ಮೊಹಾಲಿ : ಪಂಜಾಬ್ ಕ್ರಿಕೆಟ್ ಸಂಸ್ಥೆಯ ಐ ಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 24 ರನ್ ಗಳ ಅಮೋಘ ಜಯ ಸಾಧಿಸಿದೆ.
ಪಂಜಾಬ್ ಕಿಂಗ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು . ಆರ್ ಸಿಬಿ 4 ವಿಕೆಟ್ ನಷ್ಟಕ್ಕೆ 174 ರನ್ ಕಲೆ ಹಾಕಿತು. ನಾಯಕ ವಿರಾಟ್ ಕೊಹ್ಲಿ 59 ರನ್ ಗಳಿಸಿ ಔಟಾದರು. ಅಮೋಘ ಆಟವಾಡಿದ ಡು ಫ್ಲೆಸಿಸ್ 84 ರನ್ ಗಳಿಸಿದರು.
ಗುರಿ ಬೆನ್ನಟ್ಟಿದ ಪಂಜಾಬ್ 18.2 ಓವರ್ ಗಳಲ್ಲಿ 150 ರನ್ ಗಳಿಗೆ ಆಲೌಟಾಯಿತು. ಪ್ರಭಾಸಿಮ್ರಾನ್ ಸಿಂಗ್ 46, ಜಿತೇಶ್ ಶರ್ಮಾ 41 ರನ್ ಗಳಿಸಿದರೂ ಉಳಿದ ಆಟಗಾರರು ನೆಲಕಚ್ಚಿ ಆಡಲು ವಿಫಲರಾದರು. ಆರ್ ಸಿಬಿ ಪರ ಬಿಗಿ ಬೌಲಿಂಗ್ ದಾಳಿ ನಡೆಸಿದ ಮೊಹಮ್ಮದ್ ಸಿರಾಜ್ 21 ರನ್ ನೀಡಿ 4 ವಿಕೆಟ್ ಕಬಳಿಸಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಸಿರಾಜ್ ಎರಡು ಎಲ್ಬಿಡಬ್ಲ್ಯೂ ಮತ್ತು ಎರಡು ಕ್ಲೀನ್ ಬೌಲ್ಡ್ ಮಾಡಿ ಪಂದ್ಯದ ಚಿತ್ರಣ ಬದಲಿಸಿದರು. ಅವರ ಎಕಾನಮಿ ರೇಟ್ 5.20 ಆಗಿತ್ತು. ವನಿಂದು ಹಸರಂಗ 2 ವಿಕೆಟ್, ಪಾರ್ನೆಲ್ ಮತ್ತು ಹರ್ಷಲ್ ಪಟೇಲ್ ತಲಾ 1 ವಿಕೆಟ್ ಪಡೆದರು.
ಕೊಹ್ಲಿ ಅವರು ಬೆಂಗಳೂರು ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದರು. ಕಳೆದ ಪಂದ್ಯದಲ್ಲಿ ನೋವಿಗೆ ಗುರಿಯಾಗಿದ್ದ ಫ್ಲೆಸಿಸ್ ಫೀಲ್ಡಿಂಗ್ ಗೆ ಇಳಿಯದೆ ಬ್ಯಾಟಿಂಗ್ ಮಾತ್ರ ಮಾಡಿದರು.
ಆಡಿದ 6 ಪಂದ್ಯಗಳಲ್ಲಿ3 ಪಂದ್ಯಗಳಲ್ಲಿ ಗೆದ್ದಿರುವ ಆರ್ ಸಿಬಿ 6 ಅಂಕಗಳೊಂದಿಗೆ(-0.068 ರನ್ ರೇಟ್) ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.