧಿಯಡಿ 1.30 ಕೋ.ರೂ. ವೆಚ್ಚದಲ್ಲಿ ಘಾಟಿಯಲ್ಲಿ 25 ಹೊಸ ಮೋರಿಗಳ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದೆ. 2 ಕಡೆ ರಿಟೇನಿಂಗ್‌ ವಾಲ್‌ ಕಾಮಗಾರಿ ನಡೆಯುತ್ತಿದೆ.
ರಮೇಶ್‌, ಎಇಇ ಎನ್‌ಎಚ್‌ ಎಐ ನ ಉಪವಿಭಾಗ, ಮಂಗಳೂರು

ಗುರುವಾಯನ ಕೆರೆಯಿಂದ ಉಜಿರೆವರೆಗೆ 80 ಕೋ.ರೂ. ವೆಚ್ಚದಲ್ಲಿ ಪ್ರತ್ಯೇಕ 11 ಕಿ.ಮೀ. ರಸ್ತೆ (14 ಮೀ. ಅಗಲ) ಕಾಂಕ್ರೀಟ್‌ ಚತುಷ್ಪಥ ರಸ್ತೆಯಾಗಲಿದೆ. ಉಳಿದಂತೆ ಪುಂಜಾಲಕಟ್ಟೆ-ಗುರುವಾಯನಕೆರೆ ಹಾಗೂ ಉಜಿರೆಯಿಂದ ಚಾರ್ಮಾಡಿ ರಸ್ತೆ (12 ಮೀ.ಅಗಲ) ಡಾಮರೀಕರಣಗೊಳ್ಳಲಿದೆ.

ಯೋಜನೆಯ ವೆಚ್ಚ , ಮಾದರಿ ಹೇಗಿದೆ?
3 ಹಂತಗಳಲ್ಲಿ ಡಿಪಿಆರ್‌
80 ಕೋಟಿ ರೂ. ವೆಚ್ಚದ ಯೋಜನೆ
4 ಪಥಗಳ 11 ಕಿ.ಮೀ. ಕಾಂಕ್ರೀಟ್‌ ರಸ್ತೆ
12 ಕಿ.ಮೀ. ಡಾಮರು ರಸ್ತೆ ನಿರ್ಮಾಣ

 ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next