ಚೆನ್ನೈ: ಮೊದಲ ಪಂದ್ಯದಲ್ಲಿ ರೋಚಕ ಗೆಲುವು ದಾಖಲಿಸಿ ಬೀಗಿದ ಬೆನ್ನಲ್ಲೇ ಸತತ ಎರಡು ಪಂದ್ಯ ಸೋತು ಆಘಾತಕ್ಕೊಳಗಾದ ಪಂಜಾಬ್ ಕಿಂಗ್ಸ್ ಮತ್ತು ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿರುವ ಡೇವಿಡ್ ವಾರ್ನರ್ ಸಾರಥ್ಯದ ಹೈದರಾಬಾದ್ ಬುಧವಾರದ ಹಗಲು ಪಂದ್ಯದಲ್ಲಿ ಮುಖಾಮುಖೀಯಾಗಲಿದೆ. ಇನ್ನೊಂದು ಪಂದ್ಯ ಚೆನ್ನೈ-ಕೆಕೆಆರ್ ನಡುವೆ ಸಾಗಲಿದೆ.
ಸಾಮಾನ್ಯವಾಗಿ ವಾರಂತ್ಯ ಹಾಗೂ ಭಾನುವಾರ ಎರಡು ಪಂದ್ಯಗಳನ್ನು ನಡೆಸುವುದು ಸಂಪ್ರದಾಯ. ಆದರೆ ಈ ಬಾರಿ ವಾರದ ನಡುವೆ ಎರಡು ಪಂದ್ಯ ಆಡಿಸುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಕಳೆದ ಶನಿವಾರ ಒಂದೇ ಪಂದ್ಯ ನಡೆದಿತ್ತು. ಇದನ್ನು ಸರಿದೂಗಿಸಲು ಹೀಗೆ ಮಾಡಿರುವ ಸಾಧ್ಯತೆ ಇದೆ.
ಹನ್ನೊಂದರ ಬಳಗದ ಗೊಂದಲ!: ಸತತ ಮೂರು ಸೋಲು ಕಂಡಿರುವ ಹೈದರಾಬಾದ್ ತಂಡಕ್ಕೆ ಹನ್ನೊಂದರ ಬಳಗದ ಆಯ್ಕೆಯೇ ದೊಡ್ಡ ಗೊಂದಲವಾಗಿದೆ. ಮುಖ್ಯವಾಗಿ ಇಲ್ಲಿ ವಿದೇಶಿ ಕ್ರಿಕೆಟಿಗರ ಆಯ್ಕೆಯಲ್ಲಿ ತಂಡ ಎಡವಟ್ಟು ಮಾಡಿಕೊಳ್ಳುತ್ತಿದೆ. ತಂಡದ ಫಾರಿನ್ ಕ್ರಿಕೆಟಿಗರೆಲ್ಲ ಸ್ಟಾರ್ ಆಟಗಾರರೇ ಆಗಿರುವುದರಿಂದ ಯಾರಿಗೆ ಅವಕಾಶ ನೀಡುವುದು ಎನ್ನುವುದೇ ಯಕ್ಷಪ್ರಶ್ನೆಯಾಗುತ್ತಿದೆ!
ಗೆಲುವಿನ ಸಮೀಪ ಪಲ್ಟಿ!: ಉತ್ತಮ ಆರಂಭ ಪಡೆದು ಇನ್ನೇನು ತಂಡ ಗೆಲುವು ಸಮೀಪಿಸಿತು ಎನ್ನುವಾಗಲೇ ನಾಟಕೀಯ ಕುಸಿತ ಕಂಡು ಪಂದ್ಯವನ್ನು ಕೈಚೆಲ್ಲುತ್ತಿರುವುದು ಹೈದರಾಬಾದ್‌ಗೆ ಎದುರಾಗಿರುವ ದೊಡ್ಡ ಕಂಟಕ. ನಾಯಕ ವಾರ್ನರ್ ಮತ್ತು ಜಾನಿ ಬೇರ್‌ಸ್ಟೊ ಹೊರತುಪಡಿಸಿ ಬೇರೆ ಆಟಗಾರರು ಕ್ರೀಸ್ ಆಕ್ರಮಿಸಿಕೊಳ್ಳುವಲ್ಲಿ ವಿಫಲ ರಾಗುತ್ತಿದ್ದಾರೆ. ಮನೀಷ್ ಪಾಂಡೆ ಬ್ಯಾಟಿಂಗ್ ವಿಸ್ತರಿಸಿದರೂ ಇದರಲ್ಲಿ ಟಿ20 ಜೋಶ್ ಕಂಡುಬರುತ್ತಿಲ್ಲ. ಅವರ ನಿಧಾನ ಗತಿಯ ಆಟದಿಂದ ತಂಡಕ್ಕೆ ಹೆಚ್ಚು ಹಾನಿ ಆಗುತ್ತಿರುವುದು ಸುಳ್ಳಲ್ಲ. ಕೆಳ ಸರದಿಯಲ್ಲಿ ಅಬ್ದುಲ್ ಸಮದ್, ವಿಜಯ್ ಶಂಕರ್ ಕೂಡ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ.
ಈ ಬಾರಿ ಏನು ಪ್ರಯೋಗ?: ಮೊದಲೆರಡು ಪಂದ್ಯಗಳ ಸೋಲಿನ ಬೆನ್ನಲ್ಲೆ 3ನೇ ಪಂದ್ಯಕ್ಕೆ ನಾಲ್ವರು ಆಟಗಾರರನ್ನು ಬದಲಾಯಿಸಿಯೂ ಯಶಸ್ಸು ಕಾಣದ ಹೈದರಾಬಾದ್ ಈ ಪಂದ್ಯಕ್ಕೆ ಯಾವ ಪ್ರಯೋಗ ನಡೆಸಲಿದೆ ಎನ್ನುವ ಕುತೂಹಲವಿದೆ. ಹೈದರಾಬಾದ್ ಬೌಲಿಂಗ್ ಬಹಳ ವೈವಿಧ್ಯಮಯ. ರಶೀದ್ ಖಾನ್, ಭುವನೇಶ್ವರ್, ಖಲೀಲ್ ಅಹ್ಮದ್, ನಟರಾಜನ್ ಅವರೆಲ್ಲ ಎದುರಾಳಿಗೆ ನಿಯಂತ್ರಣ ಹೇರಲು ಸಮರ್ಥರಾಗಿದ್ದಾರೆ. ಈ ವರೆಗೆ ಆಡಿದ ಎಲ್ಲ ಪಂದ್ಯಗಳಲ್ಲೂ ಚೇಸಿಂಗ್ ನಡೆಸಿ ಸೋತ ಹೈದರಾಬಾದ್‌ಗೆ ಮೊದಲು ಬ್ಯಾಟಿಂಗ್ ನಡೆಸುವ ಅವಕಾಶವೊಂದು ದೊರೆತರೆ ಬೌಲರ್‌ಗಳು ತಂಡಕ್ಕೆ ಗೆಲುವು ತಂದುಕೊಡುವ ಸಾಧ್ಯತೆ ಇದೆ.
ಪಂಜಾಬ್‌ಗ ಬೌಲಿಂಗ್ ಚಿಂತೆ: ಪಂಜಾಬ್‌ನದ್ದು ಹೈದರಾಬಾದ್‌ಗೆ ತದ್ವಿರುದ್ಧವಾದ ಸಮಸ್ಯೆ. ಶ್ರೇಷ್ಠ ಮಟ್ಟದ ಬ್ಯಾಟಿಂಗ್ ಮೂಲಕ ಇನ್ನೂರರ ಸನಿಹಕ್ಕೆ ತಲುಪಿದರೂ ಕಳಪೆ ಬೌಲಿಂಗ್‌ನಿಂದ ಪಂದ್ಯವನ್ನು ಉಳಿಸಿಕೊಳ್ಳುವಲ್ಲಿ ಪಂಜಾಬ್ ವಿಫಲವಾಗುತ್ತಿದೆ. ಪ್ರಧಾನ ವೇಗಿ ಮೊಹಮ್ಮದ್ ಶಮಿ, ರಿಲೀ ಮೆರೆಡಿತ್, ಜೇ ರಿಚರ್ಡ್‌ಸನ್ ದುಬಾರಿಯಾಗುತ್ತಿದ್ದಾರೆ. ಸ್ಪಿನ್ ವಿಭಾಗವೂ ಘಾತಕವಾಗಿ ಪರಿಣಮಿಸುತ್ತಿಲ್ಲ.
ಈ ಪಂದ್ಯದಲ್ಲಿ ಪಂಜಾಬ್ ಬೌಲಿಂಗ್ ವಿಭಾಗದಲ್ಲಿ ಕೆಲವು ಬದಲಾವಣೆ ಸಂಭವಿಸಿದರೂ ಅಚ್ಚರಿಯಿಲ್ಲ. ಮೆರೆಡಿತ್ ಮತ್ತು ರಿಚರ್ಡ್‌ಸನ್ ಬದಲು ಆಲ್ ರೌಂಡರ್ ಮೊಸಸ್ ಹೆನ್ರಿಕ್ಸ್ ಮತ್ತು ಕ್ರಿಸ್ ಜೋರ್ಡನ್ ಸ್ಥಾನ ಪಡೆಯಬಹುದು. ಜತೆಗೆ ನಿಕೋಲಸ್ ಪೂರಣ್ ಬದಲು ಮತ್ತೋರ್ವ ವಿಂಡೀಸ್ ಆಟಗಾರ ಫ್ಯಾಬಿಯನ್ ಅಲನ್‌ಗೆ ಅವಕಾಶ ನೀಡುವ ಸಾಧ್ಯತೆ ಇದೆ.