ಚಂಡೀಗಢ : ಓಬಿಸಿ ಮತ್ತು ಹಿಂದುಳಿದ ವರ್ಗಗಳ ಕೆನೆಪದರ ವಾರ್ಷಿಕ ಆದಾಯ ಮಿತಿಯನ್ನು ಈಗಿನ ಆರು ಲಕ್ಷ ರೂ.ಗಳಿಂದ ಎಂಟು ಲಕ್ಷ ರೂ.ಗಳಿಗೆ ಏರಿಸುವ ಪ್ರಸ್ತಾವಕ್ಕೆ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರಿಂದು ಅನುಮೋದನೆ ನೀಡಿದ್ದಾರೆ.
ಓಬಿಸಿ ಮತ್ತು ಹಿಂದುಳಿದ ವರ್ಗಗಳ ಮೀಸಲಾಯಿ ವಿಷಯದಲ್ಲಿ ಹೆಚ್ಚಿನ ಸಾಮಾಜಿಕ ನ್ಯಾಯ ಮತ್ತು ಒಳಗೊಳಿಸುವಿಕೆಯನ್ನು ಖಾತರಿಪಡಿಸಿಕೊಳ್ಳಬೇಕೆಂಬ ಕೇಂದ್ರ ಸರಕಾರದ ನಿರ್ದೇಶನಕ್ಕೆ ಅನುಗುಣವಾಗಿ ಈ ಏರಿಕೆಯನ್ನು ಮಾಡಲಾಗಿದೆ ಎಂದು ಅಧಿಕೃತ ವಕ್ತಾರ ತಿಳಿಸಿದ್ದಾರೆ.
ಓಬಿಸಿಯಲ್ಲಿನ ಕೆನೆಪದರವನ್ನು ನಿರ್ಧರಿಸುವ ವಾರ್ಷಿಕ ಒಟ್ಟು ಆದಾಯವನ್ನು ಕೇಂದ್ರ ಸರಕಾರ ಈ ವರ್ಷ ಆಗಸ್ಟ್ ನಲ್ಲಿ ಆರರಿಂದ ಎಂಟು ಲಕ್ಷ ರೂ.ಗೆ ಏರಿಸಿತ್ತು.
1993ರಲ್ಲಿ ಒಬಿಸಿ ಕೆನೆಪದರ ವಾರ್ಷಿಕ ಆದಾಯ ಮಿತಿಯು 1 ಲಕ್ಷ ರೂ.ಆಗಿತ್ತು. 2004ರಲ್ಲಿ ಇದನ್ನು 2.5 ಲಕ್ಷಕ್ಕೆ ಏರಿಸಲಾಯಿತು; 2008ರಲ್ಲಿ 4.5 ಲಕ್ಷ ಕ್ಕೆ ಏರಿಸಲಾಯಿತು 2013ರಲ್ಲಿ ಆರು ಲಕ್ಕಕ್ಕೆ ಏರಿಸಲಾಯಿತು. ಎಂದರೆ 1993ರಿಂದ ಈ ತನಕ ಒಟ್ಟು ನಾಲ್ಕು ಬಾರಿ ಓಬಿಸಿ ಮತ್ತು ಹಿಂದುಳಿದ ವರ್ಗದವರಲ್ಲಿನ ಕೆನೆಪದರ ವಾರ್ಷಿಕ ಆದಾಯ ಮಿತಿಯನ್ನು ಏರಿಸಿದಂತಾಗಿದೆ.
ಓಬಿಸಿ ವರ್ಗದಲ್ಲಿ ವಿಸ್ತೃತ ಮೀಸಲಾತಿ ಸೌಲಭ್ಯವನ್ನು ಅರ್ಹರಿಗೆ ಕಲ್ಪಿಸುವುದು ಈ ವಾರ್ಷಿಕ ಆದಾಯ ಮಿತಿ ಏರಿಕೆಯ ಉದ್ದೇಶವಾಗಿದೆ ಎಂದು ವರದಿಗಳು ಹೇಳಿವೆ.