Advertisement
ಸೂಪರ್ ಸ್ಟಾರ್ ಮಗ, ನಾನೂ ಸೂಪರ್ ಸ್ಟಾರ್ ಎನ್ನುವಂತಹ ಯಾವುದೇ ಭಾವನೆ ಪುನೀತ್ ಅವರಿಗಿರಲಿಲ್ಲ. ನನಗೆ ಅಪ್ಪುಗಿಂತ ಮೊದಲು ಅಣ್ಣಾವ್ರು, ಪಾರ್ವತಮ್ಮನವರು ಮತ್ತು ವರದಪ್ಪ ಅವರ ಜೊತೆ ಒಳ್ಳೆಯ ಒಡೆನಾಟವಿತ್ತು. ನಂತರದ ದಿನಗಳಲ್ಲಿ ಶಿವಣ್ಣನ ಪರಿಚಯ ಆಗಿ ಸ್ನೇಹ ಬೆಳೆಯಿತು. ಆಗ ಪುನೀತ್ ಪರಿಚಯವಾಗಿ ತುಂಬಾನೇ ಹತ್ತಿರವಾದರು. ಪುನೀತ್ ಸಿನಿಮಾಕ್ಕೆ ನಾನು ಹಾಡು ಬರೆಯಲೇ ಬೇಕೆನ್ನುವುದು ಅಪ್ಪಾಜಿ ಮತ್ತು ಪಾರ್ವತಮ್ಮನವರ ಒತ್ತಾಸೆಯಾಗಿತ್ತು. ಹಾಗಾಗಿ ಅಪ್ಪು ಅವರ ಮೊದಲ 12 ಸಿನಿಮಾಗಳಿಗೆ ನಾನೇ ಹಾಡು ಬರೆದೆ. ಒಟ್ಟು ಅವರ 16 ಸಿನಿಮಾಗಳಿಗೆ ಹಾಡು ಬರೆದುಕೊಟ್ಟಿದ್ದೇನೆ.ದೊಡ್ಡವರು ನೋಡ್ಕೊತಾರೆ!
Related Articles
ಅಪ್ಪುಗೆ ಜ್ಞಾಪಕ ಶಕ್ತಿ ಅಧಿಕವಿತ್ತು. ಸುಮಾರು 10 ವರ್ಷಗಳ ಹಿಂದೆ ನಾನೊಂದು ಆಲ್ಬಂ ಸಾಂಗ್ ಮಾಡೋದಕ್ಕೆ ಹೊರಟಿದ್ದೆ. ಅಪ್ಪು ಕಮರ್ಷಿಯಲ್ ಹಿಟ್ ಕೊಡುತ್ತಿದ್ದ ಸಮಯವದು. ಆಗ ಅವರಿಂದಲೇ ಒಂದು ಭಕ್ತಿ ಗೀತೆ ಹಾಡಿಸಬೇಕು ಎಂದುಕೊಂಡಿದ್ದೆ. ಒಮ್ಮೆ ಎಲ್ಲೋ ಹೊರಗೆ ಸಿಕ್ಕಾಗ ಅವರಿಗೆ ಆ ವಿಚಾರ ಹೇಳಿದ್ದೆ. ಹಾ ಮಾಡೋಣ ಎಂದಿದ್ದರು. 2 ವರ್ಷಗಳಾದ ಮೇಲೆ ಆ ಹಾಡು ರಿಲೀಸ್ ಆಯ್ತು. ಅದರ ಪ್ರಸ್ ಮೀಟ್‌ಗೆ ಬಂದಿದ್ದ ಅಪ್ಪು, 2 ವರ್ಷದ ಹಿಂದೆ ಅಲ್ಲೆಲ್ಲೋ ಹೊರಗೆ ಸಿಕ್ಕಾಗ ಹೇಳಿದ್ದನ್ನು ನೆನಪಿಸಿಕೊಂಡು ಹೇಳಿದರು. ಸಣ್ಣ ಪುಟ್ಟ ವಿಚಾರಗಳನ್ನೂ ಅಷ್ಟು ಚೆನ್ನಾಗಿ ನೆನಪಿಟ್ಟುಕೊಳ್ತಿದ್ರು.
Advertisement
ತುಂಬಾ ತಲೆ ಕೆಡಿಸ್ಕೋಬೇಡಿ…ಅಪ್ಪು ಬರೀ ನಟನೆ ಮೂಲಕ ಜನರಿಗೆ ಇಷ್ಟವಾದವರಲ್ಲ. ಅವರು ಮಾಡಿದ ಕೆಲಸದಿಂದಲೂ ಜನರಿಗೆ ಹತ್ತಿರವಾದವರು. ಅನಾಥಾಶ್ರಮ, ಉಚಿತ ಶಿಕ್ಷಣ ಹೀಗೆ ಅನೇಕ ಕೆಲಸ ಮಾಡಿದ್ದಾರೆ. ಯಾರಿಗೂ ಒಂದೇ ಒಂದು ಸಣ್ಣ ನೋವನ್ನೂ ಮಾಡಿದವರಲ್ಲ. ತಮ್ಮಿಂದ ಏನಾದರೂ ತಪ್ಪಾಯಿತು ಎನಿಸಿದರೆ ತಕ್ಷಣ ಸ್ವಾರಿ ಕೇಳುತ್ತಿದ್ದರು. ಅದೇನೇ ಆದರೂ “ತುಂಬಾ ತಲೆ ಕೆಡಿಸ್ಕೋಬೇಡಿ’ ಅಂತ ಹೇಳ್ತಿದ್ರು. ಆ ನಡವಳಿಕೆಯನ್ನು ನಾನೂ ಅವರಿಂದ ಕಲಿಯುವ ಪ್ರಯತ್ನ ಮಾಡಿ ಸೋತಿದ್ದೀನಿ. ಪುನೀತ್ ಅವರನ್ನೂ ಎಂದಿಗೂ ಮರೆಯೋದಿಲ್ಲ. ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ… – ಕೆ. ಕಲ್ಯಾಣ್, ಚಿತ್ರ ಸಾಹಿತಿ