ಪುಣೆ:ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸಿನಿಮಾ ಮಂದಿರ, ಹೋಟೆಲ್ ಹಾಗೂ ಮಾಲ್ ಗಳನ್ನು ಮುಂದಿನ 7 ದಿನಗಳ ಕಾಲ ಬಂದ್ ಮಾಡುವಂತೆ ಪುಣೆ ಜಿಲ್ಲಾಡಳಿತ ಘೋಷಿಸಿದ್ದು, ಶನಿವಾರ(ಏಪ್ರಿಲ್ 03)ದಿಂದ 12 ಗಂಟೆಗಳ ಕಾಲ ರಾತ್ರಿ ಕರ್ಫ್ಯೂ ಜಾರಿಗೊಳಿಸುವುದಾಗಿ ತಿಳಿಸಿದೆ.
ಇದನ್ನೂ ಓದಿ:ಹುಡುಗಿ ತಂದೆಗೆ 22,000 ರೂ. ಪರಿಹಾರ ನೀಡಿದ ಮ್ಯಾಟ್ರಿಮೋನಿಯಲ್ ಸೈಟ್ !
ಶುಕ್ರವಾರ(ಏ.02) ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಅಧ್ಯಕ್ಷತೆಯಲ್ಲಿ ಪುಣೆ ಅಧಿಕಾರಿಗಳು ನಡೆಸಿದ ಸಭೆಯಲ್ಲಿ, ನಗರದಲ್ಲಿ ಪೂರ್ಣ ಪ್ರಮಾಣದ ಲಾಕ್ ಡೌನ್ ಜಾರಿಗೊಳಿಸದಿರುವಂತೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.
ಕೋವಿಡ್ ಸೋಂಕು ತಡೆಗಟ್ಟಲು ಇನ್ನೂ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಬೇಕಾದ ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ಏಳು ದಿನಗಳ ಕಾಲ ಎಲ್ಲಾ ರೆಸ್ಟೋರೆಂಟ್ ಗಳು, ಬಾರ್ ಹಾಗೂ ಹೋಟೆಲ್ ಗಳು ಬಂದ್ ಮಾಡಲು ಸೂಚಿಸಿದೆ. ಆದರೆ ಹೋಮ್ ಡೆಲಿವರಿಗೆ ಯಾವುದೇ ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಿನಿಮಾ ಮಂದಿರ, ಮಾಲ್ ಗಳು, ಧಾರ್ಮಿಕ ಸ್ಥಳ, ಪುಣೆ ಸರ್ಕಾರಿ ಬಸ್ ಸೇವೆ ಒಂದು ವಾರಗಳ ಕಾಲ ಬಂದ್ ಆಗಿರಲಿದ್ದು, ವಾರದ ಸಂತೆ ಕೂಡಾ ಬಂದ್ ಮಾಡುವಂತೆ ಸೂಚನೆ ನೀಡಿರುವುದಾಗಿ ಪುಣೆ ಪ್ರಾಂತೀಯ ಕಮಿಷನರ್ ಸೌರಭ್ ರಾವ್ ತಿಳಿಸಿದ್ದಾರೆ.
ಮದುವೆ ಸಮಾರಂಭದಲ್ಲಿ ಕೇವಲ 50 ಮಂದಿ ಹಾಗೂ ಅಂತ್ಯ ಸಂಸ್ಕಾರದಲ್ಲಿ 20 ಮಂದಿ ಮಾತ್ರ ಭಾಗವಹಿಸಬಹುದು, ಇನ್ನುಳಿದಂತೆ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.