Advertisement

‘ಮತ್ತೆ ಬರುತ್ತೇನೆಂದ ಅಪ್ಪು ಬರಲೇ ಇಲ್ಲ..’ಕಣ್ಣೀರಾದ ಕಲಬುರಗಿ ಜನತೆ!

03:31 PM Oct 29, 2021 | Team Udayavani |

ಕಲಬುರಗಿ: ಮುಂದಿನ ಹೊಸ ಸಿನೇಮಾದ ಚಿತ್ರೀಕರಣ ಕಲಬುರಗಿಯಲ್ಲಿ ಮಾಡುವುದಾಗಿ ಈ ಹಿಂದೆ ನಟ ಪುನೀತ್ ರಾಜಕುಮಾರ ಹೇಳಿದ್ದರು. ಆದರೆ ಇದೀಗ ಅಪ್ಪು ಮರಳಿ ಬಾರದ ಊರಿಗೆ ತೆರಳಿದ್ದಾರೆ!

Advertisement

ಕಳೆದ ಮಾರ್ಚ್ 21ರಂದು ಯುವರತ್ನ ಸಿನಿಮಾದ ಪ್ರಚಾರಕ್ಕಾಗಿ ಆಗಮಿಸಿದ್ದ ವೇಳೆಯಲ್ಲಿ ಮುಂದಿನ ಚಿತ್ರದ ಚಿತ್ರೀಕರಣ ಬಿಸಿಲೂರು ಕಲಬುರಗಿಯಲ್ಲಿ ನಡೆಸುವುದಾಗಿ ಹೇಳಿದ್ದರು. ಕಲಬುರಗಿ ಜನ ಇಂದಲ್ಲ ನಾಳೆ ಕಲಬುರಗಿ ಗೆ ಬಂದು ಚಿತ್ರೀಕರಣದಲ್ಲಿ ಪಾಲ್ಗೊಳ್ಳುವರು ಎಂದು ಜನ ನಿರೀಕ್ಷೆ ಹೊಂದಿದ್ದರು. ಆದರೆ ವಿಧಿಯಾಟ ಅವಕಾಶ ನೀಡದಂತೆ ಮಾಡಿದೆ.

ಇದನ್ನೂ ಓದಿ:ಜೊತೆಗಿರದ ಜೀವ ಎಂದಿಗೂ ಜೀವಂತ…! ‘ಕೋಟ್ಯಾಧಿಪತಿ’ಯನ್ನು ಕಳೆದುಕೊಂಡ ಕರುನಾಡು

ಶುಕ್ರವಾರ ನಿಧನರಾದ ಕನ್ನಡ ನಾಡಿನ ಪ್ರೀತಿಯ ಅಪ್ಪು ಪುನೀತ್ ರಾಜ್‍ಕುಮಾರ್ ಕಲಬುರಗಿಯೊಂದಿಗೆ ಅನ್ಯೋನ್ಯತೆ ಹಾಗೂ ಪ್ರೀತಿಯನ್ನು ಹೊಂದಿದ್ದರು.‌ ಈಚೆಗಿನ ಸಂದರ್ಶನವೊಂದರಲ್ಲಿ ಕಲಬುರಗಿ ಜನ ಯುವರತ್ನ ಚಿತ್ರದ ಪ್ರಚಾರಕ್ಕೆ ಬಂದ ಸಂದರ್ಭದಲ್ಲಿ ತೋರಿದ 12 ಜೆಸಿಬಿಗಳ ಮೂಲಕ ಪುಷ್ಪಾರ್ಚನೆ ಮಾಡಿರುವುದು ಹಾಗೂ ಊಟದ ಕುರಿತಾಗಿ ಪ್ರಸ್ತಾಪಿಸಿರುವುದೇ ಇದಕ್ಕೆ ಸಾಕ್ಷಿ.

Advertisement

ಪುನೀತ್ ರಾಜಕುಮಾರ ಕಳೆದುಕೊಂಡಿರುವುದು ಕಲಬುರಗಿಯಲ್ಲೂ ದು;ಖದ ಛಾಯೆ ಎಲ್ಲೆಡೆ ಆಚರಿಸಿದೆ. ಪುನೀತ್ ರಾಜಕುಮಾರ ಅವರ ಕಲಬುರಗಿ ಯಲ್ಲಿನ ಚಿತ್ರೀಕರಣ ನೋಡಬೇಕೆಂದು ಲಕ್ಷಾಂತರ ಕಣ್ಣುಗಳು ತದೇಕ ಚಿತ್ತದಿಂದ ಕಾಯುತ್ತಿದ್ದವು. ಈಗ ಈ ಕಣ್ಣುಗಳಲ್ಲಿ ಕಣ್ಣೀರು ಸುರಿಯಲಾರಂಭಿಸಿರುವುದು ಒಂದು ವಿಧಿಯೇ ಸರಿ.

ಮಾರ್ಚ್ 21ರಂದು ಇಲ್ಲಿನ ಐತಿಹಾಸಿಕ ಶರಣಬಸವೇಶ್ವರರ ದರ್ಶನವನ್ನು ತಂಡದೊಂದಿಗೆ ಪಡೆದಿದ್ದ ಪುನೀತ್ ರಾಜಕುಮಾರ ಮುಂದಿನ ಸಲ ಕಲಬುರಗಿಗೆ ಬಂದಾಗ ದೇವಲ ಗಾಣಗಾಪುರ ದತ್ತಾತ್ರೇಯ ದರ್ಶನ ಸಹ ಪಡೆಯುವುದಾಗಿ ಹೇಳಿದ್ದರು.

ಇದನ್ನೂ ಓದಿ:ಮಗುವಾಗಿ ಚಿತ್ರರಂಗಕ್ಕೆ ಕಾಲಿಟ್ಟ ”ಅಪ್ಪು” ಅರಸಾಗಿ ಮೆರೆದಿದ್ದರು!

ಅಭಿಮಾನಿಗಳು 12 ಜೆಸಿಬಿಗಳ ಮೂಲಕ ಪುಷ್ಪಾರ್ಚನೆ ಮಾಡಿದ್ದನ್ನು ಕಂಡು ಪುಳಕಿತರಾಗಿದ್ದ ಪುನೀತ್ ರಾಜ್‍ಕುಮಾರ್ ಕಲಬುರಗಿ ಜಿಲ್ಲೆ ಹಾಗೂ ಅಭಿಮಾನಿಗಳ ಮೇಲೆ ಅಪಾರ ಪ್ರೀತಿ ಹೊಂದಿದ್ದೇನೆ ಎಂದು ಹೇಳಿದ್ದರು. ಇದಲ್ಲದೆ ಈಚೆಗೆ ಸಂದರ್ಶನವೊಂದರಲ್ಲಿ ಕಲಬುರಗಿ ಜನರ ಪ್ರೀತಿ ಹಾಗೂ ಊಟದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು.

ಗುತ್ತೇದಾರ ಮನೆಯಲ್ಲಿ ಊಟ ಸವಿದಿದ್ದ ಅಪ್ಪು: ಯುವರತ್ನ ಚಿತ್ರದ ಪ್ರಚಾರ ಮುಗಿದ ನಂತರ ನಟ ಅಪ್ಪು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ನಿತೀನ ಗುತ್ತೇದಾರ ಮನೆಯಲ್ಲಿ ಸೇಂಗಾದ ಹೊಳಿಗೆ, ರೊಟ್ಟಿ ಹಾಗೂ ಪುಂಡಿಪಲ್ಯೆ ಸವಿದಿದ್ದರು. ಊಟದ ಬಗ್ಗೆ ಅವಾಗಲೇ ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಂತರ ಪುನೀತ್ ರಾಜಕುಮಾರ ಬೆಳಗಾವಿಯತ್ತ ಪ್ರಯಾಣ ಬೆಳೆಸಿದ್ದರು.

ಈಗ ಅಪ್ಪು ಬಾರದ ದಾರಿಗೆ ಪ್ರಯಾಣ ಬೆಳೆಸಿದ್ದಾರೆ. ಇದು ಅಭಿಮಾನಿಗಳಿಗೆ ಅರಗಿಸಿಕೊಳ್ಳಲಿಕ್ಕೆ ಸಾಧ್ಯವಿಲ್ಲ ಎನ್ನುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next