ಅಫಜಲಪುರ: ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕುಗಳಲ್ಲಿರುವ ರೈತರ ಎಲ್ಲ ಸಾಲವನ್ನು ಪಂಜಾಬ ಮಾದರಿ ಮನ್ನಾ ಮಾಡಬೇಕೆಂದು ಆಗ್ರಹಿಸಿ ರಾಜ್ಯ ಕಬ್ಬು ಬೆಳೆಗಾರರ ರೈತ ಸಂಘದ ವತಿಯಿಂದ ಜು. 3ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ತಾಲೂಕು ಘಟಕದ ಅಧ್ಯಕ್ಷ ರಮೇಶ ಹೂಗಾರ, ಪ್ರತಿಭಟನೆ ನೇತೃತ್ವವನ್ನು ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ವಹಿಸಲಿದ್ದಾರೆ ಎಂದು ಹೇಳಿದರು. ರಾಜ್ಯ ಸರ್ಕಾರ ರೈತರ 50 ಸಾವಿರ ರೂ. ಸಾಲ ಮನ್ನಾ ಮಾಡಿದ್ದು ಸಮಾಧಾನಕರ ಆಗಿಲ್ಲ.
ಅದು ಕೇವಲ ಸಹಕಾರಿ ಬ್ಯಾಂಕುಗಳಲ್ಲಿರುವ ಸಾಲ ಮನ್ನಾಮಾಡಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ಸಾಲ ಸೇರಿ ಎಲ್ಲಾ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು. ತಾಲೂಕಿನ ರೇಣುಕಾ ಸಕ್ಕರೆ ಕಾರ್ಖಾನೆ 2013-14ನೇ ಸಾಲಿನ ಬಾಕಿ ಹಣ 100 ರೂ. ಪಾವತಿ ಮಾಡಿಲ್ಲ.
ಈ ಕುರಿತಾಗಿ ಸಂಬಂಧ ಪಟ್ಟವರು ಕ್ರಮ ಕೈಗೊಳ್ಳಬೇಕು. 2017-18ನೇ ಸಾಲಿನಲ್ಲಿ 3500 ರೂ. ಕಬ್ಬಿನ ಬೆಲೆ ನಿಗದಿಗೊಳಿಸಿ ಕಾರ್ಖಾನೆ ಆರಂಭಿಸಬೇಕು. ರಾಜ್ಯ ಸರ್ಕಾರ ಕಬ್ಬಿಗೆ ಎಸ್‌ಎಪಿ ದರ ನಿಗದಿಗೊಳಿಸಬೇಕು. ಡಾ| ಎಂ.ಎಸ್ ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.
ಅಕ್ರಮ ಮಳಿಗೆ ತೆರವಿಗೆ ಆಗ್ರಹ: ತಾಲೂಕಿನ ಕರ್ಜಗಿಯಲ್ಲಿ ಗ್ರಾಪಂ ಅಭಿವೃದ್ಧಿ ಅಧಿ ಕಾರಿಗಳು ಮತ್ತು ಅಧ್ಯಕ್ಷರು ಸೇರಿಕೊಂಡು ರೈತರ ಸಹಕಾರಿ ಸಂಘದ ನಿವೇಶನದಲ್ಲಿ ಅಕ್ರಮವಾಗಿ ಕಟ್ಟಿರುವ ವ್ಯಾಪಾರಿ ಮಳಿಗೆಗಳನ್ನು ತೆರವುಗೊಳಿಸಬೇಕು. ಆ ಜಾಗದಲ್ಲಿ ರೈತ ಭವನ ಕಟ್ಟಲು ಅನುಕೂನ ಮಾಡಿಕೊಡುವಂತೆ ಪ್ರತಿಭಟನೆ ವೇಳೆ ಆಗ್ರಹಿಸಲಾಗುತ್ತದೆ ಎಂದು ತಿಳಿಸಿದರು.
ರೈತ ಮುಖಂಡರಾದ ಮಲ್ಲು ಬಳೂರ್ಗಿ, ಭಾಗಣ್ಣ ಕೂಳನೂರ, ಪರೆಪ್ಪ ಬಳೂರ್ಗಿ, ರಾಹುಲ್ ನೂಲಾ, ಶರಣಪ್ಪ ಮಲಘಾಣ, ಸಂಜು ನೂಲಾ, ಧಾನಪ್ಪ ನೂಲಾ, ಶಂಕರ ಸೋಬಾನಿ, ಸುರೇಶ ನಂದಿಗೌಡ ಹಾಗೂ ಇತರರು ಇದ್ದರು.