Advertisement
ಫ್ಲೈ ಓವರ್ ಜೋಡಿಸುವ ‘ಗರ್ಡರ್’ ಅಳವಡಿಕೆ ಇಲ್ಲಿ ನಡೆಯುತ್ತಿದೆ. ಐದಾರು ಗರ್ಡರ್‌ಗಳನ್ನು ಜೋಡಿಸಲಾಗಿದೆ. ಗರ್ಡರ್‌ಗಳನ್ನು ಕಾಮಗಾರಿ ಕೈಗೊಂಡ ಗುತ್ತಿಗೆದಾರರು ನಿಗದಿತ ಸ್ಥಳದಲ್ಲಿ ನಿರ್ಮಿಸಿ, ಬೃಹತ್ ಗಾತ್ರದ ಲಾರಿಯ ಮೂಲಕ ಕಾಮಗಾರಿ ನಡೆಸುವಲ್ಲಿಗೆ ತಂದು ಅದನ್ನು ಅತ್ಯಂತ ಜಾಗ್ರತೆಯಿಂದ ಜೋಡಿಸುತ್ತಾರೆ. ಆದರೆ, ಪಂಪ್‌ವೆಲ್‌ನಲ್ಲಿ ಜೋಡಿಸಿದ ಒಂದು ಗರ್ಡರ್‌ನಲ್ಲಿ ಸ್ವಲ್ಪ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅದನ್ನು ಬದಲಿಸಲು ನಿರ್ಧರಿಸಿ, ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ.
ಪಂಪ್‌ವೆಲ್ ಫ್ಲೈ ಓವರ್ ಕಾಮಗಾರಿ ಕುಂಟುತ್ತಾ ಸಾಗುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕವೂ ಸಾರ್ವಜನಿಕರು ಇದನ್ನು ಅಪಹಾಸ್ಯ ಮಾಡಿದ ಪರಿಣಾಮ ಸುದ್ದಿಯಲ್ಲಿತ್ತು. ಸಂಸದ ನಳಿನ್ ಕುಮಾರ್ ಕಟೀಲು ಇತ್ತೀಚೆಗೆ ಮಂಗಳೂರಿನಲ್ಲಿ ರಾ.ಹೆ. ಪ್ರಾಧಿಕಾರದ ಅಧಿಕಾರಿಗಳ ಜತೆಗೆ ಸಭೆ ನಡೆಸಿ, ತುರ್ತಾಗಿ ಫ್ಲೈ ಓವರ್ ಕಾಮಗಾರಿ ಮುಗಿಸುವಂತೆ ಸೂಚನೆ ನೀಡಿದ್ದರು. ಮಾರ್ಚ್ ವೇಳೆಗೆ ಈ ಫ್ಲೈ ಓವರ್ ಅನ್ನು ಸಾರ್ವಜನಿಕರಿಗೆ ಬಿಟ್ಟುಕೊಡುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಆದರೆ, ಐದು ವರ್ಷಗಳ ಸುದೀರ್ಘ ಅವಧಿಯಿಂದ ಶೇ. 30ರಷ್ಟು ಮಾತ್ರ ಮುಗಿದಿರುವ ಕಾಮಗಾರಿ ಇನ್ನು 5 ತಿಂಗಳ ಒಳಗೆ ಪೂರ್ಣಗೊಳ್ಳುವುದು ಸಾಧ್ಯವೇ ಎಂಬ ಪ್ರಶ್ನೆ ಎದುರಾಗಿದೆ.
Related Articles
ಉಡುಪಿ- ಕಾಸರಗೋಡು ಮಾರ್ಗದ ಪಂಪ್‌ವೆಲ್‌ನಲ್ಲಿ ಈ ಫ್ಲೈ ಓವರ್ ನಿರ್ಮಾಣವಾಗುತ್ತಿದ್ದು, 600 ಮೀ. ಉದ್ದ ಹಾಗೂ 20 ಮೀ. ಅಗಲವಿರಲಿದೆ. ನಂತೂರಿನಿಂದ ಬರುವಾಗ ಕರ್ಣಾಟಕ ಬ್ಯಾಂಕ್ ಪ್ರಧಾನ ಕಚೇರಿಯಿಂದ ಇಂಡಿಯಾನ ಆಸ್ಪತ್ರೆ ಮುಂಭಾಗದವರೆಗೆ ಫ್ಲೈ ಓವರ್ ನಿರ್ಮಾಣವಾಗಲಿದೆ.
Advertisement
ಪಂಪ್‌ವೆಲ್ ಸುತ್ತಮುತ್ತ ವಾಹನದಟ್ಟಣೆ ತೀವ್ರಗೊಂಡ ಪರಿಣಾಮ ಈ ಭಾಗದಲ್ಲಿ ಸಂಚಾರ ಅಸ್ತವ್ಯಸ್ತವಾಗುತ್ತಿರುವುದು ಸಾಮಾನ್ಯ. ಎರಡೂ ಬದಿಯಿಂದ ಓಡಾಟಕ್ಕೆ ಅನುಕೂಲವಾಗುವ ರೀತಿಯಲ್ಲಿ ದ್ವಿಪಥದ ಫ್ಲೈ ಓವರ್ ನಿರ್ಮಾಣದ ಉದ್ದೇಶ ಇರಿಸಲಾಗಿದೆ.
ಪ್ರಸಕ್ತ ರಸ್ತೆಗಿಂತ ನೂತನ ಫ್ಲೈ ಓವರ್ ಸುಮಾರು ಐದೂವರೆ ಮೀ. ಎತ್ತರವಿರಲಿದೆ. ಕಾಮಗಾರಿಗಾಗಿ ಪಂಪ್‌ವೆಲ್‌ನ ಸುಂದರ ವೃತ್ತ ಹಾಗೂ ಕಲಶ ತೆಗೆಯಲಾಗಿದೆ. ಕುಂದಾಪುರದಿಂದ ತಲಪಾಡಿವರೆಗೆ (ಮಧ್ಯೆ ಸ್ವಲ್ಪ ಹೊರತುಪಡಿಸಿ) ಹೆದ್ದಾರಿ ಚತುಷ್ಪಥ ಕಾಮಗಾರಿಯನ್ನು ನವಯುಗ ಕಂಪೆನಿಯವರು ನಿರ್ವಹಿಸಿರುವುದರಿಂದ ಕಾಮಗಾರಿಗೆ ತಗಲುವ ಒಟ್ಟು ವೆಚ್ಚದಲ್ಲಿ ಪಂಪ್‌ವೆಲ್ ಹಾಗೂ ತೊಕ್ಕೊಟ್ಟು ಫ್ಲೈ ಓವರ್ ಖರ್ಚು ಸೇರಿಕೊಂಡಿದೆ.
ಕಾಮಗಾರಿ ಮುಗಿದ ಮೇಲೆ ನಂತೂರಿನಿಂದ ಕಾಸರಗೋಡು ಕಡೆಗೆ ತೆರಳುವವರುಫ್ಲೈ ಓವರ್ ಮೂಲಕ, ಬೆಂಗಳೂರು ಕಡೆಗೆ ತೆರಳುವ ವಾಹನಗಳು ಫ್ಲೈ ಓವರ್‌ನ ಕೆಳಗಡೆಯಿಂದ ಸಾಗಬೇಕಿದೆ. ಕಂಕನಾಡಿ ಕಡೆಯಿಂದ ಬರುವ ವಾಹನಗಳು ಕೂಡ ಕೆಳರಸ್ತೆಯನ್ನೇ ಬಳಸಿಕೊಳ್ಳಬೇಕಿದೆ.
ಕೆಲಸ ಮಾಡುವವರು ಮೂವರು ಮಾತ್ರ!ಪ್ರತಿಷ್ಠಿತ ಪಂಪ್‌ವೆಲ್ ಫ್ಲೈ ಓವರ್ ಕಾಮಗಾರಿ ಅತ್ಯಂತ ಕ್ಷಿಪ್ರಗತಿಯಲ್ಲಿ ನಡೆಯ ಬೇಕಿತ್ತು. ಹೆದ್ದಾರಿ ಕೆಲಸ ಆಗಿ ಫ್ಲೈಓವರ್‌ಗಾಗಿ ಇಷ್ಟು ವರ್ಷ ತಗಲುತ್ತದೆ ಎಂದರೆ ಅಚ್ಚರಿಯೇ. ಬಹುತೇಕ ಸಂದರ್ಭದಲ್ಲಿ ಒಂದಿಬ್ಬರು ಮಾತ್ರ ಇದರ ಕಾಮಗಾರಿ ನಡೆಸುತ್ತಿರುತ್ತಾರೆ. ಹೀಗಾದರೆ, ಈ ಕಾಮಗಾರಿ ಪೂರ್ಣಗೊಳ್ಳುವುದು ಯಾವಾಗ ಎಂಬ ಪ್ರಶ್ನೆ ಕಾಡುತ್ತದೆ. ಮನೆ ಕಟ್ಟುವ ಕೆಲಸಕ್ಕೂ ಹತ್ತಾರು ಜನ ಬೇಕಾಗುತ್ತಾರೆ. ಸಮರೋಪಾದಿಯಲ್ಲಿ ನಡೆಯಬೇಕಾದ ಈ ಕಾಮಗಾರಿಯನ್ನು ಒಂದಿಬ್ಬರು ಮಾಡಿ ದರೆ, ಮಾರ್ಚ್ ವೇಳೆಗೆ ಮುಗಿಯುವುದು ಸಾಧ್ಯವೇ ಎಂಬ ಪ್ರಶ್ನೆ ಸಾರ್ವಜನಿಕರದ್ದು ತೊಕೊಟ್ಟಿನದ್ದೂ ಇದೇ ಸ್ಥಿತಿ
ರಾ.ಹೆ.66ರ ತೊಕ್ಕೊಟ್ಟಿನಲ್ಲಿ ನಿರ್ಮಿಸುತ್ತಿರುವ ಫ್ಲೈ ಓವರ್ ಕಾಮಗಾರಿಗೂ ಗ್ರಹಣ ಹಿಡಿದಂತಾಗಿದೆ. ಕೆಲವು ವರ್ಷದಿಂದ ಇಲ್ಲಿ ಕಾಮಗಾರಿ ನಡೆಯುತ್ತಿದ್ದರೂ, ಇನ್ನೂ ಮುಗಿಯುವ ಹಂತ ಕಾಣುತ್ತಿಲ್ಲ. ಮಾರ್ಚ್ ವೇಳೆಗೆ ಈ ಫ್ಲೈ ಓವರ್ ಬಿಟ್ಟು ಕೊಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರೂ ಕಾಮಗಾರಿ ಪ್ರಗತಿ ಪರಿಗಣಿಸಿದರೆ ಕಷ್ಟ ಎನ್ನುವ ಸ್ಥಿತಿ ಇದೆ. ಇಲ್ಲೂ 600 ಮೀ. ಉದ್ದ, 20 ಮೀ. ಅಗಲದ ಫ್ಲೈ ಓವರ್ ನಿರ್ಮಾಣವಾಗಲಿದೆ. ಇಲ್ಲಿ ಗರ್ಡರ್‌ಗಳ ಅಳವಡಿಕೆ ಆಗಿದ್ದರೂ ತೊಕ್ಕೊಟ್ಟು ಓವರ್‌ಬ್ರಿಡ್ಜ್ ನಿಂದ, ನಾಗನ ಕಟ್ಟೆಯವರೆಗಿನ ಸ್ಥಳದಲ್ಲಿ ಕಾಮಗಾರಿಗಳು ಇನ್ನಷ್ಟೇ ನಡೆಯಬೇಕಿದೆ. ಪ್ರಸ್ತುತ ಇಲ್ಲಿ ಸರ್ವಿಸ್ ರಸ್ತೆ ಇದ್ದರೂ, ನಿತ್ಯ ಸಂಚಾರ ದಟ್ಟಣೆ ಎದುರಾಗಿದೆ. ದಿನೇಶ್ ಇರಾ