ಪುಣೆ: ರಾಷ್ಟ್ರೀಯ ದೃಷ್ಟಿಹೀನ ಸಂಘ ಮಹಾರಾಷ್ಟ್ರ ಇದರ ಪುಣೆ ವಿಭಾಗದ ಶಾಖೆಯ ಆಶ್ರಯದಲ್ಲಿ, ಅಖೀಲ ಭಾರತೀಯ ಅಂಧರ ಸಂಘದ ಸಹಯೋಗದೊಂದಿಗೆ, ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಅಂಧ ಮಹಿಳೆಯರ ಸಮ್ಮೇಳನವನ್ನು ಶಂಕರ್‌ಶೇಟ್ ರೋಡ್‌ನ ಓಸ್ವಾಲ್ ಬಂಧು ಕಾರ್ಯಾಲಯದಲ್ಲಿ ಇತ್ತೀಚೆಗೆ ಎರಡು ದಿನಗಳ ಕಾಲ ಆಯೋಜಿಸಲಾಗಿತ್ತು.
ಸಮ್ಮೇಳನದಲ್ಲಿ ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಿಂದ ಅಂಧರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಪುಣೆಯ ಹೊಟೇಲ್ ಉದ್ಯಮಿ ಪುರಂದರ ಪೂಜಾರಿ ಅವರ ಪಂಚಮಿ ಚಾರಿಟೆಬಲ… ಟ್ರಸ್ಟ್ ವತಿಯಿಂದ ಸುಮಾರು 150ಕ್ಕೂ ಮಿಕ್ಕಿದ ಮಹಿಳೆಯರಿಗೆ ಸೀರೆಗಳನ್ನು ಹಂಚಲಾಯಿತು.
ಪುಣೆಯ ಉದ್ಯಮಿ ಪುರಂದರ ಪೂಜಾರಿ ಅವರ ನೇತೃತ್ವದಲ್ಲಿ ಸುಮಾರು 15 ವರ್ಷಗಳ ಹಿಂದೆ ಸ್ಥಾಪನೆಗೊಂಡ ಪಂಚಮಿ ಚಾರಿಟೆಬಲ… ಟ್ರಸ್ಟ್ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಹಾಗೂ ಪುಣೆಯಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸಮಾಜ ಸೇವಾ ಕೈಂಕರ್ಯ ದಲ್ಲಿ ತೊಡಗಿದೆ. ಸುಮಾರು 65 ಮಿಕ್ಕಿದ ಅಂಧರಿಗೆ ಶಸ್ತ್ರ ಚಿಕಿತ್ಸೆಯನ್ನು ಉಚಿತವಾಗಿ ಈ ಟ್ರಸ್ಟ್ ಮುಖಾಂತರ ಮಾಡಲಾಗಿದೆ. ಅಲ್ಲದೆ ಕಣ್ಣಿನ ಸಮಸ್ಯೆಯುಳ್ಳರಿಗೆ ಉಚಿತ ವೈದ್ಯಕೀಯ ಚಿಕಿತ್ಸೆಗೆ ಸಹಾಯ, ಕಾರ್ಕಳ ತಾಲೂಕಿನಾದ್ಯಂತ 250ಕ್ಕೂ ಮಿಕ್ಕಿದ ಮಕ್ಕಳನ್ನು ಈ ಟ್ರಸ್ಟ್ ಮುಖಾಂತರ ದತ್ತು ಪಡೆದು ಅವರಿಗೆ ಉಚಿತ ಶಿಕ್ಷಣದ ವ್ಯವಸ್ಥೆಯನ್ನು ಮಾಡಲಾಗಿದೆ. ಕಾರ್ಕಳ ತಾಲೂಕಿನ ಒಂದು ಶಾಲೆಯನ್ನು ದತ್ತು ಪಡೆದು ಆ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ 7ನೇ ತರಗತಿವರೆಗೆ ಉಚಿತ ಶಿಕ್ಷಣದ ವ್ಯವಸ್ಥೆಯನ್ನು ಈ ಟ್ರಸ್ಟ್ ಮುಖಾಂತರ ಮಾಡಲಾಗಿದೆ. ಹಲವಾರು ಶಿಕ್ಷಣ ಸಂಸ್ಥೆಗಳಿಗೆ ಸಹಾಯವನ್ನು ಮಾಡಲಾಗುತ್ತಿದೆ.