Advertisement

Pune-Bangalore ಹೊಸ ಹೆದ್ದಾರಿಗೆ ಚಾಲನೆ ನೀಡಲು ಸಿದ್ಧತೆ

11:09 PM May 25, 2024 | Team Udayavani |

ಹುಬ್ಬಳ್ಳಿ: ಹೆದ್ದಾರಿ ಅಭಿವೃದ್ಧಿಗೆ ರಹದಾರಿ ನಿರ್ಮಿಸಿರುವ ಕೇಂದ್ರ ಸರಕಾರವು ಕರ್ನಾಟಕದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಲ್ಯಾಣ, ಉತ್ತರ ಕರ್ನಾಟಕ ಮಾರ್ಗವಾಗಿ ಬೆಂಗಳೂರಿನಿಂದ ಪುಣೆಗೆ ಸಂಪರ್ಕ ಕಲ್ಪಿಸುವ ಯೋಜನೆಗೆ ಹೊಸ ಸರಕಾರ ರಚನೆಯಾಗುತ್ತಿದ್ದಂತೆ ಚಾಲನೆ ನೀಡಲು ಸಿದ್ಧತೆ ನಡೆಸಿದೆ. ರಾಷ್ಟ್ರೀಯ ಹೆದ್ದಾರಿ 4ಕ್ಕೆ ಪರ್ಯಾಯವಾಗಿರುವ ಈ ಹೆದ್ದಾರಿಯಿಂದ ಉಭಯ ನಗರಗಳ ಅಂತರ 95 ಕಿ.ಮೀ. ತಗ್ಗಲಿದ್ದು, ಕೇವಲ 7 ಗಂಟೆಗಳಲ್ಲಿ 700 ಕಿ.ಮೀ. ಕ್ರಮಿಸಬಹುದಾಗಿದೆ.

Advertisement

12 ಪಥ ರಸ್ತೆ
ಭಾರತ್‌ ಮಾಲಾ-2 ಯೋಜನೆಯಡಿ ಬೆಂಗಳೂರು-ಪುಣೆ ಗ್ರೀನ್‌ಫೀಲ್ಡ್‌ ಎಕ್ಸ್‌ಪ್ರೆಸ್‌ ವೇಗೆ 50 ಸಾವಿರ ಕೋಟಿ ರೂ. ಖರ್ಚಾಗಲಿದೆ. ಭಾರತೀಯ ರಾ.ಹೆ.ಪ್ರಾಧಿಕಾರ ನಿರ್ಮಾಣ ಹೊಣೆ ಹೊತ್ತಿದ್ದು, 2028ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. 12 ಪಥ ರಸ್ತೆ ಇದಾಗಿದ್ದು, ಸದ್ಯ 8 ಪಥಗಳ ರಸ್ತೆ ನಿರ್ಮಾಣವಾಗಲಿದೆ. ಇದಕ್ಕಾಗಿ 250 ಮೀಟರ್‌ ಅಗಲದ ಭೂಮಿಯನ್ನು ವಶಪಡಿಸಿಕೊಳ್ಳಲಾಗುತ್ತಿದೆ.

ಕರ್ನಾಟಕದ 9 ಜಿಲ್ಲೆಗಳು
ಮಧ್ಯ, ಕಲ್ಯಾಣ ಹಾಗೂ ಉತ್ತರ ಕರ್ನಾಟಕದ 9, ಮಹಾರಾಷ್ಟ್ರದ ಮೂರು ಸಹಿತ ಒಟ್ಟು 12 ಜಿಲ್ಲೆಗಳಲ್ಲಿ ಈ ಹೆದ್ದಾರಿ ಹಾದು ಹೋಗಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ನೆಲಮಂಗಲ, ತುಮಕೂರು ಜಿಲ್ಲೆಯ ಕೊರಟಗೆರೆ, ಮಧುಗಿರಿ, ಚಿತ್ರದುರ್ಗ, ದಾವಣಗೆರೆಯ ಜಗಳೂರು, ವಿಜಯನಗರದ ಕೂಡ್ಲಿಗಿ, ಕೊಪ್ಪಳದ ಯಲಬುರ್ಗಾ, ಗದಗ ಜಿಲ್ಲೆಯ ರೋಣ, ನರಗುಂದ, ಬಾಗಲಕೋಟೆಯ ಬಾದಾಮಿ, ಮುಧೋಳ, ಜಮಖಂಡಿ, ಬೆಳಗಾವಿ ಜಿಲ್ಲೆಯ ಅಥಣಿ ಮೂಲಕ ಹಾಯ್ದು ಮಹಾರಾಷ್ಟ್ರದ ಸತಾರಾ, ಸಾಂಗ್ಲಿ ಮಾರ್ಗವಾಗಿ ಪುಣೆಗೆ ತಲುಪಲಿದೆ.

ಎಲ್ಲಿಂದ ಆರಂಭ?
ಬೆಂಗಳೂರಿನ ಮುತಗಂಡಹಳ್ಳಿಯ ಸ್ಯಾಟ್‌ಲೆçಟ್‌ ರಿಂಗ್‌ ರಸ್ತೆಯಿಂದ ಆರಂಭವಾಗಿ ಪುಣೆಯ ಕಂಜೆÉ ಬಳಿಯ ರಿಂಗ್‌ ರಸ್ತೆಗೆ ಕೊನೆಗೊಳ್ಳಲಿದೆ. ಈ ಹೆದ್ದಾರಿ ಹಾದು ಹೋಗುವ ಜಿಲ್ಲೆಗಳಲ್ಲಿ ಕೈಗಾರಿಕಾಭಿವೃದ್ಧಿ, ಪ್ರವಾಸೋದ್ಯಮ, ರಿಯಲ್‌ ಎಸ್ಟೇಟ್‌ನಲ್ಲಿ ಗಣನೀಯ ಪ್ರಗತಿ, ಉದ್ಯೋಗಾವಕಾಶ ಸೃಷ್ಟಿಗೆ ಅನುಕೂಲವಾಗಲಿದೆ.

ಎರಡು ಏರ್‌ಸ್ಟ್ರಿಪ್‌ಗಳ ನಿರ್ಮಾಣ
ಗ್ರೀನ್‌ಫೀಲ್ಡ್‌ ಎಕ್ಸ್‌ಪ್ರೆಸ್‌ ವೇಯಲ್ಲಿ ಪ್ರತಿ ಗಂಟೆಗೆ 120 ಕಿ.ಮೀ. ವೇಗದಲ್ಲಿ ಸಂಚರಿಸಲು ಗುಣಮಟ್ಟದ ರಸ್ತೆ ನಿರ್ಮಿಸಲು ನಿರ್ಧರಿಸಲಾಗಿದೆ. ಬೆಂಗಳೂರು ಹಾಗೂ ಪುಣೆ ಸಮೀಪ 5 ಕಿ.ಮೀ. ಉದ್ದದ ಎರಡು ಏರ್‌ಸ್ಟ್ರಿಪ್‌ಗಳನ್ನು ಕೂಡ ನಿರ್ಮಿಸುವ ಯೋಜನೆ ಇದರಲ್ಲಿದೆ.

Advertisement

10 ನದಿಗಳ ಮೇಲೆ ಹಾದಿ
ರಾಜ್ಯದ ತುಂಗಭದ್ರಾ, ಮಲಪ್ರಭಾ, ಘಟಪ್ರಭಾ, ಕೃಷ್ಣಾ, ವೇದಾವತಿ, ಮಹಾರಾಷ್ಟ್ರದ ನೀರಾ, ಯೆರಳ, ಚಂದನಾಡಿ, ಅಗ್ರಣಿ, ಚಿಕ್ಕಹಗರ ನದಿಗಳ ಮೂಲಕ ಹಾದು ಹೋಗಲಿದೆ. 6 ಸೇತುವೆ, 55 ಮೇಲ್ಸೇತುವೆಗಳು, 22 ಇಂಟರ್‌ಚೇಂಜ್‌ಗಳು, 14 ರಾಷ್ಟ್ರೀಯ, ರಾಜ್ಯ ಹೆದ್ದಾರಿ ಕ್ರಾಸಿಂಗ್‌ ಪಾಯಿಂಟ್‌ಗಳನ್ನು ನಿರ್ಮಿಸಲಾಗುತ್ತಿದೆ.

ಈಗಿರುವ ಹೆದ್ದಾರಿ ಕಥೆ ಏನು?
ರಾಷ್ಟ್ರೀಯ ಹೆದ್ದಾರಿ 4 ಮೂಲಕ ಈಗ ಬೆಂಗಳೂರಿನಿಂದ ಪುಣೆಗೆ ಚತುಷ್ಪಥ ಸಂಪರ್ಕ ರಸ್ತೆ ಇದೆ. ಸುದೀರ್ಘ‌ 15 ಗಂಟೆಗಳ ಪ್ರಯಾಣ ಇದೆ. ಇದನ್ನು ಅಗಲಗೊಳಿಸುವುದು ಈಗ ಅನಿವಾರ್ಯ. ಆದರೆ ಅದರ ಬದಲು ಹೊಸ ಹೆದ್ದಾರಿ ನಿರ್ಮಾಣವೇ ಸೂಕ್ತ ಎಂದು ಕೇಂದ್ರ ನಿರ್ಧರಿಸಿದೆ ಎನ್ನುತ್ತಾರೆ ಎನ್‌ಎಚ್‌ಎಐ ಅಧಿಕಾರಿಗಳು.

ಪುಣೆ-ಬೆಂಗಳೂರು ಗ್ರೀನ್‌ಫೀಲ್ಡ್‌ ಯೋಜನೆಗೆ ಡಿಪಿಆರ್‌ ಸಿದ್ಧಪಡಿಸಲಾಗುತ್ತಿದೆ. 12 ಪಥ ರಸ್ತೆ ಪೈಕಿ ಸದ್ಯ 8 ಪಥಗಳನ್ನು ನಿರ್ಮಿಸಲಾಗುವುದು. 700 ಕಿ.ಮೀ. ರಸ್ತೆಯನ್ನು 7 ಗಂಟೆಗಳಲ್ಲಿ ಕ್ರಮಿಸಬಹುದು. ಕೊರಟಗೆರೆ ತಾಲೂಕು ಸಹಿತ ಕೆಲವೆಡೆ ಭೂಸ್ವಾಧೀನಕ್ಕೆ ರೈತರಿಂದ ವಿರೋಧ ವ್ಯಕ್ತವಾಗಿದೆ. ಮನವೊಲಿಕೆ ಮಾಡಲಾಗುತ್ತಿದೆ. ಹೊಸ ಸರಕಾರ ರಚನೆಯಾಗುತ್ತಿದ್ದಂತೆ ಕಾಮಗಾರಿಗೆ ಚಾಲನೆ ಸಿಗಲಿದೆ.
– ರಾಘವೇಂದ್ರ, ಎನ್‌ಎಚ್‌ಎಐ, ಗುಣಮಟ್ಟ ಪರಿವೀಕ್ಷಕ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next