ಚಂಡೀಗಢ್: ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಪಂಜಾಬ್ ನ ಜನ ನಿರ್ಧರಿಸಬೇಕು. ಇದಕ್ಕಾಗಿ ಪಂಜಾಬ್ ಮತದಾರರು ವಾಟ್ಸಪ್, ವಾಯ್ಸ್ ಸಂದೇಶದ ಮೂಲಕ ಸಿಎಂ ಹೆಸರನ್ನು ಸೂಚಿಸಬೇಕು ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಗುರುವಾರ(ಜನವರಿ 13) ಘೋಷಿಸಿದ್ದಾರೆ.
ಪಂಜಾಬ್ ನ ಆಪ್ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕು ಎಂದು ಮತದಾರರು ಜನವರಿ 17ರ ಸಂಜೆ 5ಗಂಟೆವರೆಗೆ ಎಸ್ ಎಂಎಸ್, ಅಥವಾ ವಾಟ್ಸಪ್, ಧ್ವನಿ ಸಂದೇಶದ ಮೂಲಕ ಆಯ್ಕೆ ಮಾಡಲು ಮೊಬೈಲ್ ನಂಬರ್ ಅನ್ನು ಅರವಿಂದ್ ಕೇಜ್ರಿವಾಲ್, ಆಪ್ ನ ಪಂಜಾಬ್ ರಾಜ್ಯಾಧ್ಯಕ್ಷ ಭಗವಂತ್ ಮಾನ್ , ಪಕ್ಷದ ಹಿರಿಯ ಮುಖಂಡ ರಾಘವ್ ಚಡ್ಡಾ ಅವರ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದ್ದು, ಈ ಆಯ್ಕೆಯಲ್ಲಿ ತಾನು ಸೇರ್ಪಡೆಗೊಂಡಿಲ್ಲ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
2021ರ ಜೂನ್ ನಲ್ಲಿ ಅರವಿಂದ್ ಕೇಜ್ರಿವಾಲ್ ಅವರು 2022ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸಿಖ್ ಸಮುದಾಯದ ವ್ಯಕ್ತಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಎಂದು ಘೋಷಿಸಿದ್ದರು. ಇಡೀ ಪಂಜಾಬ್ ರಾಜ್ಯವೇ ಇದರಿಂದ ಹೆಮ್ಮೆ ಪಡಲಿದೆ ಎಂದಿದ್ದರು. ತನ್ನ ಆಯ್ಕೆ ಭಗವಂತ್ ಮನ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಳಿದ್ದರು. ಆದರೆ ಇದೀಗ ಪಂಜಾಬ್ ಮತದಾರರೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಿ ಎಂದು ಸೂಚಿಸಿದ್ದಾರೆ.
ಭಗವಂತ್ ಮನ್ ನನ್ನ ಕಿರಿಯ ಸಹೋದರ, ಅವರು ಆಪ್ ನ ದೊಡ್ಡ ನಾಯಕ. ನಾನು ಭಗವಂತ್ ಮನ್ ಅವರಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಎಂದು ಹೇಳಿದೆ. ಆದರೆ ಅವರು ಅದಕ್ಕೆ ಪಂಜಾಬ್ ಮತದಾರರ ಅಭಿಪ್ರಾಯ ಮೊದಲು ಕೇಳಿ ಎಂದಿದ್ದರು. ನಾಲ್ಕು ಗೋಡೆಗಳ ನಡುವೆ ಮುಖ್ಯಮಂತ್ರಿಯ ಹೆಸರನ್ನು ನಿರ್ಧರಿಸುವ ಸಂಪ್ರದಾಯ ನಿಲ್ಲಬೇಕು ಎಂದು ಭಗವಂತ್ ಮನ್ ಹೇಳಿರುವುದಾಗಿ ಕೇಜ್ರಿವಾಲ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದರು.
ಪಂಜಾಬ್ ಮತದಾರರು 7074870748 ಈ ನಂಬರ್ ಗೆ ಸಂದೇಶ, ವಾಟ್ಸಪ್ ಸಂದೇಶ ಅಥವಾ ಧ್ವನಿ ಸಂದೇಶದ ಮೂಲಕ ಸಿಎಂ ಅಭ್ಯರ್ಥಿಯ ಹೆಸರನ್ನು ಸೂಚಿಸಬೇಕು. ಜನವರಿ 17ರ ಸಂಜೆ 5ಗಂಟೆವರೆಗೆ ಸಂದೇಶ ಕಳುಹಿಸಲು ಅವಕಾಶ ಇದೆ. ನಂತರ ಜನರ ಯಾರ ಪರವಾಗಿ ಹೆಚ್ಚು ಒಲವು ವ್ಯಕ್ತಪಡಿಸಿದ್ದಾರೆ ಎಂಬುದನ್ನು ಪರಿಶೀಲಿಸಿ ಸಿಎಂ ಅಭ್ಯರ್ಥಿ ಹೆಸರನ್ನು ಘೋಷಿಸುವುದಾಗಿ ಕೇಜ್ರಿವಾಲ್ ಹೇಳಿದರು.