ಮುಂಬಯಿ: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತೀಯ ವನಿತಾ ತಂಡವನ್ನು ಪ್ರಕಟಿಸಲಾಗಿದೆ. ಈ ಸರಣಿ ಎಪ್ರಿಲ್ 6ರಿಂದ ಆರಂಭವಾಗಲಿದೆ. ಆರಂಭಿಕ ಪೂನಂ ರಾವತ್ ಬದಲಿಗೆ ಆಲ್‌ರೌಂಡರ್ ದಯಲನ್ ಹೇಮಲತಾ ಅವರನ್ನು ಸೇರಿಸಿಕೊಳ್ಳಲಾಗಿದೆ.
ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ತಂಡವನ್ನು ಮುನ್ನಡೆಸುವ ಭಾರವನ್ನು ಮುಂದುವರಿಸಲಿದ್ದಾರೆ. ಮಧ್ಯಮ ಕ್ರಮಾಂಕದ ಆಟ ಗಾರ್ತಿ ದೇವಿಕಾ ವೈದ್ಯ ಅವರನ್ನು ಕರೆಸಿಕೊಳ್ಳಲಾಗಿದೆ. ಕಳೆದ ವರ್ಷದ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಅವರು ಕೊನೆಯದಾಗಿ ಏಕದಿನ ಪಂದ್ಯ ಆಡಿದ್ದರು. ಸದ್ಯ ಸಾಗುತ್ತಿರುವ ಟಿ20 ತ್ರಿಕೋನ ಸರಣಿಯಲ್ಲಿ ಆಡದ ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕ್‌ವಾಡ್ ಕೂಡ ತಂಡಕ್ಕೆ ಮರಳಿದ್ದಾರೆ.
ಸರಣಿಯ ಎಲ್ಲ ಪಂದ್ಯಗಳು ನಾಗ್ಪುರದಲ್ಲಿ ನಡೆಯಲಿವೆ. ಮೊದಲ ಪಂದ್ಯ ಎ. 6ರಂದು ನಡೆಯಲಿದ್ದರೆ ಇನ್ನುಳಿದ ಎರಡು ಪಂದ್ಯಗಳು ಎ. 9 ಮತ್ತು 12ರಂದು ನಡೆಯಲಿವೆ. ಸರಣಿ ಆರಂಭವಾಗುವ ಮೊದಲು ಇಂಗ್ಲೆಂಡ್ ವನಿತೆಯರು ಭಾರತ “ಎ’ ತಂಡದೆದುರು ಎ. 3ರಂದು ಇದೇ ಮೈದಾನದಲ್ಲಿ ಅಭ್ಯಾಸ ಪಂದ್ಯ ವೊಂದನ್ನು ಆಡಲಿದ್ದಾರೆ.
ವನಿತಾ ತಂಡ: ಮಿಥಾಲಿ ರಾಜ್ (ನಾಯಕಿ), ಹರ್ಮನ್‌ಪ್ರೀತ್ ಕೌರ್, ಸ್ಮತಿ ಮಂದನಾ, ಜೆಮಿಮಾ ರಾಡ್ರಿಗಸ್, ದಯಲನ್ ಹೇಮಲತಾ, ವೇದಾ ಕೃಷ್ಣಮೂರ್ತಿ, ದೇವಿಕಾ ವೈದ್ಯ, ಜೂಲನ್ ಗೋಸ್ವಾಮಿ, ಶಿಖಾ ಪಾಂಡೆ, ಪೂಜಾ ವಸ್ತ್ರಾಕರ್, ಏಕ್ತ ಬಿಸ್ತ್, ಪೂನಂ ಯಾದವ್, ಸುಷ್ಮಾ ವರ್ಮ, ರಾಜೇಶ್ವರಿ ಗಾಯಕ್‌ವಾಡ್.
ಭಾರತ “ಎ’ ತಂಡ: ದೀಪ್ತಿ ಶರ್ಮ (ನಾಯಕಿ), ಜೆಮಿಮಾ ರಾಡ್ರಿಗಸ್, ದೇವಿಕಾ ವೈದ್ಯ, ದಯಲನ್ ಹೇಮಲತಾ, ಪ್ರಿಯಾ ಪೂನಿಯಾ, ಅನುಜಾ ಪಾಟೀಲ್, ಮೊನಾ ಮೆಶ್ರಾಮ್, ಸುಕನ್ಯಾ ಪರಿದಾ, ಕವಿತಾ ಪಾಟೀಲ್, ಶಾಂತಿ ಕುಮಾರಿ, ತನುಶ್ರೀ ಸರ್ಕಾರ್, ನುಝಾತ್ ಪರ್ವೀನ್, ರಾಧಾ ಯಾದವ್, ಟಿಪಿ ಕನ್ವರ್.