ಮುಂಬೈ: ಒಂದೆಡೆ ಟಿ20 ವಿಶ್ವಕಪ್ ನಡೆಯುತ್ತಿದ್ದರೆ ಮತ್ತೊಂದೆಡೆ ಕಲರ್ ಫುಲ್ ಟಿ20 ಲೀಗ್ ಐಪಿಎಲ್ ನ ತಯಾರಿ ಆರಂಭವಾಗಿದೆ. ಮುಂದಿನ ಐಪಿಎಲ್ ಸೀಸನ್ ಗೂ ಮೊದಲು ಫ್ರಾಂಚೈಸಿಗಳು ತಮ್ಮ ತಂಡಗಳ ರಿಪೇರಿ ಕೆಲಸದಲ್ಲಿ ತೊಡಗಿವೆ. ಮಿನಿ ಹರಾಜಿಗೆ ಮೊದಲು ಕೆಲ ಆಟಗಾರರನ್ನು ಕೈಬಿಡಲು ಸಿದ್ದವಾಗಿದೆ.
ಈ ನಡುವೆ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ತಮ್ಮ ಕ್ಯಾಪ್ಟನ್ ಬದಲಾವಣೆ ಮಾಡಿದೆ. ಕಳೆದ ಸೀಸನ್ ನಲ್ಲಿ ತಂಡವನ್ನು ಮುನ್ನಡೆಸಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ ಬದಲಿಗೆ ಶಿಖರ್ ಧವನ್ ಅವರನ್ನು ನೇಮಕ ಮಾಡಲಾಗಿದೆ.
ಬುಧವಾರದಂದು ಫ್ರಾಂಚೈಸ್ ಬೋರ್ಡ್ ಸಭೆಯಲ್ಲಿ ಧವನ್ ಅವರ ಹೆಸರನ್ನು ನಾಯಕನ ಸ್ಥಾನಕ್ಕೆ ಅನುಮೋದಿಸಲಾಗಿದೆ. ಕಿಂಗ್ಸ್ ಗೆ ಹೊಸದಾಗಿ ನೇಮಕಗೊಂಡ ಮುಖ್ಯ ಕೋಚ್ ಟ್ರೆವರ್ ಬೇಲಿಸ್ ಅವರನ್ನು ಈ ನಡೆಯನ್ನು ಬೆಂಬಲಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಮಂಗಳೂರು : ಅನಧಿಕೃತ ರೈಲ್ವೇ ಆ್ಯಪ್ ನಂಬಿ ಬೇಸ್ತು ಬಿದ್ದ ಪ್ರಯಾಣಿಕರು!
ಕಳೆದ ಸೀಸನ್ ನಲ್ಲಿ ಶಿಖರ್ ಧವನ್ ಅವರನ್ನು ಪಂಜಾಬ್ ತಂಡವು 8.25 ಕೋಟಿ ರೂ ನೀಡಿ ಖರೀದಿ ಮಾಡಿತ್ತು. ಧವನ್ 14 ಪಂದ್ಯಗಳಲ್ಲಿ 38.33 ಸರಾಸರಿ ಮತ್ತು 122.66 ಸ್ಟ್ರೈಕ್ ರೇಟ್‌ನೊಂದಿಗೆ 460 ರನ್ ಗಳಿಸಿದರು. ಮಯಾಂಕ್ ಅಗರ್ವಾಲ್ ಅವರು ಮೊದಲ ಬಾರಿಗೆ ತಂಡವನ್ನು ಮುನ್ನಡೆಸಿದ್ದರು. ಆದರೆ ಮಯಾಂಕ್ ಬ್ಯಾಟಿಂಗ್ ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ.
2021ರ ಸೀಸನ್ ವರೆಗೆ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿಕೊಂಡು ಬರುತ್ತಿದ್ದ ಮಯಾಂಕ್ ಕಳೆದ ಸೀಸನ್ ನಲ್ಲಿ ಮಂಕಾಗಿದ್ದರು. ಅಗರ್ವಾಲ್ 13 ಪಂದ್ಯಗಳಲ್ಲಿ 16.33 ಸರಾಸರಿಯಲ್ಲಿ ಕೇವಲ 196 ರನ್ ಗಳಿಸಿದ್ದರು. ತಂಡವೂ ಉತ್ತಮ ಪ್ರದರ್ಶನ ನೀಡಲಿಲ್ಲ. ಬಲಿಷ್ಠ ಆಟಗಾರರಿದ್ದರೂ ಪಂಜಾಬ್ ಕಿಂಗ್ಸ್ ಸೆಮಿ ಪ್ರವೇಶ ಪಡೆಯಲಿಲ್ಲ. ಹೀಗಾಗಿ ಮಯಾಂಕ್ ನಾಯಕನ ಸ್ಥಾನಕ್ಕೆ ಕುತ್ತು ಬಂದಿದೆ. ಅಗರ್ವಾಲ್ ರನ್ನು ತಂಡದಿಂದಲೂ ಕೈಬಿಡಲು ಪಂಜಾಬ್ ಮುಂದಾಗಿದೆ ಎನ್ನಲಾಗಿದೆ.