ಪುಣೆ: ಕನ್ನಡ ಸಂಘ ಪುಣೆಯ ನವ ಶೈಕ್ಷಣಿಕ ವರ್ಷದಲ್ಲಿ ತನ್ನ ಕಾವೇರಿ ವಿದ್ಯಾ ಸಂಸ್ಥೆಯಲ್ಲಿ ನೂತನವಾಗಿ ನೇಮಕಗೊಂಡ ಸುಮಾರು 42 ಮಂದಿ ಶಿಕ್ಷಕಿಯರ ವಿಶೇಷ ಸ್ವಾಗತ ಕಾರ್ಯಕ್ರಮವು ಸಂಘದ ಆಡಳಿತ ಮಂಡಳಿಯ ವತಿಯಿಂದ ಸಂಸ್ಥೆಯ ಸಭಾಗೃಹದಲ್ಲಿ ನಡೆಯಿತು.
ಕನ್ನಡ ಸಂಘ ಪುಣೆ ಕಳೆದ 5 ದಶಕಗಳಿಂದ ಮಹಾರಾಷ್ಟ್ರದ ಪ್ರಮುಖ ವಿದ್ಯಾ
ಕೇಂದ್ರವಾಗಿರುವ ಪುಣೆಯಲ್ಲಿ ಯಶಸ್ವಿಯಾಗಿ ನಡೆಸುತ್ತಿರುವ ಮೂಲ ಶಿಕ್ಷಣದಿಂದ ಉಚ್ಚ ಶಿಕ್ಷಣದ ವರೆಗಿನ ಶಿಕ್ಷಣ ಸಂಸ್ಥೆಗಳಲ್ಲಿ ಈ ವರ್ಷ ಪ್ರಥಮವಾಗಿ ಸುಮಾರು 42 ಶಿಕ್ಷಕಿಯರನ್ನು ಹೊಸದಾಗಿ ನೇಮಿಸಲಾಗಿದೆ. ಕಾರ್ಯಕ್ರಮದಲ್ಲಿ ವಿವಿಧ ಸಂಸ್ಥೆ, ಕ್ಷೇತ್ರಗಳಿಂದ ಆಯ್ಕೆಗೊಂಡ ಶಿಕ್ಷಕಿಯರು ತಮ್ಮ ಪರಿಚಯ ಮಾಡಿಕೊಟ್ಟು ತಾವು ಈ ಸಂಸ್ಥೆಗೆ ಸೇರಲು ಕಾರಣ ತಿಳಿಸಿದರು.
ಸಂಘದ ಅಧ್ಯಕ್ಷ ಕುಶಲ್ ಹೆಗ್ಡೆ ಅವರು ಹೊಸ ಶಿಕ್ಷಕಿಯರನ್ನು ಸ್ವಾಗತಿಸಿ, ಸಂಸ್ಥೆಯ ಆಡಳಿತದಲ್ಲಿನ ಪಾರದರ್ಶಕತೆ ಮತ್ತು ನಂಬಿಕೆ ಪರಸ್ಪರ ಸಹ ಯೋಗದಿಂದಾಗಿ ಸಂಸ್ಥೆ ಇಂದು ಪುಣೆಯಲ್ಲಿ ತನ್ನದೇ ಆದ ವಿಶೇಷ ಸ್ಥಾನ ಪಡೆದಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಗಿದೆ. 400ಕ್ಕೂ ಮಿಕ್ಕಿ ಶಿಕ್ಷಕ ವರ್ಗವಿದ್ದು, 42 ಮಂದಿ ಹೊಸತಾಗಿ ಒಮ್ಮೆಲೇ ಸೇರಿದ್ದು ಮಾತ್ರವಲ್ಲದೆ ಸಂಸ್ಥೆಯಿಂದ ನಿರ್ಗಮಿಸುವವರು ನಿವೃತ್ತಿಯ ವೇಳೆಯಲ್ಲಿ ಮಾತ್ರವೆಂಬುದು ಹೆಮ್ಮೆಯ ವಿಷಯವಾಗಿದೆ ಎಂದು ಅಭಿನಂದಿಸಿದರು.
ಕಾರ್ಯದರ್ಶಿ ಮಾಲತಿ ಕಲ್ಮಾಡಿ ಎಲ್ಲರನ್ನು ಸ್ವಾಗತಿಸಿ ಸಂಸ್ಥೆಯ ಹೊಸ ಯೋಜನೆಗಳ ಬಗ್ಗೆ ವಿವರಿಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಡಾ| ನಾರಾಯಣ ಹೆಗ್ಡೆ, ಉಪಾಧ್ಯಕ್ಷೆ ಇಂದಿರಾ ಸಾಲ್ಯಾನ್, ವಿಶ್ವಸ್ತರಾದ ರಾಧಿಕಾ ಶರ್ಮ, ಪಾಯಲ ಭಾರತಿಯ, ಲಯನ್ ಚಂದ್ರಹಾಸ್ ಶೆಟ್ಟಿ, ಜನಸಂಪರ್ಕಾಧಿಕಾರಿ ರಾಮದಾಸ್ ಆಚಾರ್ಯ, ಆಡಳಿತಾಧಿಕಾರಿ ಪ್ರಸಾಣ ಅಕೊಲ್ಕರ್ ಮತ್ತು ಸಮನ್ವಯಾಧಿಕಾರಿ ಕಾಮಿನಿ ಸಕ್ಸೆನಾ ಉಪಸ್ಥಿತರಿದ್ದರು. ಕೊನೆಯಲ್ಲಿ ಹೊಸ ಶಿಕ್ಷಕಿಯರು ಮೇಣದ ದೀಪ ಹಚ್ಚಿ ತಮ್ಮ ಆಗಮನವನ್ನು ಪ್ರಕಟಿಸಿದರು. ನೂತನ ಶಿಕ್ಷಕಿಯರನ್ನು ಪುಷ್ಪಗುತ್ಛವನ್ನಿತ್ತು ಸ್ವಾಗತಿಸಲಾಯಿತು. ಸಮಾರಂಭದಲ್ಲಿ ಸಮೂಹ ಸಂಸ್ಥೆಗಳ ಮುಖ್ಯಸ್ಥರು ಹಾಜರಿದ್ದರು.