ಉಡುಪಿ: ರಾಮದಾಸ ಸಾಮಗ ಅವರ ವಿಶಿಷ್ಟ ಸೇವೆಯಿಂದ ಯಕ್ಷಗಾನದ ಮಾನ್ಯತೆ ವೃದ್ಧಿಸಿದೆ ಎಂದು ಪರ್ಯಾಯ ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಹೇಳಿದರು.
ಅವರು ತುಳುಕೂಟ ಉಡುಪಿ ಅವರು ಆಯೋಜಿಸಿದ್ದ ಮಲ್ಪೆ ರಾಮದಾಸ ಸಾಮಗ ಸ್ಮರಣೆ ಮತ್ತು ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ, ಹಿರಿಯ ಯಕ್ಷಗಾನ ಕಲಾವಿದ ಪುಂಡರೀಕಾಕ್ಷ ಉಪಾಧ್ಯಾಯ ಅವರನ್ನು ಸಮ್ಮಾನಿಸಿ ವÞತನಾಡಿದರು.
ಪರಿಶುದ್ಧವಾದ ವ್ಯಾಕರಣ. ಸ್ಪುಟವಾದ ಮಾತುಗಾರಿಕೆ. ಭಾಷೆಯ ಮೇಲಿನ ವಿಶೇಷವಾದ ಹಿಡಿತ ಸಾಮಗರನ್ನು ಉನ್ನತ ಸ್ಥಾನಕ್ಕೆ ಏರುವಂತೆ ಮಾಡಿತು. ಹಾಸ್ಯ ಪ್ರಜ್ಞೆಯೂ ಅವರಿಗೆ ವರದಾನವಾಗಿತ್ತು ಎಂದು ಶ್ರೀಪಾದರು ಆಶೀರ್ವದಿಸಿದರು.ಮಲ್ಪೆ ಸಾಮಗರ ಹರಿಕಥೆಯ ಸೊಬಗು ಅತಿ ಆಕರ್ಷಣೀಯವಾಗಿರುತಿತ್ತು. ಅಂತಹ ಮಹಾಮಹಿಮರನ್ನು ಸ್ಮರಿಸುವುದು ಅರ್ಥಪೂರ್ಣವೆಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ಆಶೀರ್ವದಿಸಿದರು.
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯ ಪಿ. ಕಿಶನ್ ಹೆಗ್ಡೆ ಬೈಲೂರು, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಅ.ಭಾ. ತುಳು ಒಕ್ಕೂಟದ ಸಾಂಗ್ಲಿ ದಿವಾಕರ ಶೆಟ್ಟಿ , ಎಸ್.ವಿ. ಭಟ್ ಹಾಗೂ ಪ್ರೊ| ಎಂ.ಎಲ್. ಸಾಮಗ, ಪ್ರತಿಭಾ ಸಾಮಗ ಮತ್ತಿತರರು ಉಪಸ್ಥಿತರಿದ್ದರು.
ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿ, ಕಾರ್ಯದರ್ಶಿ ಗಂಗಾಧರ ಕಿದಿಯೂರು ವಂದಿಸಿದರು. ಗೌರವಾಧ್ಯಕ್ಷ ಡಾ| ಭಾಸ್ಕರಾನಂದ ಕುಮಾರ್ ಸಾಮಗರ ಸಂಸ್ಮರಣೆ ಮಾಡಿದರು. ವಿ.ಜಿ. ಶೆಟ್ಟಿ ಮಾನಪತ್ರವನ್ನು ವಾಚಿಸಿದರು. ಸ್ಪರ್ಧೆಯ ಸಂಚಾಲಕ ಚೈತನ್ಯ ಎಂ.ಜೆ. ಕಾರ್ಯಕ್ರಮ ನಿರೂಪಿಸಿದರು.