ಕರಾಲಿ ಚಿತ್ರ ನಿರ್ದೇಶಕರ ವಿಭಿನ್ನ ಆಸೆ
ಮಂಗಳಮುಖೀಯರ ಆಸೆ, ಕನಸುಗಳನ್ನೆ ಮೂಲವಾಗಿಟ್ಟುಕೊಂಡು ಕಳೆದ ವಾರ ತೆರೆಕಂಡ “ಕರಾಲಿ’ ಚಿತ್ರತಂಡ ಈಗ ಖುಷಿಯಾಗಿದೆ. ಅದಕ್ಕೆ ಕಾರಣ ಚಿತ್ರಕ್ಕೆ ಎಲ್ಲೆಡೆಯಿಂದ ವ್ಯಕ್ತವಾಗುತ್ತಿರುವ ಮೆಚ್ಚುಗೆ. ಸಿನಿಮಾ ನೋಡಿದವರು ಹೊಸ ಬಗೆಯ ಚಿತ್ರ ಎಂದು ಖುಷಿಯಾಗುತ್ತಿದ್ದಾರಂತೆ. ಹಾಗಂತ ಹೇಳಿಕೊಂಡು ಖುಷಿಯಾದರು ಚಿತ್ರದ ನಿರ್ದೇಶಕ ದಕ್ಷಿಣಾ ಮೂರ್ತಿ. ಅವರಿಗೆ ಸಿನಿಮಾಕ್ಕೆ ಸಿಗುತ್ತಿರುವ ಮೆಚ್ಚುಗೆ ಬಗ್ಗೆ ಖುಷಿ ಇದೆ. ಆದರೆ, ಕಲೆಕ್ಷನ್ ವಿಷಯದಲ್ಲಿ ಸಿನಿಮಾ ನಿರೀಕ್ಷಿತ ಮಟ್ಟ ತಲುಪಿಲ್ಲ ಎಂಬ ಬೇಸರವೂ ಇದೆ.
“ಸಿನಿಮಾ ನೋಡಿದವರು ಖುಷಿಯಾಗುತ್ತಿದ್ದಾರೆ. ಮಂಗಳಮುಖೀಯರ ಆಸೆ, ಆಕಾಂಕ್ಷೆ, ಭಾವನೆಗಳನ್ನು ಮನಮುಟ್ಟುವಂತೆ ತೋರಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಇತ್ತೀಚೆಗೆ ಸಿನಿಮಾ ನೋಡಿದ ಮಂಗಳಮುಖೀಯರು ಭಾವುಕರಾದರು. ನಮ್ಮ ಭಾವನೆಗಳನ್ನು ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದೀರಿ ಎಂದರು’ ಎನ್ನುವುದು ನಿರ್ದೇಶಕ ದಕ್ಷಿಣಾ ಮೂರ್ತಿ ಮಾತು.
ಸಿನಿಮಾ ಬಿಡುಗಡೆಗೆ ಮುನ್ನ ಕಾರಣಾಂತರಗಳಿಂದ ಪ್ರಮೋಶನ್ ಮಾಡಲು ಸಾಧ್ಯವಾಗಲಿಲ್ಲ. ಈಗ ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಆರಂಭದಲ್ಲೇ ನಾವು ಪ್ರಚಾರ ಮಾಡಬೇಕಿತ್ತು. ತಪ್ಪು ನಮ್ಮದೇ ಎನ್ನುವ ಮೂಲಕ ಸಿನಿಮಾವೊಂದಕ್ಕೆ ಪ್ರಚಾರ ಮುಖ್ಯ ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ಅಂದಹಾಗೆ, ದಕ್ಷಿಣಾ ಮೂರ್ತಿಯವರಿಗೊಂದು ಆಸೆ ಇದೆ.
ಅದೇನೆಂದರೆ “ಕರಾಲಿ’ಯನ್ನು ಪುನೀತ್ ರಾಜಕುಮಾರ್ ಅವರು ನೋಡಬೇಕೆಂದು. “ನಾನು ರಾಜ್‌ಕುಮಾರ್ ಚಿತ್ರಗಳನ್ನು ನೋಡಿ ಬೆಳೆದವ. ಅವರ “ಕಸ್ತೂರಿ ನಿವಾಸ’ ಚಿತ್ರದರಲ್ಲಿರುವಂತಹ ಗೊಂಬೆಯನ್ನೇ ನಮ್ಮ ಸಿನಿಮಾದಲ್ಲೂ ಮಾಡಿಸಿದ್ದೇನೆ. ಪುನೀತ್ ಅವರ “ರಾಜ್‌ಕುಮಾರ’ ಚಿತ್ರದಲ್ಲೂ ಗೊಂಬೆ ಇದೆ. ನಮ್ಮದೊಂದು ಆಸೆ ಏನೆಂದರೆ ನಮ್ಮ ಸಿನಿಮಾವನ್ನು ಪುನೀತ್ ರಾಜಕುಮಾರ್ ಅವರು ಬಂದು ಅರ್ಧ ಗಂಟೆಯಾದರೂ ನೋಡಬೇಕು. ನಾವು ಅವರಲ್ಲಿ ಅಣ್ಣಾವ್ರನ್ನು ಕಾಣುತ್ತೇವೆ. ಅವರು ಬಂದರೆ ನಮಗೆ ತುಂಬಾ ಖುಷಿಯಾಗುತ್ತದೆ’ ಎಂದು ಮನವಿ ಮಾಡುತ್ತಾರೆ ದಕ್ಷಿಣಾ ಮೂರ್ತಿ.
ಚಿತ್ರದಲ್ಲಿ ಮಂಗಳಮುಖೀಯಾಗಿ ನಟಿಸಿದ ಶಾಲಿನಿ ಭಟ್ ಅವರಿಗೆ ಈ ತರಹದ ಪಾತ್ರ ಮಾಡಿದ ಬಗ್ಗೆ ಖುಷಿ ಇದೆಯಂತೆ. “ನನಗೆ ನಾಯಕಿಯಾಗಬೇಕು, ಮರ ಸುತ್ತಬೇಕು ಎಂಬ ಆಸೆ ಇಲ್ಲ. ಏನಾದರೂ ವಿಭಿನ್ನವಾಗಿ ಮಾಡಬೇಕೆಂಬ ಆಸೆ ಇತ್ತು. ಅದಕ್ಕೆ ಸರಿಯಾಗಿ ನನಗೆ ಈ ಪಾತ್ರ ಸಿಕ್ಕಿತು. ಇತ್ತೀಚೆಗೆ ಮಂಗಳಮುಖೀಯರ ಮಧ್ಯೆ ಕುಳಿತು ಸಿನಿಮಾ ನೋಡಿದೆ. ಅವರು ಕೂಡಾ ಖುಷಿಯಾದರು.
ಆಗ ಸಮಾಧಾನವಾಯಿತು’ ಎನ್ನುವುದು ಶಾಲಿನಿ ಮಾತು. ಚಿತ್ರದಲ್ಲಿ ನಟಿಸಿದ ವಿಶ್ವಾಸ್, ಸಂಗೀತ ನಿರ್ದೇಶಕ ಆರ್ಯಮಾನ ಕೂಡಾ ತಮ್ಮ ಅನಿಸಿಕೆ ಹಂಚಿಕೊಂಡರು.